Friday, 30 December 2022

 ಶಿಲೆಯೊಡನೆ ಸ್ವಗತ

ಬೆಳಗಿನ ಜನಜಂಗುಳಿ ಕರಗಿ ಹೋಗಿತ್ತು. ರಾತ್ರಿ ಏಳರ ಸಮಯ. ನಾನು ಮತ್ತು ಅವಳು ಇಬ್ಬರೇ ಮುಖಾಮುಖಿ ನಿಂತಿದ್ದೆವು. ಅವಳು -ಕುಂದಾಪುರದ ಬಳಿ ಇರುವ ಕಮಲಶಿಲೆಯ ಬ್ರಾಹ್ಮೀ ದುರ್ಗಾಪರಮೇಶ್ವರೀ. ಹೊರಗೆ ಧೋ ಧೋ ಅಕಾಲಿಕ ಮಳೆ. ಬಂಗಾಳ ಕೊಲ್ಲಿಗೆ ಉಬ್ಬಸವಂತೆ! ಹೀಗಾಗಿ ಅರಬ್ಬಿ ತೀರಕ್ಕೆ ಸಮೀಪವಿರುವ ಇವಳ ತಲೆಯ ಮೇಲೂ ಮಳೆ ! ಎಲ್ಲರ ಮೂಗುಬ್ಬಸವನ್ನು ಕಳೆಯುವವಳು ಮೊದಲು ತಂಪಾಗಬೇಕಲ್ಲ?
ಬೇವಿನ ಗಿಡ ನೆಡುವ ಹರಕೆ ಇತ್ತು. ಅದನ್ನು ತೀರಿಸುವ ಸಲುವಾಗಿ ಬೆಂಗಳೂರಿನಿಂದ ಕುಂದಾಪುರದ ರೈಲು ಹತ್ತಿದ್ದೆವು. 'ವನಮಹೋತ್ಸವ' ಆದ್ದರಿಂದ ಗಂಡನಿಗೆ ಅದರ ಬಗ್ಗೆ ತಕರಾರೇನೂ ಇರಲಿಲ್ಲ. ಆದರೆ ಅಂಗಿ ಕಳಚಿ ದೇವಸ್ಥಾನದ ಒಳಗೆ ಮಾತ್ರ ಬರಲಿಲ್ಲ. ನಾನು ಮಾತ್ರ ಒಳಹೊಕ್ಕೆ.
ಚಿನ್ನದ ಮುಖ, ವಿಧವಿಧ ಆಭರಣ, ರೇಷಿಮೆ ದುಕೂಲ, ಅರಸಿನ ಕುಂಕುಮ ಹೂ ತರತರದ ಅಲಂಕಾರ. ಕನ್ನಡಿಯಂತೆ ಫಳ ಫಳ ಹೊಳೆಯುತ್ತಿದ್ದಳು.
ಗರ್ಭಗುಡಿಯಲ್ಲಿ ಅರ್ಚಕರೂ ಕಾಣಲಿಲ್ಲ. ನನ್ನ ಅವಳ ಏಕಾಂತಕ್ಕೆ ಭಂಗ ತರಬಾರದೆಂದು ಎಲ್ಲೋ ಹೊರಗೆ ಹೋಗಿರಬೇಕು. ನೋಡುತ್ತಲೇ ಇದ್ದೆ ಅವಳು ಮುಡಿದ ಹೂವಿನ ಸೊಬಗನ್ನು ! ಪರಿಮಳ ಆಹ್ಲಾದಕರವಾಗಿ ಉಸಿರಿನೊಂದಿಗೆ ಒಳಹೊರಗೆ ಹಾಯುತ್ತಿತ್ತು. ಮುಟ್ಟಲು ಸಾಧ್ಯವಾಗಲಿಲ್ಲ ಅಷ್ಟೇ. ಇವೆಲ್ಲ ಅಂದ ಚೆಂದಗಳು ಭಕ್ತರ ಕಣ್ಣಿಗಾಗಿ ಅಷ್ಟೇ . ಅವಳು ಉದ್ಭವವಾಗಿರುವುದು 'ಅರೂಪ' ಲಿಂಗಿಯಾಗಿ. ಕಮಲಶಿಲೆ ಆಕಾರದಲ್ಲಿ. ಪೂಜೆಗೊಳ್ಳುವುದೂ ಹಾಗೆಯೇ. 'ಅರೂಪ' ಮತ್ತು 'ಲಿಂಗ' ಇವುಗಳ ಕಲ್ಪನೆಯಲ್ಲಿಯೇ ವೈರುಧ್ಯವಿದೆ. ನಮ್ಮ ಲೋಕಗ್ರಹಿಕೆಯಲ್ಲೇ ಅಸಂಖ್ಯಾತ ವೈರುಧ್ಯಗಳು ಇವೆಯಲ್ಲ? ಮತ್ತೆ ನಮ್ಮ ದೇವರುಗಳೂ ಹಾಗೆಯೇ!
"ನೀನು ಹೀಗೆ ಕನ್ನಡಿಯಾಗಿ ಹೊಳೆದರೆ ಅದರೊಳಗೆ ಎದುರು ನಿಂತ ನಾನೇ ಕಾಣುವೆನಲ್ಲೇ? ನನಗೆ ನಾನೇ ಕಾಣಬೇಕು ನಿಜ. ಆದರೆ ಅದಕ್ಕೂ ಮೊದಲು ನನಗೆ ಜಗತ್ತು ಕಾಣಬೇಕಲ್ಲ? ಕಂಡಕಡೆಯಿಂದ ಕಾಣದಕಡೆಗೆ ಚಲಿಸುವುದೇ ಸರಿಯಲ್ಲವೇ? ನಿನಗೇಕೆ ಮುಖವಾಡ , ವಿಶ್ವಮುಖಿಗೆ? ಬಹುಶಃ ನನ್ನನ್ನು ಅಣಕಿಸಲೆಂದೇ ನೀನು ಚಿನ್ನದ ಮುಖವಾಡ ತೊಟ್ಟಿರಬೇಕು? ನೀನು ಕನ್ನಡಿಯಾಗಿದ್ದೀ! ಕಿಟಕಿಯಾಗಬೇಕು ಅಲ್ಲವೇನೇ? ನನಗೇನೋ ನೀನೊಂದು ಚೌಕಟ್ಟು ಕಿಟಕಿಯ ಚೌಕಟ್ಟೇ ಆಗಿರುವೆ.
ಕಿಟಕಿ ತೆರೆದರೆ ತಾನೇ ಬಯಲು, ಆಕಾಶ ಕಾಣುವುದು?
ಬಯಲನ್ನು, ಆಕಾಶವನ್ನು ಕಾಣಲು ಕಿಟಕಿಯೊಂದು ಮಾಧ್ಯಮ, ಆಧಾರವಷ್ಟೇ. ಎಷ್ಟು ಸಣ್ಣ ಕಿಟಕಿ, ಹಿಂದೆ ನಿಂತು ದಿಟ್ಟಿಸುವ ಕಣ್ಣುಗಳು ಇನ್ನೂ ಸಣ್ಣವು! ಆದರೆ ಅಂತಹ ಸೂಜಿಕಣ್ಣಿನೊಳಗೆ ಆಕಾಶ - ಜಗತ್ತು ಹೇಗೆ ನುಗ್ಗಿಬಿಡುತ್ತದೆ ನೋಡು! ಷರೀಫರ ಕೋಳಿ ಕೋಡುಗನನ್ನು ನುಂಗಿದ ಹಾಗೆ! ನಿನ್ನೆದುರು ನಿಂತ ನನ್ನ ಧಾರ್ಷ್ಟ್ಯದ ಹಾಗೆ.
ನಮ್ಮಲ್ಲಿ ಎಷ್ಟೊಂದು ಕಿಟಕಿಗಳಿವೆ. ಕಿಟಕಿಗಳು ಇರುವುದು ಲೋಕ ಕಾಣುವುದಕ್ಕೆ ಅಲ್ಲವೇನೇ? ಕಂಡ ಲೋಕವನ್ನು ಒಳಗಿಟ್ಟು ನಿಗೂಢ ಕಾಯಬೇಕು, ಧೇನಿಸಬೇಕು! ಬೆಳಕು ಹಾಯದ ಮೇಲೆ ಎಷ್ಟು ಕಣ್ಣುಗಳಿದ್ದರೇನು ?
ನಿನಗೋ ಸಹಸ್ರ ಕೈಕಾಲುಗಳು ಕಣ್ಣುಗಳು! ನೀನೆಷ್ಟು ಕಂಡಿರಬೇಡ? ನಿನ್ನ ಗತಿಯೋ ಅಗಮ್ಯ ದುರ್ಗಮ್ಯ!
ನನಗೂ "ಗೂಡಾನ್ನ ಪ್ರಿಯ"ವೇ ಕಣೇ! ನಿನ್ನ ಅಂಗಳದಲ್ಲಿ ಇಂದು ಅದನ್ನು ಬಡಿಸಿದಷ್ಟು ತಿಂದೆ.
ನೀನು "ಮಾಂಸನಿಷ್ಠೆಯಂತೆ? " ಆದರೆ ನಾನು ನೋಡು ಮಾಂಸಲಳೇ ಆಗಿರುವೆನಲ್ಲ? ಏನು ತಿಂದರೂ ಕೊನೆಗೆ ಕೊಬ್ಬುವುದು ಮಾಂಸವೇ ತಾನೇ?
ನಿನ್ನ ಹಾಗೆ ನನಗೂ ಹುಲಿ/ಸಿಂಹದ ಸವಾರಿ ಮಾಡಬೇಕೆನಿಸುತ್ತದೆ. ಆದರೆ ಏನು ಮಾಡಲಿ ಹೇಳು ಹುಳ ಹುಪ್ಪಟೆಗಳಿಗೂ ಹೆದರುವೆ ನಾನು. ಒಮ್ಮೆ ಕಿಟಕಿ ತೆರೆ ನಿನ್ನ ಸಾವಿರ ಕೈಗಳನ್ನು ನೋಡಬೇಕಿದೆ ನನಗೆ. ಆಗಲಾದರೂ ಪಾಪಕ್ಕೆ ಪಕ್ಕಾದ ನನ್ನ "ಭಯ ಲೋಭ"ಗಳು ಹಿಂಗಿಯಾವು. ಗೋಡೆಗಳು ಬಿದ್ದು ಬಯಲು ಕಾಣಬಹುದು."
ಯಾರೋ ಬಂದರು. ನಮ್ಮ ಸಂಭಾಷಣೆ... ಅಲ್ಲಲ್ಲ ನನ್ನ ಸ್ವಗತ ( ಸಾಲಿಲೊಕಿ) ತುಂಡಾಯಿತು. ಹೊರಗೆ ದೊಡ್ಡ ಪ್ರಾಕಾರ. ಅಲ್ಲಿ ಕುರ್ಚಿಗಳನ್ನು ಇಟ್ಟಿದ್ದರು. ಅಲ್ಲಿ ಹೋಗಿ ಸುಮ್ಮನೇ ಕಣ್ಣು ಮುಚ್ಚಿ ಕುಳಿತೆ. ಅಷ್ಟರಲ್ಲಿ ವಿದ್ಯುತ್ ಪೂರೈಕೆ ತುಂಡಾಯಿತು. ದೀಪಗಳು ಆರಿಹೋದವು. ದ್ವಿಜಾವಂತಿ ರಾಗದ "ಅಖಿಲಾಂಡೇಶ್ವರಿ" ಹಾಡು ಒಳಗಿನಿಂದ ಒದ್ದುಕೊಂಡು ಬಂದಿತು. ತಕ್ಷಣ ನನಗೆ ಅರಿವಿಲ್ಲದಂತೆ ಕಣ್ಣೀರು ಇಳಿಯತೊಡಗಿತು. ಕತ್ತಲಲ್ಲಿ ನಾನೊಬ್ಬಳೇ ! ಅದು ಹೇಗೆ ಗುಡಿಯ ಒಳಗೆ ಅವಳಿದ್ದಳಲ್ಲ? ಹೊರಗೆ ಅವಳದೇ ನೇರಕ್ಕೆ ನಾನು ಕುಳಿತಿದ್ದೆ.
ಬೆಳಿಗ್ಗೆ ಗುಡಿಯ ಮುಂದೆ ಹೂ, ಬಳೆ, ಅರಿಸಿನ ಕುಂಕುಮ, ಪರಿಮಳದ್ರವ್ಯ, ಕುಪ್ಪಸದ ಖಣಗಳ ಸಂತೆ. "ನಾನೇನು ಬಳೆ ತೊಟ್ಟುಕೊಂಡಿದ್ದೇನಾ" ಎಂದು ಮೀಸೆ ಹುರಿಮಾಡುವ ಬಹದ್ದೂರ್ ಗಂಡೂ ಕೂಡ ನತಮಸ್ತಕನಾಗಿ ಇಲ್ಲಿ ಹೂ ಕುಂಕುಮ, ಬಳೆಗಳು ತುಂಬಿದ ಹರಿವಾಣ ಹಿಡಿದು, ಅಂಗಿ ಕಳಚಿ ದೈನ್ಯನಾಗಿ ನಿಲ್ಲುತ್ತಾನೆ -ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಹೊರಗಿನ ಸಮಾಜಕ್ಕೆ ಇರುವ ಒಂದು ಡಯಲಕ್ಟಿಕಲ್ ಸಂಬಂಧ ಸ್ವರೂಪದ ಪ್ರತೀಕದಂತೆ. ಹರಿವಾಣ ಅಣಕಿಸುತ್ತದೆ. "ಎಷ್ಟು ಬಳೆ ಹಾಕಿಕೊಂಡರೂ ಸಾಲುವುದಿಲ್ಲ ಅಮ್ಮನಿಗೆ ನೋಡು" ಎಂದು ದೇವೀ ಉಪಾಸಕಿ ಶೋಭಾ ಶಣೈಅವರು ತಮ್ಮ ಅಮ್ಮನನ್ನು ಕೊಂಡಾಡುತ್ತಿದ್ದುದು ನೆನಪಾಗುತ್ತದೆ.
(ಬಳೆ, ಕುಂಕುಮಕ್ಕೆ ಹಚ್ಚಿಕೊಳ್ಳಬೇಕೆಂದಲ್ಲ. ಕೆಲವರು ತೊಡಲೇ ಬೇಕು, ಇನ್ನು ಕೆಲವರು ತೊಡಲೇ ಬಾರದು ಎನ್ನುವ ನಿಷೇಧದ ಬಗ್ಗೆ ದನಿ ಎತ್ತಬೇಕಾಗಿದೆ. ಬಳೆ ತೊಡುವ ಕಾರಣಕ್ಕಾಗಿಯೇ ದುರ್ಬಲ ಎನ್ನುವುದಾದರೆ. ಅದು ದೌರ್ಬಲ್ಯವಲ್ಲ ಶಕ್ತಿ ಎಂದು ಸಾಬೀತು ಪಡಿಸುವ ಅಗತ್ಯ ಇದೆ)
ಜಾತಿವಿಜಾತಿಯನ್ನದೇ ಇಲ್ಲಿ ಅನ್ನದಾಸೋಹದ ಪುಣ್ಯಕಾರ್ಯ ನಡೆಯುತ್ತದೆ. ಅಮ್ಮನಲ್ಲವೇ ? ಸದಾ ಅವಳಿಗೆ ತನ್ನ ಮಕ್ಕಳ ಹೊಟ್ಟೆಯದೇ ಚಿಂತೆ.
ಟಿಪ್ಪು ಮತ್ತು ಹೈದರಾಲಿ ಈ ದೇವಾಲಯವನ್ನು ರಕ್ಷಿಸಿ ಪೋಷಿಸಿದರಂತೆ ಆ ಕಾರಣವಾಗಿ ಅವರ ನೆನಪಿನಲ್ಲಿ ಸಂಜೆಯ ಹೊತ್ತು ಸಲಾಂ ಪೂಜೆ ನಡೆಯುತ್ತದೆ ಎಂದು ಗೂಗಲ್ ಹೇಳುತ್ತದೆ.
ಇಲ್ಲಿ ಶಿವ ವಿಷ್ಣು ಗಣಪತಿ ಇತ್ಯಾದಿ ದೇವತೆಗಳು ನೆಲೆಸಿರುವುದು ಗರ್ಭಗುಡಿಯ ಹೊರಗಿನ ಪ್ರಾಕಾರದಲ್ಲಿ. ಅವಳ ಮನೆಯೆಂದ ಮೇಲೆ ಅವಳೇ ಒಡತಿಯಾಗಬೇಕಲ್ಲವೇ? ಜೊತೆಗೆ ಸಿಂಹ /ಹುಲಿ ಬೇರೆ! ಇದು ಪ್ರಳಯಭಯಂಕರಿಯ ಹೊತ್ತ ಸಿಂಹವಲ್ಲ. ಬದಲಾಗಿ ಆತ್ಮದ ಗುಹೆಯೊಳಗೆ ಇರುವ ಕೇಸರಿ! ಅದನ್ನು ಸಾತ್ ಮಾಡಿಕೊಂಡವಳು ದುರ್ಗಾಪರಮೇಶ್ವರೀ! ಗುಹೇಶ್ವರೀ! ಅವಳ ಮೂಲ ಸ್ಥಳವೂ ಒಂದು ಗುಹೆಯೇ. ದೇವಸ್ಥಾನದಿಂದ ಎರಡು ಕಿ.ಮೀ ಎತ್ತರದ ಗುಹೆಯೊಳಗೆ ಅವಳ ವಾಸ. ಈ ಜಾಗಕ್ಕೆ ಸುಪಾರ್ಶ್ವ ಮುನಿ ಗೋರಕ್ಷನಾಥ ಮುಂತಾದ ಹೆಸರುಗಳು ಲಗತ್ತಾಗಿವೆ. ಬಹುಶಃ ಅವರು ಇಲ್ಲಿ ಬಂದು ತಪಸ್ಸು ಮಾಡಿರಬೇಕು!
ನಮಗೋ ಗುಹೆಯ ಹೊರಗೇ ಅಲೆಯುವುದರಲ್ಲಿ ಆಸಕ್ತಿ. ಈ ಅಲೆತದಲ್ಲಿ ದಾರಿಯ ತೋರು ಫಲಕಗಳೇ ದಾರಿಗಳಾಗಿಬಿಡುತ್ತವೆ. ನಮ್ಮ ದಾರಿಯನ್ನು ನಾವು ನಡೆಯುವುದೇ ಇಲ್ಲ. ಫಲಕಗಳನ್ನು ಹಿಡಿದುಕೊಂಡು ಪರಸ್ಪರ ಗುದ್ದಾಡುವುದರಲ್ಲೇ ವ್ಯಸ್ತರಾಗಿಬಿಡುತ್ತೇವೆ. ಹೊರಗೇ ಉಳಿದುಬಿಡುತ್ತೇವೆ.
" ಈ ಒಡಲು ಕಲ್ಪಾಂತರ ಸ್ಥಾಯಿಯೇ ಪೇಳಾ?" (ಪಂಪ)
Metikurke Ramaswamy Kamala, Prathibha Nandakumar and 69 others
33 comments
Like
Comment
Share

 ಕುಪ್ಪಳಿಯ ಕಾವಳದೊಳಗೆ ಮುಂಬಯಿ ಸೃಜನಾ ಸದಸ್ಯೆಯರು

ಗಿರಿಜಾಶಾಸ್ತ್ರಿ. ಮುಂಬಯಿ 2019 Dec
ಪಡುವಣ ದಿಕ್ಕಿನಲಿ ಕೆಂಪಾದ ಸಂಜೆ ಕರಗುತ್ತಾ ಮೆಲ್ಲ ಮೆಲ್ಲನೆ ಕತ್ತಲು ಗವ್ವೆನ್ನತ್ತಾ ಒಳಸುರಿಯುತ್ತಿತ್ತು. ಅಲ್ಲೊಂದು ಇಲ್ಲೊಂದು ಗೂಡಿಗೆ ಹಾರುವ ಹಕ್ಕಿಯ ಚೀಂಗುಟ್ಟುವ ಸದ್ದು ಬಿಟ್ಟರೆ ಸುತ್ತಲೂ ‘ಚಿನ್ಮೌನ’. ಕವಿಶೈಲದಿಂದ ಕೆಳಗೆ ಜಾರಿದ ಜಾಡಿನಲ್ಲಿ ಕಾಡಿನ ಪೊದೆಯೊಳಗೆ ‘ಮನುಜನಾಕಾರದಲಿ ಮೊರಡಾಗಿ’ನಿಂತ ಶಿಲಾತಪಸ್ವಿ. ಅದರ ಸುತ್ತಲೂ ನಾವು ಸೃಜನಾದ ಗೆಳತಿಯರು. ಶಿಲಾತಪಸ್ವಿಯ ಬುಡಕ್ಕೆ ಕುಳಿತ ಶಿವಾರೆಡ್ಡಿಯವರು. ಜೊತೆಗೆ ಸೃಜನಾ ಬಳಗವನ್ನು ಕಾಡಿನೊಳಗೆ ಚಾರಣ ಮಾಡಿಸುತ್ತ್ತಿದ್ದ ವಿಮರ್ಶಕಿ, ಕತೆಗಾರ್ತಿ ಡಾ. ಎಲ್.ಸಿ ಸುಮಿತ್ರಾ. ಆ ಶಿಲಾತವಸಿಯು ಶಿವಾರೆಡ್ಡಿಯವರ ಮೈಹೊಕ್ಕು ನುಡಿಸುತ್ತಿತ್ತು. ಇಡೀ ಕಾಡಿಗೆ ಕಾಡೇ ಕಿವಿಯಾಲಿಸಿ ಕೇಳುತ್ತಿತ್ತು. ಕಳಂಕವಿಲ್ಲದ ಆಕಾಶ ತದೇಕ ನೋಡುತ್ತಿತ್ತು. ‘ನರತನಕೆ ಹಾತೊರೆ’ಯುವ ಶಿಲಾತಪಸ್ವಿಯು ತನ್ನೊಳಗಿನ ‘ಆದಿಮ ಲಯಾಗ್ನಿ’ಯನ್ನು ಹೊರಸೂಸುತ್ತಿತ್ತು. ಕಾಡೊಳಗಿನ ಹೂಗಳು ‘ಗಾಳಿಹೆಜ್ಜೆಯ ಹಿಡಿದು’ಎಂತಹುದೋ ಸುಗಂಧ ಬೀರುತ್ತಿದ್ದವು. ಸಿಬ್ಬಲುಗುಡ್ಡೆಯ ತುಂಗೆ ವಾತಾವರಣವನ್ನು ತಂಪಾಗಿಸಿದ್ದಳು. ಹೀಗೆ ಪಂಚಭೂತಗಳ ಅಸ್ತಿತ್ವವನ್ನು ಪಂಚೇಂದ್ರಿಯಗಳ ಮೂಲಕ ಸಾಕ್ಷಾತ್ಕರಿಸಿಕೊಂಡ ಅಲೌಕಿಕ ಅನುಭವವೊಂದಕ್ಕೆ ತೆರೆದುಕೊಂಡಂತೆ ಗೆಳತಿಯರ ಮೈ ರೋಮಾಂಚನಗೊಂಡಿದ್ದವು. “ಅಲ್ಲಿ ಕಾಲವಿರಲಿಲ್ಲ; ದೇಶವಿರಲಿಲ್ಲ; ಗ್ರಹಕೋಟಿ ಶಶಿಸೂರ್ಯ ತಾರಕೆಗಳಿರಲಿಲ್ಲ; ಬೆಳಕು ಕತ್ತಲೆ ಎಂಬ ಭೇದವಿನಿತಿರಲಿಲ್ಲ; ಮಮಕಾರ ಶೂನ್ಯದಲಿ ಮುಳುಗಿದ್ದುವೆಲ್ಲ.” ಇದು ಶಿಲಾತಪಸ್ವಿಯ ಮುಂದೆ ನಿಂತ ಕುವೆಂಪು ಅವರ ಅನುಭವ ಮಾತ್ರ ಆಗಿರಲಿಲ್ಲ ಬದಲಾಗಿ ಕುವೆಂಪುವಿನ ತರುವಾಯ ಅನೇಕ ವರುಷಗಳ ನಂತರ ಅದೇ ಹಾದಿ ತುಳಿದ ಗೆಳೆತಿಯರ ಅನುಭವವೂ ಅಗಿದ್ದಿತು.
ಹೊರಜಗತ್ತಿನ ನೆಟ್ ವರ್ಕ್ನಿಂದ ಕಡಿದುಕೊಂಡ ಕುಪ್ಪಳಿಯ ಆಸುಪಾಸಿನ ಈ ಸಹ್ಯಾದ್ರಿಯ ಹುಚ್ಚುಕಾಡು, ಸದ್ದುಗದ್ದಲವೇ ಸರ್ವಸ್ವವಾದ ಮುಂಬಯಿ ಲೋಗರಿಗೆ ಮೌನದ ಪರಿಚಯಮಾಡಿಸುತ್ತಾ ಒಂದು ಅದ್ಭುತ ಲೋಕವನ್ನು ತೆರೆಯಿತು. ಇಂತಹ ಒಂದು ಅದ್ಭುತ ಲೋಕವನ್ನು ತೆರೆದು ತೋರಿಸಲು ಅಂತಹ ಲೋಕದ ಹುಚ್ಚು ಯಾರಿಗಾದರೂ ಹಿಡಿದಿರಬೇಕು. ಅಂತಹ ಹುಚ್ಚನ್ನು ಹತ್ತಿಸಿಕೊಂಡವರು ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಕೆ.ಸಿ. ಶಿವಾರೆಡ್ಡಿಯವರು. ಕುವೆಂಪು ಅಧ್ಯಯನವೆಂಬ ಪಠ್ಯಪುಸ್ತಕದಲ್ಲಿ, ಕೇವಲ ಸಂಶೋಧನೆಯಲ್ಲಿ ತೊಡಗಿಕೊಳ್ಳುವ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರುಗಳಿಂದ ‘ಕುವೆಂಪು ಶಿಖರಗಳ’ ಚಾರಣ ಸಾದ್ಯವಾಗುವುದಿಲ್ಲ. ಅದು ಸಾಧ್ಯವಾಗುವುದು ಅಲ್ಲಿನ ‘ಹುಲ್ಲಲಿ, ಕಲ್ಲಲಿ, ಮಣ್ಣಲಿ’ ಹೂಗಿಡ ಹಕ್ಕಿಗಳಲ್ಲಿ ಚೈತನ್ಯವನ್ನು ಕಾಣುವ ‘ತೆಗೆ ಜಡವೆಂಬುದೆ ಸುಳ್ಳು’ ಎನ್ನುವ ನಿಷ್ಠುರ ಸತ್ಯವನ್ನು ಎದೆಗಪ್ಪಿಕೊಳ್ಳುವುದರಿಂದ, “ಸೃಷ್ಟಿ ಸೌಂದರ್ಯದೊಲ್ಮೆಯ ಸೃಷ್ಟಿಕರ್ತಂಗೆ ಪೂಜೆಗೈಯು” ವುದರಿಂದ ಮಾತ್ರ ಸಾಧ್ಯ. ಅದಕ್ಕೆ ಸಾಕ್ಷಿಯೆಂಬಂತೆ, ನಾವು ಕುಪ್ಪಳಿಗೆ ತಲಪಿದ ಮಾರನೆಯ ಬೆಳಗ್ಗೆ ಐದುಗಂಟೆಗೇ ನಾವು ಇಳಿದು ಕೊಂಡ ಗೆಸ್ಟ್ ಹೌಸಿನ ಮುಂದೆ ಶಿವಾರೆಡ್ಡಿಯವರು ಹಾಜರಾಗಿದ್ದರು. ನಾವೇನು ಅವರನ್ನು ಕರೆದಿರಲಿಲ್ಲ. ಆದರೆ ಅವರಾಗಿಯೇ ಸಹ್ಯಾದ್ರಿಯ ಕಾಡಿನಲ್ಲಿ ನಮ್ಮನ್ನು ಮುನ್ನಡೆಸಲು ಮುಂದಾಗಿದ್ದರು. ಹಾಗೆಯೇ ಸುಮಿತ್ರಾ ಅವರನ್ನೂ ಸಹ ನಾವು ನಿರೀಕ್ಷಿಸಿರಲಿಲ್ಲ. ಮುಂಬಯಿಯಿಂದ ದಣಿದು ಬಂದಿದ್ದ ನಮ್ಮ ಸೃಜನಾದ ಸದಸ್ಯೆಯರಿಗೆ ಅವರ ತೀರ್ಥಹಳ್ಳಿಯ ತಂಪು ತೋಟದ ಮನೆಯಲ್ಲಿ ತಂಪು ಪಾನೀಯವನ್ನು ಕುಡಿಸಿ ನಮ್ಮೊಡನೆ ಬಂದು ಎರಡು ದಿನಗಳಿದ್ದು ನಮ್ಮ ಪ್ರವಾಸವನ್ನು ಸಾರ್ಥಕಗೊಳಿಸಿದರು.
ಬೆಳಗಿನ ಝಾವ ನಾವು ಹೊರಟಿದ್ದು ಈಗಾಗಲೇ ಕನ್ನಡ ಸಾಹಿತ್ಯದಲ್ಲಿ ಆರ್ಕಿಟೈಪ್ ಆಗಿಬಿಟ್ಟಿರುವ ನವಿಲುಕಲ್ಲಿಗೆ- ಸೂರ್ಯೋದಯ ನೋಡಲು. ಆದರೆ ನಮಗೆ ಕಂಡದ್ದು ಕೆಂಪು ಉಂಡೆಯ ಬಾಲಸೂರ್ಯನಲ್ಲ. ಬದಲಾಗಿ ತಿಮ್ಮಿಯನ್ನು ವಿಸ್ಮಯಗೊಳಿಸಿದ ‘ಕಾವಳ’. ದಾರಿಯುದ್ದಕ್ಕೂ, ಕುವೆಂಪು ಅವರು ನಡೆದುಕೊಂಡೇ ನವಿಲುಕಲ್ಲಿನ ನೆತ್ತಿಗೆ ಹೋಗುತ್ತಿದ್ದುದು, ಬಿ.ಎಂ.ಶ್ರೀಯವರು ಒಮ್ಮೆ ಅವರ ಜೊತೆಗೂಡಿದ್ದು, ಬೃಹತ್ತಾದ ಬಂಡೆಯಮೇಲೆ ಸ್ವತಃ ಕುವೆಂಪು ಅವರೇ ನಾಮಕರಣ ಮಾಡಿ ಕೆತ್ತಿದ ‘ಕವಿಶೈಲ’, ಅಲ್ಲಿ ಧ್ಯಾನಸ್ಥನೆಲೆಯಲ್ಲಿ ಕವಿತೆಗಳು ರೂಪುಗೊಳ್ಳುತ್ತಿದ್ದ ಬಗೆ ಮುಂತಾದ ವೈಯಕ್ತಿಕ ವಿವರಗಳ ‘ನೆನಪಿನ ದೋಣಿ’ಯಲ್ಲಿ ನಮ್ಮನ್ನು ಈ ಇಬ್ಬರು ಅತಿಥೇಯರೂ ತೇಲಿಸುತ್ತಿದ್ದರು. ಅದಕ್ಕೆ ಪೂರಕವಾಗಿ ಸೃಜನಾದ ಸದಸ್ಯೆಯರು ನಾಡಗೀತೆ ಹಾಡಿ ವಾತಾವರಣಕ್ಕೊಂದು ಹೊಸ ಮೆರಗನ್ನಿತ್ತರು.
ಗುತ್ತಿ, ತಿಮ್ಮಿ, ಐತ, ಪೀಂಚಲು, ಸುಬ್ಬಮ್ಮನ ತವರು ಮನೆ, ಹೂವಯ್ಯ ತನ್ನ ಓದುವ ಕೋಣೆಯಿಂದ ಕೆಳಗಿನ ತೊಟ್ಟ್ಟಿಯಲ್ಲಿ ಕಾಣುವ ಮನೆ ಪಾಲಾಗುವ ದೃಶ್ಯ, ಅವನು ತಪಸ್ಸಿಗೆ ಕುಳಿತ ಜಾಗ, ಚಿನ್ನಮ್ಮ ಬಾಲಕಿಯಾಗಿದ್ದಾಗ ಅತೀಂದ್ರಿಯ ಅನುಭವವನ್ನು ಪಡೆವ ದಾರಿ... ಹೀಗೆ ಕುವೆಂಪು ಅವರ ಕಾದಂಬರಿಯ ಪಾತ್ರಗಳೂ ಅವರ ಕವಿತೆಗಳೂ ನಮ್ಮೊಡನೆ ಚಾರಣಮಾಡುತ್ತಿದ್ದವು. ಹಾಗೆಯೇ ಕುವೆಂಪು ಒಲಿದಿರಬಹುದಾದ ಮತ್ತು ಕುವೆಂಪುವಿಗೆ ಒಲಿದಿರಬಹುದಾದ ಹೆಣ್ಣುಗಳ ಸೆನ್ಷುಯೆಲ್ ಎನ್ನಬಹುದಾದ ಕಾದಂಬರಿಯ ಅಚೆಗಿನ ವಿವರಗಳೂ ಸುಳಿದು ಗೆಳತಿಯರ ಕಿವಿಗಳನ್ನು ನೆಟ್ಟಗಾಗಿಸಿದ್ದವು. ಒಮ್ಮೊಮ್ಮೆ ಕುವೆಂಪು ಅವರ ಕುಪ್ಪಳಿಯಲ್ಲಿ ತೇಜಸ್ವಿಯರೂ ಬಂದು ಹೋಗುತ್ತಿದ್ದರು.
ರಾತ್ರಿ ಮಲಗುವ ಮುನ್ನ ಗೆಸ್ಟ್ ಹೌಸಿನ ಅವರಣದಲ್ಲಿ ಗೆಳತಿಯರಿಂದ ಕುವೆಂಪು ಕವಿತೆಗಳ ಗಾಯನ, ಸಾಹಿತ್ಯ ಕೃತಿಗಳ ಚರ್ಚೆ, ಅಂದಿನ ಚಾರಣಕ್ಕೆ ಮುಕ್ತ್ತಾಯಹಾಡುತ್ತಿದ್ದವು. ಶಿವಲಿಂಗಕ್ಕೆ ನೀರನ್ನೆರೆಯುತ್ತಿದೆಯೋ ಎಂಬಂತೆ ಉದ್ದಬಾಲದ ‘ಬುಲ್ಲೇರಿ’ ಹಕ್ಕಿಯೊಂದು ನೀರಿನಲ್ಲಿ ತನ್ನ ಬಾಲವನ್ನು ಒಮ್ಮೆ ಅದ್ದಿ ಫಕ್ಕನೆ ಮೇಲೆ ಹಾರುವ, ಸೃಜನಾದ ನೇತಾರೆ ಸುನೀತಾಶೆಟ್ಟಿಯವರ ”ಎಂತ ಸೋಜಿಗಾ” ಎಂಬ ತುಳು ಕವಿತೆಯೊಂದರ ದೃಶ್ಯ, ಅದು ಸೃಷ್ಟಿಸಿದ ಆವರಣ ಮಾತ್ರ ಎಂದಿಗೂ ಮರೆಯುವಹಾಗೇ ಇಲ್ಲ.
ಕುಪ್ಪಳಿಯಲ್ಲಿರುವ ಹಂಪಿ ವಿ.ವಿ.ಯ ವಿಭಾಗದಲ್ಲಿ ಕುಳಿತು ಡಾ. ಶಿವಾರೆಡ್ಡಿಯವರ ಆದರಾತಿಥ್ಯವನ್ನುಂಡ ಬಳಿಕ, ‘ಶ್ರೀರಾಮಾಯಣ ದರ್ಶನಂ’ನ ಭಾಗವೊಂದನ್ನು ಸುಶ್ರಾವ್ಯವಾಗಿ ಡಾ. ಸುನೀತಾಶೆಟ್ಟಿಯವರು ಹಾಡಿದರೆ, ಉಳಿದ ಸದಸ್ಯೆಯರು ತಮ್ಮ ರಚನೆಗಳನ್ನು ಅವುಗಳ ಕುರಿತ ಅನುಭವಗಳನ್ನು ಹಂಚಿಕೊಂಡರು.
ಇಂದಿನ ಲೇಖಕರು ತಮ್ಮ ಪರಂಪರೆಯ ಜೊತೆಗೆ ಗುರುತಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಹಾಗೆ ಮಾಡಿಕೊಂಡಾಗ ಮಾತ್ರ ಗಟ್ಟಿ ಸಾಹಿತ್ಯ ಕೃತಿಯೊಂದು ಹೊರಬರಲು ಸಾಧ್ಯ. ಹೀಗೆ ಇಂದಿನ ಲೇಖಕರು ತಮ್ಮ ಪರಂಪರೆಯನ್ನು ಆತ್ಮಸಾತ್ ಮಾಡಿಕೊಳ್ಳಲು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನಗಳಂತಹ ಸಂಸ್ಥೆಗಳು ಸಹಾಯ ಮಾಡುತ್ತವೆ. ಅವು ಕೇವಲ ಸಂಬಂಧಪಟ್ಟ ಕವಿಯನ್ನು ಬೆಳಕಿಗೆ ತರುವುದಲ್ಲದೇ ಕಿರಿಯ ತಲೆಮಾರಿನ ಲೇಖಕರಿಗೆ ಸರಿಯಾದ ಮಾರ್ಗವನ್ನೂ ಹಾಕಿಕೊಡುತ್ತವೆ. ಇಂತಹ ಕೆಲಸವನ್ನು ಅದ್ಭುತವಾಗಿ ಈ ಪ್ರತಿಷ್ಠಾನ ಮಾಡುತ್ತಿದೆ. ಕುವೆಂಪು ಅವರ ಕೃತಿಗಳ ದೇಶಕಾಲವನ್ನು ಅವುಗಳಲ್ಲಿ ಅಡಗಿರುವ ರಹಸ್ಯಗಳನ್ನು, ಅವೆರಡರ ನಡುವಿನ ಸಂಬಂಧಾಂತರಗಳನ್ನು ಅದ್ಭುತ ಛಾಯಾಚಿತ್ರಗಳ ಮೂಲಕ ಶಿವಾರೆಡ್ಡಿಯವರು ಹೊರ ತಂದಿರುವ ‘ಅನುರಕ್ತಿ’ ಎಂಬ ಬೃಹತ್ ಗ್ರಂಥ ಅವರ ಮೇರೆವರಿಯದ ಕುವೆಂಪು ಪ್ರೇಮಕ್ಕೆ ಸಾಕ್ಷಿಯಾಗಿದೆ. ಜೀಂಗುಡುವ ಕಾಡಿನೊಳಗೆ ಒಂಟಿಯಾಗಿದ್ದುಕೊಂಡು, ಕುವೆಂಪು ಅವರನ್ನು ಆತ್ಮಸಾತ್ ಮಾಡಿಕೊಳ್ಳಲು ಅವರು ಪಡುತ್ತಿರುವ ಹರಸಾಹಸ ನೋಡಿದರೆ ಅವರ ಈ ಪ್ರೇಮದ ಸ್ವರೂಪ ಅರ್ಥವಾಗುತ್ತದೆ. ಕುವೆಂಪು ಸ್ಪರ್ಶಿಸಿದ, ಕಾಡಿನ ಮೂಲೆಮೊಡಕುಗಳನ್ನೆಲ್ಲಾ ನಿಖರವಾಗಿ ಬಲ್ಲ ಆಧುನಿಕ ಗುತ್ತಿಯಂತೆ ಅವರು ನಮಗೆ ಕಾಣಿಸಿದರು. ಕುವೆಂಪು, ಅವರ ಮೈಮೇಲೆ ಎಷ್ಟರಮಟ್ಟಿಗೆ ಎರಗಿದ್ದಾರೆಂದರೆ, ಕನ್ನಡದ ಹೊಸ ಬರಹಗಳೆಲ್ಲಾ ಅವರಿಗೆ ‘ಕುವೆಂಪೋಚ್ಚಿಷ್ಟ’ ವಾಗಿಯೇ ಕಾಣಿಸುತ್ತವೆ. ಇದು ಒಂದು ಅತಿರೇಕವಾಗಿಯೇ ಕಂಡರೂ, ಕವಿಯೊಬ್ಬನನ್ನು ಅಖಂಡವಾಗಿ ‘ಕಾಣಲು’ ಇಂತಹ ಅತಿರೇಕಗಳ ಬೆನ್ನುಹತ್ತುವ ಅವಶ್ಯಕತೆ ಇದೆ. ಹಾಗಿಲ್ಲದಿದ್ದರೆ ವ್ಯಾಸನ ನಂತರ ಯಾವ ಸಾಹಿತ್ಯವೂ ಹುಟ್ಟುತ್ತಲೇ ಇರಲಿಲ್ಲ. ಹೀಗಾಗಿ ಶಿವಾರೆಡ್ಡಿಯವರ ಈ ಸಿಹಿಹುಚ್ಚನ್ನು ನಾವು ಚಿಟಿಕಿ ಉಪ್ಪಿನೊಂದಿಗೇ (with a pinch of salt) ಸೇವಿಸಬೇಕು