Tuesday, 19 December 2017

rihaana and me

ನಮ್ಮ ಮನೆಯ ಕೆಲಸದ ಸಹಾಯಕಿ ರಿಹಾನಾ, ದನದ ಮಾಂಸ ತಿನ್ನುವ ವಿಷಯ ಬಂದಾಗ, ಶಾಂತಂ ಪಾಪಂ ಎನ್ನುವಂತೆ ಎರಡು ಕೆನ್ನೆ ಗಳನ್ನೂ ಮುಟ್ಟಿ ಕೊಂಡು ' ಹಮಾರಾ ಗಾಂವ್ ಮೇ ಕೋಯೀ ಭೀ ಮುಸಲ್ಮಾನ್ ಗಾಯ್ ನಹೀಂ ಖಾತಾ' ಎಂದಳು. 'ಏಕೆ ನಿಮ್ಮ ಧರ್ಮ ದಲ್ಲಿ ಅದರ ನಿಷೇಧ ಇಲ್ಲವಲ್ಲಾ' ಎಂದು ನಾನು ಹೇಳಿದ್ದಕ್ಕೆ ' ನಹೀಂ ಆಂಟೀ ಹಮ್ ಉಸ್ಕಾ ದೂಧ್ ಪೀತೇ ಹೈಂ ನಾ ಓಂ ಹಮಾರಿ ಮಾ ಹೈಂ' ಎಂದಳು.
ಅವಳು ಇನ್ನೂ ಮುಂದುವರೆಯುತ್ತಾ, ಸಂಜೆಯ ಹೊತ್ತು ನಾವು ಕಡಾಯಿ, ಬಾಣಲೆ ಮುಂತಾದವುಗಳನ್ನು ತಿಕ್ಕುವುದಿಲ್ಲ -ಕೊಟ್ಟಿಗೆಯಲ್ಲಿ ಮಲಗಿರುವ ಜಾನುವಾರುಗಳಿಗೆ ಎಚ್ಚರವಾಗಬಹುದು ಎಂದು.
ಮಾಘ ಮಾಸದ ಅಮಾವಾಸ್ಯೆಯ ದಿನ ಬಸವಣ್ಣನ ಹಬ್ಬವಂತೆ. ಅವಳ ಊರಿನ ಸಮಸ್ತರೂ ಹಿಂದು ಮುಸಲ್ಮಾನ್ ಎನ್ನದೇ ಎಲ್ಲರೂ ಹೊಳೆಯಿಂದ ತಂದ ಮಣ್ಣಿನಿಂದ ಬಸವಣ್ಣನನ್ನು ಮಾಡಿ ಪೂಜಿಸುತ್ತಾರಂತೆ.
' ಹಮಾರ ಗಾಂವ್ ಮೇ ಕಭೀಭಿ ಹಿಂದು ಮುಸಲ್ಮಾನೋಂಕೆ ಬೀಚ್ ಜಗಡಾ ನಹೀಂ ಹೋತಾ, ಹಮಾರೇ ಪಟೇಲ ಜಗಡಾ ಕರ್ನೇ ನಹೀಂ ದೇತಾ' ಎನ್ನುತ್ತಾಳೆ.
ಕೋಳಿ ತಕ್ಕಡಿಗೆ ಹಾಕುವಾಗಲೇ ಗೊತ್ತು ಇನ್ನೇನು ಅದರ ಕಥೆ ಮುಗಿಯಲಿದೆ ಎಂದು. ಅದನ್ನು ನೋಡಬಾರದೆಂದೇ ಬೇಗನೇ ಕಸಾಯಿ ಅಂಗಡಿಯನ್ನು ದಾಟಿ ಬಿಡುತ್ತೇನೆ. ಆದರೆ ಕೋಳಿಯನ್ನು ಕಚಕ್ ಎನ್ನಿಸಿ ದೊಡ್ಡ ಪ್ಲಾಸ್ಟಿಕ್ ಡ್ರಮ್ ಗೆ ಹಾಕಿದಾಗ ಎರಡು ಸೆಕೆಂಡ್ ಭೂಕಂಪ ವಾದಂತೆ ಆ ಡ್ರಮ್ ಡಬ ಡಬ್ ಶಬ್ದಮಾಡುತ್ತಾ ಸ್ತಬ್ಧವಾಗಿಬಿಡುತ್ತದೆ. ಈ ಸದ್ದು ಮಾತ್ರ ನಾನು ಮನೆಗೆ ಬಂದ ಮೇಲೂ ಕೇಳಿಸುತ್ತಿರುತ್ತದೆ.

ರಿಯಾನಳಿಗೆ ಇದನ್ನು ಹೇಳಿದೆ.ಆಗ ಅವಳು ಹಲಾಲ್ (ಯಾವುದೇ ಪ್ರಾಣಿಯನ್ನು ಪೂರ್ತಿಯಾಗಿ ಕತ್ತರಿಸುವ ಮುನ್ನ ಕತ್ತಿನ ಮೇಲಿನ ನರವನ್ನು ಕತ್ತರಿಸುವುದರ ಮೂಲಕ ಮಿದುಳಿಗೆ ರಕ್ತ ಸಂಚಾರ ವನ್ನು ನಿಲ್ಲಿಸುವುದು. ಆಗ ಅದು ಬ್ರೈನ್ ಡೆಡ್.ಹಲಾಲ್ ಮಾಡದೇ ಪ್ರಾಣಿಗಳನ್ನು ಕತ್ತರಿಸುವವನು ಸಚ್ಚಾ ಮುಸಲ್ಮಾನ್ ಆಗಲಾರ. ಹಾಗೆ ಮಾಡುವುದು ಪಾಪದಕೆಲಸ. ಪ್ರೇಮ್ ಶೇಖರ್ ಇದರ ಬಗ್ಗೆ ಒಂದು ಅದ್ಭುತ ಕತೆಯನ್ನು ಬರೆದಿದ್ದಾರೆ)
ಹಲಾಲ್ ಮಾಡುವುದರಿಂದ ಕತ್ತರಿಸುವಾಗ ಪ್ರಾಣಿಗಳಿಗೆ ಏಕ್ ಮಾರ್ ದೋ ತುಕಡಾ ಮಾಡಿದಷ್ಟು ನೋವಾಗುವುದಿಲ್ಲ . ಆದರೆ ಈಗೀಗ ಹೆಚ್ಚಿನ ಜನ ಹಲಾಲ್ ಮಾಡುವುದಿಲ್ಲ. ಕ್ಯಾ ಕರೇ ಆಂಟೀ ಎಂದಳು.
ಭಾಜೀ ಕಾಟ್ನೇ ಸಮಯ್ ಉನ್ಕಾ ಭೀ ಉತನಾ ಹೀ ದರ್ದ ಹೋತಾ ಹೋಗಾ ಕೌನ್ ಜಾನೇ ಹೈನಾ ಆಂಟೀ?' ಎಂದಳು.
ನನ್ನ ಮಗ ಯಾವಾಗಲೂ ' ನೀನು ಬೆಂಡೆ ಕಾಯನ್ನು ಕಚಕ್ ಅಂತಾ ಕತ್ತರಿಸಲ್ವಾ ಆಗ ನಿನಗೆ ಏನೂ ಅನ್ನಿಸೋಲ್ಲವಾ? ಎಂದು ಪಾಟಿಸವಾಲು ಹಾಕುತ್ತಾನೆ.
ಇಡೀ ಸೃಷ್ಟಿಯೇ ಹಿಂಸೆ ಯಿಂದ ತುಂಬಿದೆ. ಒಂದನ್ನು ತಿಂದು ಇನ್ನೊಂದು ಬದುಕಬೇಕಾಗಿರುವದು ಈ ನಿಸರ್ಗದ ವಿಧಿ. ಈ ಸೃಷ್ಟಿಯ ಅಗತ್ಯವಾದರೂ ಏನು? ಇದೆಲ್ಲಾ ಯಾಕಿರಬೇಕು? ಅನ್ನಿಸುತ್ತದೆ.
ಸತ್ಯಕಾಮರ ಹಾಗೆ ಅಮ್ಮಾ ನನಗೆ ಹಸಿವಾಗುತ್ತಿದೆ. ಏನಾದರೂ ಕರುಣಿಸು ತಾಯೀ' ಎಂದು ಕೈಯೊಡ್ಡಿ ಯಾವುದಾದರೂ ಮರದ ಬುಡದಲ್ಲಿ ನಿಲ್ಲಲಾರೆ. ಹಾಗೆ ಒಂದು ಪಕ್ಷ ನಿಂತರೂ ಬೀಸುವ ಗಾಳಿಯ ಮೂಲಕ ಅಮ್ಮ ನನಗೆ ಕರುಣಿಸುವ ಪಕ್ವವಾದ ಹಣ್ಣನ್ನಷ್ಟೇ ತಿಂದು ತೃಪ್ತಿ ಪಟ್ಟು ಕೊಳ್ಳಲಾರೆ.
ಬೆಂಡೆಕಾಯಿ ಆಲೂಗಡ್ಡೆ ಕತ್ತರಿಸಿ ಹಾಕುವಾಗ ಮೈಯೆಲ್ಲಾ ಕಿವಿಯಾಗಿ ಕೇಳಿಸಿಕೊಳ್ಳುತ್ತೇನೆ ' ಡಬ ಡಬ ಡಬ ಡಬ ಡಬಾ.......
ರಿಹಾನ ಹಿಂದಿನಿಂದ ಬಂದು ತಬ್ಬಿಕೊಂಡು ' ಕ್ಯಾ.... ಹೋಗಯಾ ಆಂಟೀ ತುಮ್ ಖಾಮಖಾ ಸಬ್ ದಿಲ್ ಮೇ ಲೇತೀ ಹೋ' ಎಂದು ನೀರಿನ ಲೋಟವನ್ನು ಬಾಯಿಗೆ ಇಡುತ್ತಾಳೆ.
ಇವಳಾರವಳು ಇವಳಾರವಳು ಇವಳಾರವಳು?

No comments:

Post a Comment