Monday, 8 February 2016

31. ಚರಾಚರ
ಮೊದಲ ದಿನ ಮೌನದಲಿ ಕಾಲಿಟ್ಟಾಗ ನಾನು
ಹೊಳೆಯುತ್ತಿದ್ದೆ ಲಕ ಲಕ ನೀನೂ
ಹಬ್ಬದ ಹಸಿರು ತೋರಣದಂತೆ
ಮೈ ಕೈ ತುಂಬಿಕೊಂಡು ನನ್ನಂತೆ
ದೇವರ ಮುಂದೆ ಹಚ್ಚಿದ ತುಪ್ಪದ ಹಣತೆ
ಸಮಾಧಾನ ಮಿನುಗುತ್ತಿತ್ತು ಮೊಗ್ಗಿನಂತೆ

ಭಾವದ ಜಾತ್ರೆ ಜರಗುತ್ತಿತ್ತು ‘ಜೀವದೊಳಗೆ’
ಅಚ್ಚರಿ ಭಯ ನಡುಕ ಸಂಭ್ರಮದೊಳಗೆ
‘ವೀಣೆ’ ಮಿಡಿಯುತ್ತಿತ್ತು ‘ನೀರೊಳಗೆ’
ಕಡೆಗಣ್ಣು ಕುಡಿಯಾಗಿತ್ತು ಕತ್ತಲ ಕೋಣೆಯೊಳಗೆ

ಹೊಸಿಲೊಳಗೆ ಇಟ್ಟ ಕಾಲು ಗಟ್ಟಿ ಊರುತ್ತಿತ್ತು
ಮೂಲೆ ಮೊಡಕು ಹಸಿ ವಾಸನೆಗಳೆಲ್ಲಾ
ಯಥಾ ಯಥ ಅಂಟಿಕೊಳ್ಳುತ್ತಿತ್ತು
ಜೀವದ ನಂಟಿಗೆ ಕಥಾ ಕಥಿತ
ಭಾವದ ಜೋಕಾಲಿ ಆಡುತ್ತಿತ್ತು
ಹಕ್ಕಿ ಹಾಡು ಹಸೆ ಚಂದಿರ ಕೈಸಾಲೆಗೆ ರಂಗೇರಿತ್ತು.

ಶ್ರಾವಣಗಳೆಷ್ಟೋ ಹರಿದು ಹೋದವು ನಿನ್ನ ಅಂಗಳದಲ್ಲಿ
ಕೊಚ್ಚಿ ಹೋಯಿತು ಕಾಲ ವಸಂತ ಮೇಳಗಳಲ್ಲಿ

ಈಗ ಗೂಡುವೋಗುತ್ತಿದ್ದೇನೆ
ಒಕ್ಕಲೆದ್ದಿದ್ದೇನೆ
ಹೆರವರ ಹರಕೆ ನನ್ನ ಮೇಲೆ
ಇನ್ನೆಷ್ಟು ದಿನ ಬಾಕಿ ಸಂತೆ
ನನ್ನಂತಲ್ಲ ನೀನು ನಿಂತಿದ್ದೀಯೇ ಗಟ್ಟಿ ನೆಲದ ಮೇಲೆ
ಗರಬಡಿದಂತೆ

ಭಾವಕೋಶದೊಳಗೆ ತತ್ತಿ ಇಟ್ಟೆ
ಜೀವಕೋಶÀದೊಳಗೆ ಗೆಡ್ಡೆಯಾಗಿ ಬೆಳೆದೆ
ಕಿಮೂ ಹತ್ತುವ ಮುನ್ನ ಕತ್ತರಿಸಬೇಕಿದೆ
ಭಾವ ಅರ್ಥಗಳು ಹರಿಯಬೇಕಿದೆ

ಮೂಳೆ ಚಕ್ಕಳ  ನಡುಗು ನಡು
ಎಲ್ಲಿಯೂ ಸಲ್ಲದ ಜಂಗಮ ನಾನು
ಕಲ್ಲು ಮರಳು ಸುಣ್ಣ ಮಿಶ್ರಣ
ಎಲ್ಲಿಯೂ ಸಲ್ಲುವ ಸ್ಥಾವರ ನೀನು
                         23/7/2013

No comments:

Post a Comment