Monday, 14 August 2023

Amma Auto

ಅಮ್ಮ ಮತ್ತು ಖಾರಾಸೇವೆ: (ಸೆಪ್ಟೆಂಬರ್ ‌೩೦ ೨೦೧೯) "ಎಂಟು ಗಂಟೆಗೇ ಅವರು ಬರಬೇಕಿತ್ತು. ಇನ್ನೂ ಬರಲಿಲ್ಲ. ಈಗ ಎಷ್ಟು ಗಂಟೆ" ಅಮ್ಮನಿಗೆ ಇನ್ನೇನು ತೊಂಬತ್ತನಾಲ್ಕು ವಸಂತ ಭರ್ತಿ. ಯಾವಾಗಲೂ ಯಾರನ್ನೋ ಕಾಯುತ್ತಿರುತ್ತಾರೆ. " ಯಾರಮ್ಮಾ? ಯಾರು ಬರ್ತಾರಂತೆ? ಅವರು ನಿನಗೆ ಗೊತ್ತಾ? ಏನು ಹೆಸರು" " ಅವರು ಕಣೇ ಅವರು.. ರಾಘವೇಂದ್ರ ಸ್ವಾಮಿ ಭಕ್ತರು. ಹಿಂದೇನೂ ಎರಡು ಸಲ ಬಂದಿದ್ದರು. ಈಗ ಬರ್ತೀನಿ ಅಂತ ಹೇಳಿದ್ರು. ಯಾಕೋ ಬಂದಿಲ್ಲ. ಅಥವಾ ಬಂದು ಹೊರಟು ಹೋದರೋ. ಅದಕ್ಕೆ ಬಾಗಿಲು ತೆಗೆದೇ ಇರು ಅಂತ ಹೇಳಿದ್ದು. ಅವರು ಯಾರಿಗೂ ಗೊತ್ತಾಗದ ಹಾಗೆ ಬರೋದು" ರಾತ್ರಿ ಒಂಬತ್ತು ಗಂಟೆ ಬೆಂಗಳೂರಿನ ನಿರ್ಜನ ಪ್ರದೇಶದಲ್ಲಿ ಮನೆ. ಮನೆಯಲ್ಲಿ ನಾನು ಅಮ್ಮ ಇಬ್ಬರೇ. ಬಾಗಿಲು ಹಾಕಬೇಡ ಅಂದರೇ? "ನೋಡು ಮಂತ್ರಾಕ್ಷತೆ ಕೊಟ್ಟು ಹೋಗಿದ್ದಾರೆ ಎಲ್ಲರಿಗೂ ಕೊಡು" "ಸರಿ ಎಲ್ಲಿ? ಕೊಡು ಮಂತ್ರಾಕ್ಷತೆ" ಖಾರಾಶೇವೆ ಇಟ್ಟ ಡಬ್ಬಿಯನ್ನು ಕೊಟ್ಟಳು. ಎಲ್ಲರಿಗೂ ಮಂತ್ರಾಕ್ಷತೆ ಕೊಟ್ಟಂತೆ ಮಾಡಿದೆ. ಅತ್ತಿಗೆ ನಿಜವೆಂದು ಭಾವಿಸಿ 'ನನಗೆ ಬೇಡ' ಎಂದಳು. ಸುಮ್ಮನೇ ತೊಗೋಳ್ಳೆ ಎಂದು ಗಡುಸಾಗಿ ಹೇಳಿ ಕಣ್ಣು ಮಿಟುಕಿಸಿ ಹುಸಿನಗೆ ನಕ್ಕ ಅಣ್ಣ. ಮುಂಬಯಿ ನಿಂದ ಬೆಂಗಳೂರಿನ ಅಣ್ಣನ ಮನೆಗೆ ಕಾಲಿಟ್ಟು ಬಚ್ಚಲಿನಿಂದ ಹೊರ ಬರಲಿಕ್ಕಿಲ್ಲ, ' ದೇವರು ಮನೆ ನೋಡಿದ್ಯೇನೆ.... ನೀನು ಬಿ.ಎ. ಓದುವಾಗ ಪ್ಲಾಸ್ಟಿಕ್ ವೈರಿನ ಹಾರಮಾಡಿದ್ಯಲ್ಲಾ ಅದೇ ಈ ರಾಘವೇಂದ್ರ ಸ್ವಾಮಿಗಳ ಪಟಕ್ಕೆ ಹಾಕಿರುವುದು. ಎಷ್ಟು ಚೆನ್ನಾಗಿದೆ ನೋಡು' ಅಮ್ಮನ ದೇವರು ಮನೆಯೆಂದರೆ ನೋಡುವಂತಹುದೇ. ಅಷ್ಟು ಚೊಕ್ಕಟ ಶುಭ್ರ. ದೇವರುಗಳ ಜಾತ್ರೆ. ಅದರಲ್ಲಿ ರಾಘವೇಂದ್ರ ಸ್ವಾಮಿಗಳದ್ದೇ ಹೆಚ್ಚು. ಎಷ್ಟು ಹೂವಿದ್ದರೂ ಸಾಲದು ಪೂಜೆಗೆ. ಮಾರನೆಯ ದಿನ ನಿರ್ಮಾಲ್ಯಕಳೆಯುವುದಕ್ಕೇ ಬೇಕು ಅರ್ಧ ಗಂಟೆ. "ರಾಘವೇಂದ್ರ ಸ್ವಾಮಿನೇ ಹೇಳಿ ಕಳುಹಿಸಿದ್ದಾರಂತೆ. ಮಂತ್ರಾಲಯಕ್ಕೆ ನನ್ನನ್ನು ಕರೆದುಕೊಂಡು ಹೋಗಲು ಬರ್ತೀನಿ ಅಂತ ಹೇಳಿದ್ದಾರೆ. ಯಾಕೋ ನೋಡು ಇನ್ನೂ ಬಂದಿಲ್ಲ. ಅವರ ಪಾದದಲ್ಲಿ ನನ್ನನ್ನು ಸೇರಿಸಿಕೊಳ್ಳುತ್ತಾರಂತೆ. ಆಮೇಲೆ ಇನ್ನೇನು? ಏನೂ ಇಲ್ಲ. ಇನ್ನೇನು ಎರಡು ತಿಂಗಳು ನನಗೆ ನೂರು ವರ್ಷ ಆಗುತ್ತಲ್ಲ?" "ಸುಮ್ಮನೇ ಸುಳ್ಳು ಹೇಳಬೇಡ ನಿನಗೆ ೯೪ ವರುಷ ಅಷ್ಟೇ ಇನ್ನೂ ಆರು ವರುಷ ಬಾಕಿ ಇದೆ" "ಇಲ್ಲ ಇನ್ನು ನಾಲ್ಕು ವರ್ಷ..." ಇಲ್ಲ ಎರಡು ತಿಂಗಳು" ಅಮ್ಮನ ಲೆಕ್ಕ ತಪ್ಪಿ ಐದಾರು ವರ್ಷಗಳೇ ಕಳೆದಿವೆ. ತನ್ನ ಬಾಲ್ಯದ ಕಥೆ. ಅದನ್ನು ಕಳೆದ ಮನೆ, ಮಂದಿ, ಊರು ಅಲ್ಲಿಯ ಜನ ಅದರ ಲೆಕ್ಕ ಮಾತ್ರ ಕರಾರುವಾಕ್ಕಾಗಿ ನೆನಪಿದೆ. ಹದಿಮೂರೊಂಬತ್ಲಿ...೧೧೭ ಬಾಯಲ್ಲೇ ಇದೆ. ಅಮ್ಮನಿಗೆ ಮದುವೆಯಾಗಿ ಎಂಟು ವರ್ಷಗಳ ಕಾಲವಾದರೂ ಮಕ್ಕಳಾಗಲಿಲ್ಲವೆಂದು ರಾಘವೇಂದ್ರ ಸ್ವಾಮಿಗಳಿಗೆ ಹರಕೆ ಹೊತ್ತು, ೪೮ ದಿನ ವ್ರತ ಮಾಡಿದಮೇಲೆ ಅಣ್ಣ ಹುಟ್ಟಿ, ಆನಂತರ ಸಾಲಾಗಿ ನಾವು ನಾಲ್ಕು ಮಕ್ಕಳು ಹುಟ್ಟಿ ಒಟ್ಟಿನಲ್ಲಿ ಅಮ್ಮ ಐದು ಮಕ್ಕಳ ತಾಯಿಯಾದಳು. ಕಾಲಕ್ರಮೇಣ ಅಮ್ಮನ ದೈವ ಕೆಟ್ಟಿತು. ರಾಘವೇಂದ್ರ ಸ್ವಾಮಿಗಳ ವರದಿಂದ ಹುಟ್ಟಿದ ಮಗನನ್ನು ೨೭ ವರುಷಗಳ ಬಳಿಕ 'ಅವರೇ ಕರೆಸಿಕೊಂಡು ಬಿಟ್ಟರು' ಅಮ್ಮನಿಗೆ ಹೆಚ್ಚಿನ ಮರೆವು ಬಂದಿದ್ದರೂ. ರಾಘವೇಂದ್ರ ಸ್ವಾಮಿಯನ್ನು ಮರೆತಿಲ್ಲ. ಅಪಘಾತದಲ್ಲಿ ೪೪ ವರ್ಷಗಳ ಹಿಂದೆ ಗತಿಸಿದ ಮಗನನ್ನು ಮರೆತಿಲ್ಲ. ಅಂಥ ಮಗನನ್ನು ಇಟ್ಟುಕೊಳ್ಳುವ ಯೋಗ ನನಗಿಲ್ಲದೇ ಹೋಯಿತು ಎಂದು ಅರಳು ಮರುಳಿನ ನಡುವೆಯೂ ಹಲುಬುತ್ತಾರೆ. ಮಂತ್ರಾಕ್ಷತೆ ಯೆಂದು ಡಬ್ಬಿಯಲ್ಲಿಟ್ಟುಕೊಂಡ ಖಾರಾಶೇವೆಯನ್ನು 'ಇಂದಾ ಇಂದಾ, ಹಿಡಿ ಹಿಡಿ.... ಅಕ್ಷತೆ ತೊಗೋ ಒಳ್ಳೆಯದಾಗುತ್ತದೆ' ಎನ್ನುವುದು ತಪ್ಪಿಲ್ಲ. ಬೆಳಿಗ್ಗೆ ಎದ್ದು ಹೊಸ್ತಿಲು ತೊಳೆದು ರಂಗೋಲಿ ಇಕ್ಕಿ, ಸ್ನಾನ ಮಾಡಿ, ದೇವರ ಮನೆ ಸೇರಿದಳೆಂದರೆ, ಹೊರಬರುವುದು ಒಂದೂವರೆ ಗಂಟೆಯ ಮೇಲೆಯೇ. ಆಮೇಲೆ ಕಾಫಿ ತಿಂಡಿ. ಊಟ ಮಾಡುವುದನ್ನು ಬಿಟ್ಟು ನಾಲ್ಕೈದು ವರ್ಷಗಳಾಗಿವೆ. ಕೇವಲ ಫಲಾಹಾರ. ಆದರೆ ಖಾರಾಶೇವೆ ಮಾತ್ರ ಸದಾ ದಿಂಬಿನಡಿಯಲ್ಲಿ ಇರಬೇಕು. "ನಿನ್ನನ್ನು ಕಂಡರೆ ಅದೇನೋ ರಾಘವೇಂದ್ರ ಸ್ವಾಮಿಗಳಿಗೆ ಇಷ್ಟವಂತೆ" ಪಕ್ಕದಲ್ಲಿ ಕೂತಾಗ ಇದ್ದಕ್ಕಿದ್ದಂತೆ ಹೇಳಿದಳು. ವಾಹ್ ಮೇರಾ ನಂಬರ್ ಆಗಯಾ ಎಂದು ಕೊಂಡವಳು "ಹೌದಾ. ಏನಂತಾರೆ ನಿನ್ನ ರಾಘವೇಂದ್ರ ಸ್ವಾಮಿಗಳು? ಮಗಳನ್ನು ಬೇಗ ಕಳುಹಿಸು ಅಂದ್ರಾ?" ಎಂದು ಕೇಳಿದೆ. "ಛೇ ಇಲ್ಲ ಕಣೇ.... ನಾನಿನ್ನೂ ಗುಂಡುಕಲ್ಲಾಗಿ ಇಲ್ಲವಾ ಎನ್ನುವ ಭಾವದಲ್ಲಿ ನೀನು ಇಷ್ಟೆಲ್ಲಾ ಓದು ಬರೆದೂ ಮಾಡಿದ್ದೀಯಲ್ಲಾ? " (ಅವರ ಕೃಪೆ) ಹೊರಗೆ ಮಂಕು ಬೀದಿ ದೀಪ. ಕಷ್ಟಪಟ್ಟು ಅಮ್ಮ ಮೆಟ್ಟಿಲು ಇಳಿಯುತ್ತಿದ್ದಾಳೆ. "ಎಲ್ಲಿಗೆ ಹೋಗ್ತೀಯಮ್ಮಾ" ಮಾತಿಲ್ಲ.... ಸುಮ್ಮನೇ ಗೇಟಿನ ಬಳಿಗೆ ನಡೆದಳು. ಮೆಟ್ಟಿಂಗಾಲು ಹಾಕಿ ಯಾರನ್ನೋ ಗೇಟಿನಾಚೆ ಹುಡುಕುತ್ತಿದ್ದಳು...... ****************** ಅಮ್ಮನ ವಾರ್ಷಿಕ ಶ್ರಾದ್ಧದ ಎರಡನೆಯ ದಿನ ಇಂದು. ರಾಘವೇಂದ್ರ ಸ್ವಾಮಿಗಳ ಆರಾಧನೆ ನಡೆಯುತ್ತಿರುವಾಗಲೇ ಅಮ್ಮ ತೀರಿಕೊಂಡಿದ್ದು ಒಂದು ಆಕಸ್ಮಿಕ.

No comments:

Post a Comment