Monday, 14 August 2023
My poems
ರೂಪಾಂತರ
ಹುಚ್ಚು ಹೊಳೆಯಾಗಿ ಧುಮ್ಮಿಕ್ಕಿ
ಜಲಪಾತ ಭೋರ್ಗರೆದು
ಕೆರೆಕಟ್ಟೆ ಕೋಡಿ ಹರಿದು
ಬೆಂಗಾಡಿನಲ್ಲಿ ಇಂಗಿ ಹೋದ ಅವನು
ಅಲ್ಲಿಂದ ಒಂದು
ಒಣ ಬೀಜ ತಂದು
ನೆಟ್ಟೆ ನನ್ನ ಕವಿತೆಯೊಳಗೆ
ಹುಲುಸಾಗಿ ಮೊಳಕೆಯೊಡೆದ
ಅನಿಚ್ಚಬೋಧ
(ಅನಿಚ್ಚಬೋಧ : ಬದಲಾವಣೆಯೇ ಶಾಶ್ವತ ಎಂಬ ಅರಿವು)
ಪ್ರಶ್ನೆ
ಕವಿತೆಯಕಾಡಿನಲ್ಲಿ
ಕಣ್ಣಾಮುಚ್ಚಾಲೆಯಾಡುತ್ತೀ
ಕಣ್ ತಪ್ಪಿಸುತ್ತೀ
ಮಾತು ಹಾರಿಸುತ್ತೀ
ಅಡಗುತಾಣಗಳ ಬಲ್ಲೆ
ನನ್ನದೇ ಕಾಡು
ಹಿಡಿಯಬಲ್ಲೆ
ಹೊಸ ಕವಿತೆಯೊಳಗೆ
ಆದರೆ ಅನುಮಾನ ಒಂದೇ
ಬಲೆಯೊಳಗೆ ನೀನೋ
ನಾನೋ...
ಗಿರಿಜಾಶಾಸ್ತ್ರಿSept 24/22
ಹದಿನೆಂಟು ಸಾವಿರದ ಒಂದನೇ ಶವ
ಎಲ್ಲಿಗೆ ಹೋಗುತ್ತಿದ್ದೀಯೇ ಮುದುಕಿ
ಮುಂಜಾನೆ ಸೂರ್ಯ ಕೇಳಿದ
ಬೀದಿ ಹೆಣವಾಗಲು...
ಇನ್ನೂ ಉಸಿರಾಡುತ್ತಿದ್ದೀ
ಹಿಡಿದುಕೊಂಡಿದ್ದೇನೆ
ಯಾಕಾಗಿ
ಅಯೂಬನಿಗಾಗಿ
ಅಯೂಬ ಯಾರು
ನನ್ನ ಮಗ
ಅದು ಹೇಗೆ
ಒಂದೆರೆಡು ಗಂಟೆ
ಅವನ ಪಕ್ಕ ಕೂತಿದ್ದೆ
ಸಂದರ್ಶನ ಮಾಡಿದ್ದೆ
ಇಲ್ಲೇ ಹಾಕಿದ್ದೆ.
ದಿನಾ ಫೋನ್ ಮಾಡ್ತಾನೆ.
"ಕೈಸೀ ಹೋ ಮ್ಞಾಜೀ" ಅಂತಾನೆ.
ಒಂದಲ್ಲೊಂದು ಸುದ್ದಿ
ಮಾತು... ಮಾತು... ಮಾತು
ಎರಡು ಗಳಿಗೆಯ ಋಣಕ್ಕೆ
ಬಾಯಿತುಂಬಾ
ಹೊಟ್ಟೆ ತುಂಬಾ ಮಾತು
"ಸಾಯುವ ಮಾತು ಈಗೇಕೆ"
ಹೇ ಚುಪ್... ಚುಪ್
ಗದರುತ್ತಾನೆ
ಅಲ್ಲಾಹು ಭಲಾ ಕರೇಗಾ
ಚಾಚಿದ ಬೊಗಸೆ ತುಂಬಾ
ಖರ್ಜೂರ ಕಲ್ಲುಸಕ್ಕರೆ
ಅವನ ಮಾತೇಕೆ
ಸಂಜೆ ಸೂರ್ಯ ಕೇಳಿದ
ಈಗ ಯಾರ ಕಾಯುತ್ತಿರುವೆ
ಅಯೂಬನನ್ನು
ಅವನೇನು ಮಾಡುತ್ತಾನೆ
ಅನಾಥ ಹೆಣಗಳ ಎತ್ತಿದ್ದಾನೆ
ಹದಿನೆಂಟು ಸಾವಿರ
ಇಲ್ಲಿಯವರೆಗೆ
ಈಗ .....
ಸೂರ್ಯ ಅರಬ್ಬೀ ಹಿನ್ನೀರಿನಲಿ
ಮುಳುಗಿಹೋದ.
ಅವನ ಮುಷ್ಠಿಯೊಳಗೆ
ಮುದುಕಿ ಬರೆದಿದ್ದ ಅಕ್ಷರಗಳು
ಅಳಿಸಿ ಹೋದವು...
Insights unavailable for this post
ವ್ಯಾಮೋಹ -೧
ವ್ಯಾಮೋಹಸೂತ್ರ
ಕೊರಳಿಗೆ ಕಟ್ಟಿದ
ಮಾಂಜಾನೂಲು
ಹಸಿ ದಾರವಲ್ಲ
ಚೆಂದ ಹೂಕಟ್ಟಿ
ಮುಡಿದುಕೊಳ್ಳಲು ತುರುಬಿಗೆ
ಗಾಳಿಪಟ ಹಾರಿದಷ್ಟೂ ದೂರ
ಬಿಗಿ ಬಿಗಿತ ಕರುಳಿಗೇ
ಹಾರದಿದ್ದರೆ
ತೊಡರಿಕೊಳ್ಳುತ್ತದೆ ಕಾಲಿಗೇ
ವ್ಯಾಮೋಹ -೨
ಹೊಲಬುದಪ್ಪಿ ಒಂದು ಕರು
ಒಂಟಿ ಅಲೆಮಾರಿ ಚೀರುತಿತ್ತು
ಅಂಬಾ ಅಂಬಾ ಅಂಬಾ
ಬೆಟ್ಟದವ್ವನ ತಪ್ಪಲಲ್ಲಿ
ಕೊರಲು ಸೀಳಿ ಹಲಬುತಿತ್ತು
ಹುಲಿಗೆವ್ವ ಎದುರಾದಳು
ಅಮಾಸೆಯ ಕತ್ತಲು
ಕರುವೆಲ್ಲಿ ಹೋಯಿತೋ
ಅಂಬಾ ಅಂಬಾ ಅಂಬಾ
ತಾಯಿ ಕೂಗು
ಕಲ್ಪಾಂತರ ಹಾಯುತ್ತಿತ್ತು
****
ನಿರೀಕ್ಷೆ
ಹೊಟ್ಟೆಯ ಕರುಳು
ನಿರೀಕ್ಷೆಯ ಮುಳ್ಳು
ಸದಾ ಚುಚ್ಚುತ್ತದೆ
ಬತ್ತಿದ ಮೊಲೆಯ ಮೇಲೆ
ಗೀರು ಗಾಯ
ಹುಣ್ಣು ಕೀವು ರಣ
ಕತ್ತರಿಸಿ ಬಿಸಾಡುವ ಧೈರ್ಯವಿಲ್ಲ
ಇಟ್ಟುಕೊಳ್ಳುವ ತಾಖತ್ತಿಲ್ಲ
ಒಡ್ಡಿಕೊಂಡರೂ ಕತ್ತಿಗೆ
'ಕತ್ತರಿಸಿದಷ್ಟು ಬೆಳೆ'ದು
ಮತ್ತೆ ಬರುತ್ತದೆ
ಕಾಲಾತೀತ 'ಕುತ್ತಿ'ಗೆ
ಕಾಲವಶ ಗೂಡು
ಕೂಗುತ್ತದೆ 'ಕಾಡು'
'ಇರುಳೆಲ್ಲ ಜಾಗರಾಗಿ'
ಜೀಂ..ಜಿರ್ರೋ..ಜೀಂ...ಜಿರ್ರೋ....
ಗಿರಿಜಾಶಾಸ್ತ್ರಿDec 20/22
ಖಡ್ಗ vs ಕವಿತೆ
"ನನ್ನ ಪುಪ್ಪುಸ
ಆ ಮರದಮೇಲೆ ನೇತಾಡುತಿದೆ"*
ಕೊಡಲಿ ಹಿಡಿದಿರುವೆ ನೀನು
ಮತ್ತೆ ಚಿಗುರುವ ತನಕ
ಎಲ್ಲಿ ಇಡಲಿ ಇದನು
ನೀರಿನಿಂದ ಹೊರಬಿದ್ದ ಮೀನು ನಾನು.
ಕೊಡಲಿ
ಆತ್ಮವನು ಕತ್ತರಿಸುವುದಿಲ್ಲ.
ಆದರೆ ಗಾಳಿಯ ಕತ್ತರಿಸುತ್ತಿದೆ
ನೀರು ಹಿಂಗುತ್ತಿದೆ
ಉರಿವ ಬೆಂಕಿಗೊಡ್ಡಿಕೊಂಡು
ದಿನಾ ಹತ್ತರಿಗೊಳ್ಳುವ ಅದಕ್ಕೆ
ಮರ ಕಾವು ಕೊಡುತ್ತಿದೆ.
ಮಣ್ಣು ದಿಬ್ಬದ ಮೇಲೆ ಕುಳಿತು
ನಾನು ಜಪ ಮಾಡುತ್ತಿದ್ದೇನೆ
ತೂತು ಬಿದ್ದು ಆಕಾಶದ ಕೆಳಗೆ
ಮರಾಮರಾಮರಾಮರಾ...
ಮಿಥುನ ಕ್ರೌಂಚಗಳಲ್ಲೊಂದು
ದೊಪ್ಪನೆ ಬಿದ್ದಿದೆ ನೆಲಕೆ
ಉಸಿರು ತುಂಬಲಿ ಹೇಗೆ
ಖಡ್ಗಹಿಡಿದಿರುವೆ ಬಗಲಿಗೆ
ಈ ಕವಿತೆಗಾವ ಬೇಗೆ
ಪಾಷಾಣದ ಮನೆ ಮತ್ತು ಗಾಜಿನ ಬಾಗಿಲು
ಕಲ್ಲಿನ ಮನೆಯೊಳಗೆ
ಗಾಜಿನ ಕಿಟಕಿ ಬಾಗಿಲುಗಳು
ರೋಪು ಹೊಡೆಯಬಾರದು
ಒಲೆಯ ಒದೆಗೊರಡು
ಮನೆಯ ಮುದಿ ಗೊರಡುಗಳು
ತಾಗಿದರೆ ಕಲ್ಲು
ಫಳಾರ್ ಫಳೀರ್...
ಚೂರು ನೂರು ತುಂಡು
ಸಾವಿರದ ಒಂದು ಪ್ರತಿಬಿಂಬ
ಸೂಜಿ ಹಿಂಭಾರ ಮುಂಭಾರ
ಸಮತೋಲ ನಡಿಗೆ
ಕ್ರಚ್ ನ ಹಿಡಿತದೊಳಗೆ
ಮಾತು ಮಾತು ಮಥಿಸಿ
ಆಗುವುದಿಲ್ಲ ನವನೀತ
ಕೆಸರೇ ಪಂಚಾಮೃತ
ರಾತ್ರಿ ಮೂರಕ್ಕೇ ಎಚ್ಚರ
ಧ್ಯಾನ ನಿಲ್ಲುವುದಿಲ್ಲ
ಕತ್ತಲೆಯಲಿ ಕನ್ನಡಕ ಹುಡುಕುವ ಕಾತುರ
ಬಂತೇ
ಫೋನು
ಬಂದಿರಬಹುದೇ
'ಕೂಸುಮರಿ ಬೇಕೆ ಕೂಸುಮರಿ'
ಎಂದು ಕರೆದ ಹಾಗೆ
ಭೂತವೇ ಬೆನ್ನು ಹತ್ತಿ
ಕೂಸು ಬೆಂಬಿಡದೆ ಹೀಗೆ
ಪ್ರತೀಕ್ಷೆ ಗೀಳಾಗಿ
ಕಾಯುವುದು ಗೋಳಾಗಿ...
ಮರದ ಜೊತೆಗಾದರೂ
ಸ್ನೇಹ ಬೆಳೆಸಿಕೊಳ್ಳ ಬೇಕು ಗಾಜು
ಸಿಮೆಂಟು ಬಿರುಕಿನಲ್ಲೂ ಚಿಗುರಬಹುದು
ಎ.ಕೆ.ಆರ್ ಹೇಳಿದ ಹಾಗೆ
ನಂಟು ಕೊಕ್ಕೆ ಹಾಕಿಕೊಳ್ಳಬಹುದು ಹೀಗೆ
ಒಂದು ಗುಟುಕು ಪ್ರೀತಿ
"ಹ್ಯಾಗಿದ್ದೀಯಾ ?" ಎನ್ನುವ ಕಕ್ಕುಲಾತಿ
ಶೇಷಾಯುಷ್ಯಕ್ಕೊಂದು
ತಂಪಾದ ನೆಳಲು
ಧಗೆ ತೀರಿಸಲು ಮಂಜಿನ ಮಡಿಲು
ಧರಾಶಾಯಿಯಾಗುವ ಮೊದಲು
• "ಸಿಮೆಂಟು ಬಿರುಕಿನ ಹುಲ್ಲು " ಎ.ಕೆ. ರಾಮಾನುಜಮ್ ಅವರ ಕವಿತೆಯ ಸಾಲು - 'ಅದರಲ್ಲಿ ಇದು'
• ಏಪ್ರಿಲ್ ೨೪
ಗೊತ್ತಿಲ್ಲ ನನಗೆ
ಅದು ಇದೆಯಾ?
ಇಲ್ಲ
ಹಾಗಾದರೆ ಇಲ್ಲವಾ
ಹಾಗೆಂದೇನೂ ಅಲ್ಲ
ಇದೆ ಎನ್ನುವುದು ಇಲ್ಲವಾ
ಹಾಗೇನೂ ಹೇಳಲಿಲ್ಲ
ಇಲ್ಲ ಎನ್ನುವುದು ಇದೆಯಾ
ಅದೂ ಇಲ್ಲ
ಇಲ್ಲ ಮತ್ತು ಇದೆ
ಇದೆ ಮತ್ತು ಇಲ್ಲ
ಇದ್ದರೆ ಇದೆಯೇ ಹೊರಗೆ ಒಳಗೆ
ಹೊರಗಿಲ್ಲ ಒಳಗಿಲ್ಲ
ಇಲ್ಲವಾದರೆ ಎಲ್ಲಿದೆ
ಇದೆ ಒಳಗೆ ಹೊರಗೆ
ತಲೆಕೆಟ್ಟಿದೆಯೇ ನಿನಗೆ
ಇರಬಹುದು
ಇಲ್ಲದಿರಬಹುದು
ನೀ ಯಾರು
ಅದೇ ಗೊತ್ತಿಲ್ಲ ನನಗೆ.
ಕಾವು-೧
ಬಂದನೇನೇ ಬಂದನೇನೇ
ಬಂದು ಹೋದನೇನೇ
ಬಚ್ಚಲಿಗೆ ಇಳಿದಾಗ
ಕರೆಗಂಟೆ ಸದ್ದಾಯಿತಲ್ಲ
ಮಡಿಯುಟ್ಡು ಬಂದು
ಬಾಗಿಲು ತೆರೆದರೆ
ಯಾರೂ ಇಲ್ಲ
ಚಪ್ಪಲಿ ಬಿಡಲಿಕ್ಕಿಲ್ಲ
"ಅಮ್ಮಾ ಕಾಫೀ"
ಧಾವಿಸಿ ಒಳಬಂದರೆ??
ತಾಜಾ ಡಿಕಾಕ್ಷನ್
ಆಗಷ್ಟೇ ಫಿಲ್ಟರಿಗೆ ಹಾಕಿ
ಘಮ್ಮೆಂದು....
ಬಚ್ಚಲು ಮನೆ ಹೊಕ್ಕಿದ್ದೆನಲ್ಲ
ತಿಂಡಿ ಆರಿಹೋಯಿತಲ್ಲ
ಈಗ ಬಿಸಿಮಾಡಲೇ
ಇಲ್ಲ ಕಾಯಲೇ
ಮೈಕ್ರೋದಲ್ಲಿ ಎಷ್ಟು ಹೊತ್ತು
ಏರೋಪ್ಲೇನ್ ನಲ್ಲಿ ಬರುತ್ತಾನೆ
"ಇಲ್ಲ ಇಲ್ಲ ಟೈಮಿಲ್ಲ"
ಹೊರಟೇ ಬಿಟ್ಟರೆ
ಅವನೂ ಬರಲಿ
ಒಟ್ಟಿಗೆ ತಿಂದರಾಯಿತು
ಬಿಸಿ ಮಾಡಿ ತಣ್ಣಗಾಗಿ
ಮತ್ತೆ ಬಿಸಿ ಮಾಡಿ ತಣಿದು
ಮೈಕ್ರೋ ಒಲೆಯಿಂದ
ಅಡುಗೆ ಕಟ್ಟೆಗೆ
ಅಡುಗೆ ಕಟ್ಟೆಯಿಂದ ಮೈಕ್ರೋಗೆ
ವರ್ಗಾವಣೆಗೊಳ್ಳುತ್ತಾ
ಕಸದ ಡಬ್ಬ ಸೇರಿತು
ಬಾಗಿಲು ಹಾರುಹೊಡೆದೇ ಇತ್ತು.
೨೯/೭/೨೩
ಕಾವು - ೨
ಅವನು ಉರಿದು ಹೋದ
ಎಡೆಯಿಂದ ಎದ್ದ ಹೊಗೆ
ಆಗಸದಲ್ಲಿ ಕಾವು ಕಟ್ಟಿತ್ತು
ಕಪ್ಪು ಕಪ್ಪು ಮಸಕು ಮಸಕು
ಮೋಡಗಳೆಡೆಯಿಂದಲೇ ಇಣುಕಿ ಬೇಡಿದ್ದ
"ಅಮ್ಮಾ ಒಂತೊಟ್ಟು ಕಾಫಿ ಕೊಡೇ"
ಅಡುಗೆ ಕೋಣೆಗೆ ಧಡಪಡಿಸಿ ಓಡಿದಳು
ಒಲೆ ತುಂಬಾ ಹೊಗೆ
ಅಡುಗೆ ಕೋಣೆಯ ಮುತ್ತಿಗೆ ಹಾಕಿತ್ತು
ಮಡಕೆಯೊಡೆದ ತೂತು
ಸೋರುತ್ತಿತ್ತು
ಕವರುವಷ್ಟರಲ್ಲೇ ಬೆಂಕಿ
ಆರಿಹೋಯಿತು.
ಹೊರಗೋಡಿ ಬಂದಳು
ಮೋಡ ಚೆದುರಿ ಹೋಗಿತ್ತು.
೨೯/೭/೨೩
ರೂಪಾಂತರ
ಹುಚ್ಚು ಹೊಳೆಯಾಗಿ ಧುಮ್ಮಿಕ್ಕಿ
ಜಲಪಾತ ಭೋರ್ಗರೆದು
ಕೆರೆಕಟ್ಟೆ ಕೋಡಿ ಹರಿದು
ಬೆಂಗಾಡಿನಲ್ಲಿ ಇಂಗಿ ಹೋದ ಅವನು
ಅಲ್ಲಿಂದ ಒಂದು
ಒಣ ಬೀಜ ತಂದು
ನೆಟ್ಟೆ ನನ್ನ ಕವಿತೆಯೊಳಗೆ
ಹುಲುಸಾಗಿ ಮೊಳಕೆಯೊಡೆದ
ಅನಿಚ್ಚಬೋಧ
(ಅನಿಚ್ಚಬೋಧ : ಬದಲಾವಣೆಯೇ ಶಾಶ್ವತ ಎಂಬ ಅರಿವು)
ಪ್ರಶ್ನೆ
ಕವಿತೆಯಕಾಡಿನಲ್ಲಿ
ಕಣ್ಣಾಮುಚ್ಚಾಲೆಯಾಡುತ್ತೀ
ಕಣ್ ತಪ್ಪಿಸುತ್ತೀ
ಮಾತು ಹಾರಿಸುತ್ತೀ
ಅಡಗುತಾಣಗಳ ಬಲ್ಲೆ
ನನ್ನದೇ ಕಾಡು
ಹಿಡಿಯಬಲ್ಲೆ
ಹೊಸ ಕವಿತೆಯೊಳಗೆ
ಆದರೆ ಅನುಮಾನ ಒಂದೇ
ಬಲೆಯೊಳಗೆ ನೀನೋ
ನಾನೋ...
೨೪/೯/೨೨ ಸಿಯಾಟಲ್
ಅವಳೋ
ಅಂತಕನ ನೆರೆಯೂರವಳು
ಒಂದು ಕಾಲು ಒಳಗೆ
ಇನ್ನೊಂದು ಹೊರಗೆ
ಅವನೋ
ಕುದಿಯುವ ಬಿಸಿರಕ್ತದವನು
ಕಾಲುಗಳೇ ಇಲ್ಲ
ಬರಿ ರೆಕ್ಕೆಗಳೆ ಎಲ್ಲ
ಕಿಡಿಕಾರುವ ಕಣ್ಣುಗಳು
ಮಾಂಸಲ ದೇಹ
ದಷ್ಟಪುಷ್ಠ ಬರೋಬ್ಬರಿ
ಆರುಫೂಟು
ನಾ-ನೀ
ನೀ- ನಾ
ಮಾತು ಮಾತು ಮಥಿಸಿ
ತೇಲುತ ಬಂದದ್ದು ನವನೀತವಲ್ಲ
ಕಾರ್ಕೋಟಕ ವಿಷ.
ಕಂಡವರು - ಕಾಣದವರು
ಮಾಂಜಾದ ಕಣ್ಣುಗಳು
ದಾರಿಯುದ್ದಕೂ ನಡೆ ಮುಡಿ ಹಾಸಿವೆ
ಹುಬ್ಬಿನ ಮೇಲೆ ಕೈ ಮರೆ
ನಡುಗುವ ಮೈ
ಮೋಟು ಗೋಡೆಯ ಹಿಂಬದಿಗೆ
ಪಾಟಿ ಚೀಲ ಹಿಡಿದು
ಪುಟು ಪುಟು ಓಡಿ ಬರುವ
ಪುಟ್ಟ ವಿಟ್ಠಲ
ಕೆಂಪು ನೀಲಿ ಸಮವಸ್ತ್ರ
ನೀಟಾಗಿ ತಿದ್ದಿ ತೀಡಿದ ಕ್ರಾಪು
ಬಂದನೆ
ಬರುತ್ತಿರುವನು ಅವನೇ
ಚಂಗನೆ ಹಿಂದಕ್ಕೆ ಜಿಗಿದಳು
ಕಂಡವರು ಕಂಡರೆ
ಊರು ಗೋಲು ಕುಟ್ಟುತ್ತಾ
ಹಿನ್ನಡೆದಳು
ಭುರ್ರೆಂದು ಬದಿಯಲ್ಲೇ ಹಾರಿ ಹೋದನಲ್ಲ
ಹಿಂಬದಿಯಲ್ಲಿ ಯಾರೂ ಕಾಣಲಿಲ್ಲವಲ್ಲ
ಎದ್ದ ಧೂಳು ಕಣ್ಣ ತುಂಬಾ
ಕಂಡವರು ಕಂಡರೆ
ಮುಖ ಮುಚ್ಚಿಕೊಂಡಳು ಸೆರಗಿಂದ
ಸನಿಹದಲ್ಲೇ ದೂರದ ಮನೆ
ಕಾರು ಕಾಣಲಿಲ್ಲ ಕೆಳಗೆ
ವಾರದ ರಜೆಯಲ್ಲ
ಹೋಗಿರಬೇಕು ಎಲ್ಲಾ
ಊರ ಹೊರಗೆ
ಕಂಡವರು ಕಂಡರೆ
ಕತ್ತಲಾಯಿತಲ್ಲ
ಇನ್ನೇನು ಭಯ
ಕಾಕೂ , ಮಾವುಶೀ, ಆಂಟೀ, ಆಜೀ
ಯಾರು ಯಾರೋ 'ಕಂಡವರ' ಸಂತೆಯಲ್ಲಿ
ಕಾಣದವರಿಗಾಗಿ
ಮಂಜಾದ ಕಣ್ಣು
"ಶಂಕಾತುರಂಗಳೂರಿ"
ಅಂಡಲೆಯುತ್ತಿದೆ
ಕತ್ತರಿಸಿಕೊಂಡ ಬಾಲ
ವಿಲ ವಿಲ ಒದ್ದಾಡುತಿದೆ
ನನ್ನ ಗೆಳತಿ ಅಕ್ಷತಾ ದೇಶಪಾಂಡೆ " ಅನಲಜ್ವಲಾ" ಎನ್ನುವ ಮರಾಠಿಯ ತಮ್ಮ ಕವಿತೆಯೊಂದನ್ನು ಕಳುಹಿಸಿದರು. ಅದು ನನ್ನನ್ನು ಇನ್ನಿಲ್ಲದಂತೆ ಕಾಡುತ್ತಿದೆ. ನಾನು ಮಾಡಿದ ಅದರ ಅನುವಾದ ಕೆಳಗಿದೆ. ಮೂಲ ಮರಾಠಿ ಕವಿತಯನ್ನೂ ಕೊಟ್ಟಿರುವೆ.
ಚಿತಾಗ್ನಿ
ನಾನು ನಂದಿಹೋದೆ
ಹಣತೆಯೊಂದು ಉರಿಯುತ್ತಿದೆ ನನ್ನ ದಿಂಬಿನದೆಸೆಗೆ
ಯಾರೋ ಬಂದರು ಕಾಲ ಬಳಿ ಕುಳಿತರು
ಇನ್ನಾರೋ ನನ್ನ ತಲೆಯ ಬಳಿ
ಚಿತೆಯ ಜೊತೆಗೇ ಉರಿದು ಹೋದವು
ನನ್ನೆಲ್ಲ ಸಿಟ್ಟು ಸೆಡವು ಸಂಕಟಗಳು
ಇನ್ನು ನನ್ನ ಬಳಿ ಉಳಿದಿರುವುದಾದರೂ ಏನು
ನನ್ನದೆನ್ನುವುದು
ಪುರುಸೊತ್ತೇ ಇಲ್ಲದವರು
ಧಾವಿಸಿ ಬಂದರು
ಮಾತೇ ಮರೆತು ಹೋದವರು
ಕೊಂಡಾಟ ಗೋಳಾಟ ಚೀರಾಟ ನಡೆಸಿ
ಅಚ್ಚರಿಯ ಉಡುಗೊರೆ ನೀಡಿದರು
ನನ್ನ ದೇಹದಲ್ಲಿ ಅಸುವಿರಲಿಲ್ಲ
ಆದರೂ ಕಂಗಳ ತುಂಬಾ ಪಸೆ ಇತ್ತು
ನನ್ನ ಅರಿವಿನ ಆಚೆಗೇ ಉಳಿದುಬಿಟ್ಟವು
ಸಂಬಂಧಗಳ ಸಿಕ್ಕುಗಳು
ನನ್ನೊಳಗೇ ಅಳಿದು ಹೋದವು
ಮರಾಠಿ ಮೂಲ : ಅಕ್ಷತಾ ದೇಶಪಾಂಡೆ
८-८-८
*वृत्त : अनलज्वला*
*मी विझले अन्*
मी विझले अन् एक दिवा तेवला उशाशी
पायाशी बसले कुणी अन कुणी डोक्याशी
चिते सोबती जळून गेल्या व्यर्थ वेदना
काय राहिले माझे आता माझ्यापाशी
आज तयांनी कोडकौतुके बरीच केली
सहज कधीही जे बोलत नव्हते माझ्याशी
हाकेस कधी धावत आले नाही माझ्या
देह जाहला निश्चल तेव्हा जल डोळ्याशी
अवघड गुंता नात्यांचा मज कळला नाही
उरले माझे नाते आता फक्त स्वतःशी
©®अक्षता देशपांडे
(ಮುನ್ಶೀ ಪ್ರೇಮ್ ಚಂದ್ ಅವರ ಕವಿತೆಯೊಂದನ್ನು ಕನ್ನಡದಲ್ಲಿರಿಸಿದ್ದೇನೆ. ಕನ್ನಡದ ಜಾಯಮಾನಕ್ಕಾಗಿ ಕೆಲವು ಶಬ್ದಗಳನ್ನು,ಸಾಲುಗಳನ್ನು ಹಿಂದೆ ಮುಂದೆ ಮಾಡಿದ್ದೇನೆ. ಓದುಗರು ದಯವಿಟ್ಟು ಅಭಿಪ್ರಾಯ ತಿಳಿಸಬೇಕು)
ಆಸೆಯಿಲ್ಲ ನನಗೆ
ದೊಡ್ಡ ಮನುಷ್ಯನಾಗಲು
ನನ್ನ ಗುರುತು ನಿಮಗಿದೆ
ಸಾಕೆನಗೆ ಅದೇ
ಒಳ್ಳೆಯವರಿಗೆ ಒಳ್ಳೆಯವ
ಕೆಟ್ಟವರಿಗೆ ಕೆಟ್ಟವನಾಗಿ ಕಂಡಿದ್ದೇನೆ
ಇದುವರೆಗೆ
ಯಾರಿಗೆ ಎಷ್ಟು ಅಗತ್ಯವೋ ಅಷ್ಟೇ
ನನ್ನ ಪರಿಚಯವೂ ಅವರಿಗೆ
ಪ್ರಾಪ್ತಿ ಎಂಬುದು
ಎಷ್ಟು ವಿಚಿತ್ರ ಈ ಬದುಕಿನೊಳಗೆ
ಇರುಳು ಮುಗಿಯುವುದಿಲ್ಲ
ಆದರೆ ಹಗಲುಗಳು ಓಡಿ ಹೋಗುತ್ತಿವೆ
ಎಲ್ಲಿಗೆ?
ವಿಚಿತ್ರವೆಂದರೆ
ಈ ಜೀವನ ಓಟವೇ
ಉಳಿದು ಬಿಡುತ್ತಾರೆ ನಮ್ಮವರು ಹಿಂದೆ
ಓಟದಲ್ಲಿ ನಾನು ಗೆದ್ದರೆ
ಸೋತೆನೆಂದರೆ
ಓಡಿಬಿಡುತ್ತಾರೆ ಮುಂದೆ
ಮರೆತು ನನ್ನನೇ
ಕುಳಿತು ಬಿಡುತ್ತೇನೆ ಒಮ್ಮೊಮ್ಮೆ
ಈ ನೆಲದ ಮಣ್ಣ ಮೇಲೆಯೇ
ನನ್ನ ಜಾಗ
ತೋರಿಸುತ್ತದೆ
ಅದಕೆ ಇದೆ ನನ್ನ ಒಪ್ಪಿಗೆ
ಕಲಿಸಿದೆ ಕಡಲು
ಜೀವನದ ಒಂದೊಂದು ಮಗ್ಗುಲು
ಶಾಂತವಾಗಿ ಹರಿಯುವುದು
ತನ್ನ ವಿಲಾಸದಲೇ ತಾನಿರುವುದು
ದೋಷವಿರಬಹುದು
ದ್ರೋಹದ ಹುನ್ನಾರವಿಲ್ಲ
ನನ್ನೊಳಗೇ ಅವು
ಸುಟ್ಟು ಬೂದಿಯಾಗುತ್ತವೆ
ನನ್ನೊಂದು ಕಣ್ ಸನ್ನೆಗೇ
ಎಂದೂ ದಾರಿ ತಪ್ಪಿದ್ದಿಲ್ಲ
ನನ್ನ ಪ್ರೀತಿ
ನನ್ನ ಸ್ನೇಹ
ಈ ಕಾಲಯಾನದೊಳಗೆ
ಏನನ್ನು ಕಟ್ಟಿ ಹಾಕಿದೆ
ಕೈಗಡಿಯಾರ ಕೊಂಡುಕೊಂಡು?
ಕಾಲವೇನೋ ಉಳಿಯಿತು
ನನ್ನ ಬೆನ್ನ ಹಿಂದೆಯೇ!
ಮನೆಯನೊಂದು ಕಟ್ಟಿ ಕುಳಿತೆ
ಇರಬಹುದೆಂದೇ ನಿರಾಳ
ಆದರೆ ಮನೆಯ ಅಗತ್ಯಗಳೇ
ನನ್ನ ಅಲೆಮಾರಿ ಮಾಡಿಬಿಟ್ಟವೇ?
ನಿರಾಳದ ಮಾತು
ಆಡ ಬೇಡ ಗಾಲಿಬ್
ಮತ್ತೆ ಬಾರವು
ಬಾಲ್ಯದ ಭಾನುವಾರಗಳು
ಓಟದಲ್ಲಿ
ಕಳೆದು ಹೋಯಿತೇ
ಬದುಕಿನ ರಂಗು
ಕಾಲದ ಹಂಗು !
ನೀರಸವಾಗಿ ಬಿಟ್ಟವೇ
ಉಲ್ಲಾಸ ಚಿಮ್ಮುವ ಬದುಕು!
ಎದ್ದ ಕೂಡಲೇ
ನಕ್ಕು ನಲಿವ ಒಂದು ಬೆಳಗಿತ್ತು
ಈಗ ಎಷ್ಟೋ ಸಂಜೆಗಳು
ಬಿಮ್ಮನೆ ಕಳೆದು ಹೋಗುತ್ತಿವೆ
ಎಷ್ಟು ದೂರ ಬಂದು ಬಿಟ್ಟೆವು
ಸಂಬಂಧಗಳ ಸೆರೆಗು ಹಿಡಿದು
ಕಳೆದುಕೊಂಡು ಬಿಟ್ಟಿದ್ದೇವೆ
ನಮ್ಮನ್ನೇ
ನಮ್ಮವರಿಗಾಗಿ
ನಮ್ಮ ಇರವನ್ನೇ
ಆಕ್ಷೇಪವಿದೆ ಜನರಿಗೆ
ನನ್ನ ಹುಚ್ಚು ನಗುವಿನ ಬಗೆಗೆ
ಕದ್ದು ಮುಚ್ಚಿ ಸುಸ್ತಾಗಿದ್ದೇನೆ
ದುಃಖಗಳ ಒಳಗೆ
ಖುಷಿಯಾಗಿ ಇರುತ್ತೇನೆ
ಖುಷಿಯಾಗಿ ಇಡುತ್ತೇನೆ
ಕಾಳಜಿ ಇಲ್ಲದಿರಬಹುದು
ನನ್ನ ಬಗ್ಗೆ ನನಗೇ
ಭರಪೂರ ಇದೆ
ನನ್ನವರ ಬಗೆಗೆ
ಬೆಲೆಯಿಲ್ಲ ನನಗೇನೂ!
ಗೊತ್ತಿದೆ ನನಗೂ
ಆದರೂ
ಬೆಲೆಕಟ್ಟುತ್ತಾ ಬಂದಿದ್ದೇನೆ
ನಿಭಾಯಿಸಲಾರದ ಸಂಬಂಧಗಳಿಗೂ
Sept 17/ 21
Subscribe to:
Post Comments (Atom)
No comments:
Post a Comment