Monday, 14 August 2023

old woman at Mortuary

ಆಸ್ಪತ್ರೆಯ ಹೊರಗೆ ಕಲ್ಲು ಬೆಂಚಿನ ಮೇಲೆ ಮುದುಕ ಮುದುಕಿ. ಸುತ್ತಲೂ ಅಬೋ ಎನ್ನುವ ಕತ್ತಲು. ಹನ್ನೊಂದು ಗಂಟೆ ಇರಬೇಕು! ನಿರ್ಜನ ರಸ್ತೆ. ಎಲ್ಲಿಗೆ ಹೋಗಬೇಕು? ಕೆಲವು ಗಂಟೆಗಳ ಹಿಂದೆಯಷ್ಟೇ ಆ ಮುದುಕಿ ಐ.ಸಿ.ಯು ನಲ್ಲಿದ್ದ ವೈದ್ಯರಿಗೆ ಕೇಳಿದ್ದಳು "ನಿಜವಾಗಿ ಎಲ್ಲ ಮುಗಿದು ಹೋಯಿತೇ, ಡಾಕ್ಟರ್? "ಹೌದು ಮೇಡಂ ಕ್ಷಮಿಸಿ. ನಾವು ಮಾಡಬಹುದಾದ ಎಲ್ಲ ಪ್ರಯತ್ನಗಳನ್ನೂ ಮಾಡಿದೆವು" "ಮತ್ತೆ ಎದೆ ಇನ್ನೂ ಏರಿಳಿಯುತ್ತಿದೆಯಲ್ಲ?" ಅಸಹಾಯಕ ನಗೆ‌ನಕ್ಕರು ಅವಳ ಮಾತಿಗೆ. ಆವರೆಗೂ ಕಾರ್ಡಿಯಾಕ್ ಮಾನಿಟರ್ ಒಳಗೆ ತಕಪಕನೆ ಮೇಲೆ ಕೆಳೆಗೆ ಕುಣಿಯುತ್ತಿದ್ದ ಗ್ರಾಫಿನಂತಹ ಗೆರೆ ಸಡನ್ನಾಗಿ ನೇರವಾಗಿತ್ತು. ಸ್ತಬ್ಧವಾಗಿತ್ತು ಕೂಡ. ಅದನ್ನು ನೋಡುತ್ತಾ ಡಾಕ್ಟರ್ "ಇದು ಐ.ಸಿ.ಯು. ದಯವಿಟ್ಡು ಇಲ್ಲಿ ಅತ್ತು ಕರೆದು ರಂಪಮಾಡಬೇಡಿ. ಉಳಿದ ರೋಗಿಗಳಿಗೆ ಗಾಬರಿಯಾಗುತ್ತದೆ." ಕೈಮುಗಿದಿದ್ದರು. ತಾಜಾ ಹೆಣವೊಂದನ್ನು ಬೀಳ್ಕೊಂಡ ಇನ್ನೊಂದು ಮುದಿಹೆಣ ಐಸಿಯುವಿನಿಂದ ಹೊರಗೆ ನಡೆದು ಬಂದಿತು. ಹೆಣ ನಡೆದು ಬಂದಿತು. ಹೆಣ್ಣು ಹೆಣ. ಅದರ ಹಿಂದೆ ಅವಳ ಮುದುಕ ಮತ್ತು ಅವರ ಎಳೆಯ ವಯಸ್ಸಿನ ಸೊಸೆ. ಮಾತು ಕಳೆದುಕೊಂಡಿದ್ದರು. ದನಿಯೇ ಇಲ್ಲದವರು ದನಿ ತೆಗೆದು ಅಳುವುದೆಂತು? ಮುದುಕಿಯ ಕಣ್ಣ ಮುಂದೆ, ಮಲಗಿದ ಮಗನ ದೇಹದೊಳಗಿಂದ ಬುಳಬುಳನೆ ಹರಿಯುತ್ತಿರುವ ರಕ್ತ! ಅದು ಅವಳ ರಕ್ತ. ಗರ್ಭದಲ್ಲಿಟ್ಟುಕೊಂಡು ಬೆಳೆಸಿದ, ಹಾಲೂಡಿಸಿ ಬಲಿಸಿ, ಬಲಿಷ್ಠನನ್ನಾಗಿ ಮಾಡಿದ ರಕ್ತ! " ಇದು ರಕ್ತ ಕಣೋ drain out. ಮಾಡಲಾರೆ" ಎಂದು ಕೋಪದ ಗಳಿಗೆಯಲ್ಲಿ ಅವನಿಗೊಮ್ಮೆ ನುಡಿದಿದ್ದಳು- ರಕ್ತ ಸಂಬಂಧದ ಮಹತ್ವ ತಿಳಿಸಲು "ಯಾರಿಗ್ ಬೇಕು ನಿನ್ನ ರಕ್ತ? ನೀನೇ ಸುರಕೋ" ಎಂದು ಅವಳು ಕೊಟ್ಟ ರಕ್ತವನ್ನೆಲ್ಲ ಯಾವುದೋ ಆಸ್ಪತ್ರೆಯ ಹಾಸಿಗೆಯ ಮೇಲೆ ಬಸಿದು ಹೋಗಿಬಿಟ್ಟ!!!!! ೩೮ ವರುಷಗಳ ಹಿಂದೆ, "ಘಾಟ್ಕೋಪರ್ ಮಾರುಕಟ್ಟೆಯಲ್ಲಿರುವ ದಾಳಂಬರಿ ಹಣ್ಣನ್ನೆಲ್ಲಾ ಬಹುಶಃ ನೀನೇ ಮುಗಿಸಿದ್ದೀಯ!!!" ತುಂಬು ಬಸುರಿಯನ್ನು ಕಿಚಾಯಿಸಿದ್ದ ಅವಳ ಗಂಡ. ಚೊಚ್ಚಲ ಮಗು ಹೊಟ್ಟೆಯಲ್ಲಿ ಮುಲುಕಾಡಿತ್ತು. ಭವ್ಯ ಕನಸು ಕಂಡಿದ್ದಳು !! ಇಂತಹ ಒಂದು ತಿರುವಿನಲ್ಲಿ ದೈವ ಹೊಂಹಾಕಿ ಕಾಯುತ್ತಿತ್ತೆಂದು ಅವಳಿಗೇನು ಕನಸು ಬಿದ್ದಿತ್ತೇ???? ಎಂಥ ಘೋರ ನನಸು!! ಬೊಮ್ಮಟೆಯಾದಾಗಿನಿಂದ ಭಯವೇ! ಮಾತಿಗೊಮ್ಮೆ ಜೋಕೆ...ಜಾಗ್ರತೆ... ಹುಷಾರು. ಮೈ ಬಿಸಿಯಿರಬಹುದೇ? ಯಾಕೆ ಈ ರಚ್ಚೆ! ಏನಾಗಿರ ಬಹುದು ಕೂಸಿಗೆ?...ಶಾಲೆಯಲ್ಲಿ ಏನಾಗಿರಬಹುದು? ....ಬೈಕಿನಲ್ಲಿ ಹೋಗಿದ್ದಾನೆ ...ಕಾಲೇಜು ಇನ್ನೂ ಬಿಟ್ಡಿಲ್ಲವೇ? ಏನು ಸ್ನೇಹಿತರೋ ಹಾಳು...ಫೋನ್ ಮಾಡೋಕೆ ಏನು ಧಾಡಿ? ಎಲ್ಲದರ ಹಿಂದೆ‌ ಏನೋ ಆಗಿಬಿಡಬಹುದೆಂಬ ಭಯ. ಕಾಲ್ಪನಿಕ ಭಯವೇ ನಿಜವಾಗಿ ಧುತ್ತೆಂದು ಎದುರಾಗಿ ಬಿಟ್ಟರೆ? ಹಳದಿ ಪಂಚೆಯುಟ್ಟು, ಹಣೆಯಲ್ಲಿ ತಿರುಮಣಿ ಧರಿಸಿಕೊಂಡು ಹಸೆಮಣೆಗೆ ಬಂದಾಗ ಸಾಕ್ಷಾತ್ ರಾಮಾನುಜಾಚಾರ್ಯರೇ! ಎಂದು ಅವಳ ಅಣ್ಣ ಹೇಳಿದ್ದನಲ್ಲ? ಮದುವೆ ಓಕುಳಿಯಾಡಿ ಹನ್ನೆರಡು ವರುಷ ಕಳೆದದ್ದಷ್ಟೇ! ಮುಖದಮೇಲೆಲ್ಲಾ ರಕ್ತದ ಓಕುಳಿ ‌ಸಿಡಿಯುತ್ತಿತ್ತು. ತಲೆಯ ಕೆಳಗೆ ನೇವರಿಸಿದಾಗ ಕೈಯಿಗೆ ಹತ್ತಿದ್ದು ರಾಮಾ ರಕ್ತ. ಅಲ್ಲದೇ ಹಾಸಿಗೆಯನ್ನೂ ಒದ್ದೆಮಾಡಿತ್ತು. ದಾದಿಗಳು ತಾನೇ ಎಷ್ಟು ಒರೆಸಿಯಾರು? ಹೊರಗಿನಿಂದ ಕೊಡುತ್ತಿದ್ದ ರಕ್ತವೆಲ್ಲ ಬಾಯಿಗೆ ತುರುಕಿದ ಸಕ್ಷನ್ ನಳಿಕೆಯ ಮೂಲಕ ಹೊರಗೆ ಹರಿದು ಬಾಟಲಿನೊಳಗೆ ತುಂಬುತ್ತಿತ್ತು. ಆಂತರಿಕ ರಪ್ಚರ್ ಅಂತೆ. ಹಾಗೆ ಕೊಟ್ಟದ್ದು ಹೀಗೆ ಹೊರಗೆ. ಒಳಗೆ ಇಳಿಯಲೇ ಇಲ್ಲ. ಅವಳ ರಕ್ತವನ್ನು ಅವನ ದೇಹ ತಿರಸ್ಕರಿಸಿಬಿಟ್ಟಿತ್ತು. "ನಿನ್ನ ಮಗುವೇನೇ? ಎಷ್ಟು ಚೆಂದ ಎಲ್ಲಾದರೂ ಕದ್ದುಕೊಂಡು ಬಂದೆಯಾ?" "ಇಲ್ಲ ಇದು ಹೈಬ್ರಿಡ್ ತಳಿ" ಸಟ್ಟನೆ ಉತ್ತರಿಸಿದ್ದಳು. ಫೆರೆಕ್ಸ್ ಜಾಹಿರಾತಿಗೆ ಕೊಡು.... "ಡಾಕ್ಟರೇ ಇವನು ಹಾಲೇ ಕುಡಿಯೋಲ್ಲ" "ಗುಂಡಣ್ಣ ಇವನು ಹಾಲು ಕುಡಿಯೋಲ್ಲ ಅಂದರೆ ನಾನು ನಂಬುವುದಿಲ್ಲ" ಎತ್ತಿಕೊಂಡ ವೈದ್ಯರು ನಾಲ್ಕು ತಿಂಗಳ ಮಗುವನ್ನು ಪರೀಕ್ಷೆಮಾಡುತ್ತಾ ನಕ್ಕಿದ್ದರು. ಹೆಮ್ಮೆಯಿಂದ ಬೀಗಿದ್ದಳು. ಗಂಡನ ಮನೆಯ ಸಂಸಾರ‌ ದೊಡ್ಡದು. ಮನೆ ತುಂಬಾ ಮಕ್ಕಳು. ಯಾರಾದರೂ ತನ್ನ ಮಗುವನ್ನು ಎತ್ತಿಕೊಂಡು ಬೀಳಿಸಿಬಿಟ್ಟರೆ? ತನ್ನ ಭೀಮಕಾಯದ ಮಗುವನ್ನು ಅವಳು ಕೆಳಗೆ ಇಳಿಸುತ್ತಲೇ ಇರಲಿಲ್ಲ. "ಅಮ್ಮಾ ಕುಡಿದ ಹಾಲನ್ನೆಲ್ಲಾ ಕಕ್ಕಿಬಿಟ್ಟ ನೋಡು ..." ಅವಳು ಸಂಕಟದಿಂದ ಅಳು ಮೋರೆ ಮಾಡಿದರೆ "ಹಾಗೆ ಕಣೇ ಕಕ್ಕಿದ ಮಕ್ಕಳು ಕುಕ್ಕೆ ತೋರ. ಬಿಕ್ಕಿದ ಮಕ್ಕಳು ಬುಟ್ಟಿ ತೋರ" ಗಾದೆ ಕೇಳಿಲ್ವಾ ಎಂದು ಅವಳಮ್ಮ ಸಂಭ್ರಮದಿಂದ ಮಗುವನ್ನೆತ್ತಿಕೊಂಡು ಸ್ವಚ್ಛ ಮಾಡುತ್ತಿದ್ದಳು. ದೃಷ್ಟಿ ತೆಗೆಯಲು ಮಾತ್ರ ತೀವ್ರ ವಿರೋಧಿಸುತ್ತಿದ್ದಳು..."ಅಷ್ಟು ಚೆಂದದ ಮಗುವಲ್ಲೇ..ಯಾರ ಕಣ್ಣು ತಾಕಿದೆಯೋ ..." "ಸುಮ್ಮನಿರಮ್ಮ ನೀನು ..." ಯಾವಾಗಲೂ ಗದರುತ್ತಿದ್ದಳು ಮೂಗು ಗಂಟಲಿಗೆ ತುರುಕಿದ ನಾನಾ‌ಬಗೆಯ ನಳಿಕೆಗಳು! ನಿಶ್ಚಲ ಮಲಗಿದ ದಢೂತಿ ದೇಹದ ಕೈ ಹಿಡಿದು ಪಂಚಭೂತಗಳನ್ನೆಲ್ಲಾ ಕೇಳಿಕೊಂಡಿದ್ದಳು ಮುದುಕಿ. "ನನ್ನ ಮಗುವನ್ನು ಉಳಿಸಿ ಕೊಡಿ" ಆ ಪಂಚಭೂತಗಳು ಕ್ಯಾರೇ ಎನ್ನದೆ ಅವಳ ಪ್ರಾರ್ಥನೆಯನ್ನು ತಾವೇ ನುಂಗಿಬಿಟ್ಟವು. ಮೂವತ್ತೇಳರ ಅವಳ ಮಗ ಪಂಚಭೂತಗಳಲ್ಲಿ ಲೀನವಾಗಿ ಹೋಗಿದ್ದ. ನಿದ್ದೆ ಎಚ್ಚರ... ಎಚ್ಚರ ನಿದ್ದೆಗಳ ಮಧ್ಯೆ ಕನಸಿನ ಅಸಂಗತ ಲೋಕ. ಯಾವುದ್ಯಾವುದೋ ಹಾದಿಗಳು ಎಲ್ಲಿಂದಲೋ ಬಂದು ಕೂಡಿಕೊಂಡು ಬೇರೆಯಾಗುವವು. ಕನಸಿನಲ್ಲಿ ಮಾತ್ರ ಸತ್ತವರು ಸಾಯುವುದೇ ಇಲ್ಲ. ಸಹಜ ನಡೆದು ಬರುತ್ತಾರೆ ಜೊತೆ ಜೊತೆಗೆ. ಕನಸು ಕಾಣುವ ಮನಸ್ಸಿಗೂ ಮಾಯೆ!!! ಸತ್ತವರೆಲ್ಲ ಎದ್ದು ಬಂದರು ಹೇಗೆ? ಎಂದು ಕೇಳುವುದೇ ಇಲ್ಲ! ಅವರು ಸತ್ತಿದ್ದರೆ ತಾನೇ? ಕನಸಿಗೆಲ್ಲಿದೆ ತರ್ಕ? ದೇಶ ಕಾಲ ಕ್ರಿಯೆಗಳು ಕನಸಿನ ಹಾದಿಯಲ್ಲಿ ಕಲಸು ಮೇಲೋಗರ, ಅಯೋಮಯ. ಯಾವುದೋ ಊರಿನ ಹೆಬ್ಬಾಗಿಲು ಇನ್ನಾವುದೋ ಊರಿನ ನಡುಮನೆಯಲ್ಲಿ ತೆರೆದು ಕೊಳ್ಳುತ್ತದೆ. ಕೋಣೆ ಬಾಗಿಲುಗಳು ದೇಶಾಂತರ ಹಾರುವುದೂ ಉಂಟು. ಬೆಂಗಳೂರಿನ ಮನೆಯ ಪಡಸಾಲೆಯಲ್ಲಿ ‌ಅಮೇರಿಕಾದ ಲ್ಯಾಂಡ್ ಸ್ಕೇಪ್!!! ಸತ್ತ ಮನೆಯಲ್ಲಿ ಜೆಟ್ ಲ್ಯಾಗ್!! ದೇಶಕಾಲಗಳ ಅಯೋಮಯ ಸ್ಥಿತಿಯಲ್ಲಿ ಗೊಂದಲಗೊಂಡ ಮನಸ್ಸು ಅತ್ತು ಕ್ಷಣ ಸಮಾಧಾನಗೊಂಡರೆ. ಮರುಕ್ಷಣವೇ ಸಮಾಧಾನ ಮೀರಿ ರೋದಿಸುತ್ತದೆ ಮತ್ತೆ. ರೋದನ ಸಮಾಧಾನ, ಸಮಾಧಾನ ರೋದನಗಳ ಮಧ್ಯೆ ಸಾರು, ಹುಳಿ, ಪಲ್ಯ, ಉಪ್ಪಿನಕಾಯಿ, ಮೆಣಸಿನ ಪುಡಿ, ಚಟ್ಣಿಪುಡಿ, ಇಡ್ಲಿ ,ದೋಸೆ, ಕಾಫಿ??!!! "ಹೊಟ್ಟೇ ನಿನ್ನಿಂದ ನಾ ಕೆಟ್ಟೆ" "ಸತ್ತವರ ಮನೆಯಲ್ಲಿ ಯಾರು ಕೆಟ್ಟರು ಎಂದರೆ ಸತ್ತವರೇ ಕೆಟ್ಟರು" ಅವನು ತಾನೇ‌ ಮಿಸ್ ಮಾಡಿಕೊಂಡದ್ದು 'ವಡೆ ಪಾಯಿಸ, ಸುಕ್ಕಿನುಂಡೆ!!' ಅವನಿಗೆ ಇಷ್ಟವಾದ ಜಾಮೂನು ಜೊತೆಗೆ ಮೂಸೂರು ಪಾಕ್ ! ! ಬಂದವರು ಸವಿದು ಚಪ್ಪರಿಸಿ ಉಂಡು ಹೋಗಿರಬಹುದೇ? ಕರೆಯುವುದೇ ಅದಕ್ಕಲ್ಲವೇ? ಅವರು ಸವಿಯದಿದ್ದರೆ ಆತ್ಮಕ್ಕೆ ತೃಪ್ತಿಯಾದರೂ ಹೇಗೆ ಆದೀತು? ಬದುಕಬೇಕು ಸಾಯಲು ಸಾಧ್ಯವಾಗದ್ದಕ್ಕೆ ಮುದುಕಿ, ನಿರಂತರ ಶೋಕ ಮಡಿಲಲ್ಲಿ ಕಟ್ಟಿಕೊಂಡು.... ಹನ್ನೊಂದರ ರಾತ್ರಿ ಮುದುಕ ಮುದುಕಿ ಆಸ್ಪತ್ರೆಯ ಹೊರಗೆ ಕಂಗಾಲಾಗಿ ಕುಳಿತಿದ್ದರು. ಮಗುವನ್ನು ಬಿಟ್ಟು ಬಂದಿದ್ದ ಸೊಸೆ ಓಲಾ ಹತ್ತಿ ಮನೆಗೆ ಹೊರಟು ಹೋದಳು. ಆಸ್ಪತ್ರೆಯ ಓಡಾಟಕ್ಕೆ ಅನುಕೂಲವಾಗಲೆಂದು ಅದರ ಬಳಿಯೇ ಅವರ ಕಿರಿಯ ಮಗ ಅಮೇರಿಕೆಯಿಂದಲೇ ಒಂದು ಸುಸಜ್ಜಿತ ಹೊಟೆಲ್ ಒಂದನ್ನು ಕಾದಿರಿಸಿದ್ದ. ಅವಸರ ಪಡಬೇಡ ನಾನು ಹೋಗಿ ಅಲ್ಲಿನ ಸ್ಥಿತಿಗತಿವಿಚಾರಿಸಿ ತಿಳಿಸುವೆ ಆಮೇಲೆ ಅಗತ್ಯವಾದರೆ ಹೊರಡು" ಎಂಬ ಅವಳ ಮಾತನ್ನು ಲೆಕ್ಕಿಸದೇ ದುಬಾರಿ ಶ್ರೇಣಿಯಲ್ಲಿ ಅಮೇರಿಕಾದಿಂದ ಹೊರಟೇ ಬಿಟ್ಟಿದ್ದ. ಅಲ್ಲಿಂದಲೇ ವೈದ್ಯರ ಬಳಿ ಮಾತನಾಡಿದ್ದನಂತೆ. ಅವಳಿಗಾದರೂ ಅದರ ಬಗ್ಗೆ‌ ಏನು ಗೊತ್ತಿತ್ತು? ಮಗ ಹುಷಾರಾಗಿ ಬರುತ್ತಾನೆ ಎಂಬ ನಂಬಿಕೆಯಿಂದಲೇ ಅವಳು ಮುಂಬಯಿಯಿಂದ ಪುಣೆಗೆ ಹೊರಟಿದ್ದಲ್ಲವೇ? ಆ ರಾತ್ರಿಯಲ್ಲಿ ಹೋಟೆಲ್ಲಿಗೆ ಹೋಗಬೇಕು ಅವರು. ಒಂದು ರಿಕ್ಷಾ ಬಂದು ನಿಂತಿತು ಇವರು ಹತ್ತಿ ಕುಳಿತರು. ಕೇವಲ ೨೫ ರೂಗಳಷ್ಟು ದೂರ. ಅವನ ಬಳಿ ಚಿಲ್ಲರೆ ಇರಲಿಲ್ಲ. ಇವರ ಬಳಿ ಇದ್ದದ್ದು ಬಂದ ಮಾತ್ರ. "ಉತರಾ ಉತರಾ" ಎಂದು ನಿರ್ಧಾಕ್ಷಿಣ್ಯವಾಗಿ ಇಳಿಸಿ ಹೋಗಿಬಿಟ್ಟ. ಹಿಂದೆ ಆಸ್ಪತ್ರೆ ಭಯಾನಕವಾಗಿ ನಿಂತಿದ್ದರೆ ಮುಂದೆ ನಿರ್ಜನ ರಸ್ತೆ. ಮುದುಕ ಮುದುಕಿ ನಿಧಾನ ನಡೆಯ ಹತ್ತಿದರು. ಎದುರಿನಿಂದ ಯಾರೋ ಒಬ್ಬರು ಬರುತ್ತಿದ್ದಾರೆ!!! "ಏನು ಯಾಕೆ ಇಷ್ಟು ಹೊತ್ತಿನಲ್ಲಿ ಇಬ್ಬರೇ ಮಾತಾರಿಗಳು ( ವಯಸ್ಸಾದವರು) ಬರುತ್ತಿದ್ದೀರಿ? ಎಲ್ಲಿಗೆ ಹೋಗಬೇಕು?" ಬಂದವನ ದನಿಯಲ್ಲಿ ಕಕ್ಕುಲಾತಿ "ಓಕ್ ವುಡ್ ಹೊಟೇಲ್ಲಿಗೆ" "ಅಯ್ಯೋ ಅದು ಇರುವುದು ಆ ಕಡೆಗೆ...ಈ ಕಡೆ ಯಾಕೆ ಬರುತ್ತಿದ್ದೀರಿ" ? "ಅಷ್ಟು ಪರಿಚಯವಿಲ್ಲದ ಊರು, ಕತ್ತಲೆ ಬೇರೆ..." " ಮುಂಬಯಿಯಲ್ಲಿ ಇರುವುದಾ? ಇಲ್ಲಿಗೆ ಯಾಕೆ ಬಂದಿರಿ? ಏನಾಯಿತು? ಇಷ್ಟು ಹೊತ್ತಿನಲ್ಲಿ ಯಾಕೆ‌ ಬರುತ್ತಿದ್ದೀರಿ?" ಮುದುಕಿಯ ದುಃಖದ ಕಟ್ಟೆ ಒಡೆಯಿತು...ಭೋರೆಂದು ಅಳತೊಡಗಿದಳು... " ನಾನು... ನಾನು ನಿಮ್ಮನ್ನು ರಿಕ್ಷಾಮಾಡಿ ಕರೆದುಕೊಂಡು ಹೋಗುತ್ತೀನಿ..ಇರಿ..." ಆಘಾತ ತಡೆದು ಕೊಳ್ಳಲಾರದವನಂತೆ ಕರಗಿ ಹೋದ ದಾರಿ ಹೋಕ. ತಡಬಡಾಯಿಸಹತ್ತಿದ. ಅಲ್ಲಿ ಇಲ್ಲಿ ಕಾಡಿ ಬೇಡಿ ಒಂದು ರಿಕ್ಷಾ ಪತ್ತೆ ಮಾಡಿ ಇಬ್ಬರ ಮಧ್ಯೆ ತಾನೂ ಕುಳಿತ. "ರಡೂ ನಕಾ ರಡೂ ನಕಾ...(ಅಳಬೇಡ)" ಇಬ್ಬರ ಬೆನ್ನು ನೇವರಿಸಿದ, ತಬ್ಬಿಕೊಂಡ, ಭುಜ ಹಿಡಿದ, ಕೈ ಅಮುಕಿದ, ಅಕ್ಷರಶಃ ಮುದುಕಿಯ ಕಣ್ಣೀರು ಒರೆಸಿದ. ಹೊಟೆಲ್ ಬರುವವರೆಗೆ ತಬ್ಬಲಿಗಳನ್ನು ತಬ್ಬಿಕೊಂಡೇ ಇದ್ದ. ಬೇಡವೆಂದರೂ ಕೇಳದೇ ಹೊಟೆಲ್ಲಿನ ಕೌಂಟರ್ ವರೆಗೆ ಬಂದು ಅವರಿಗೆ ವಿಷಯ ತಿಳಿಸಿ ನಮ್ಮ ರೂಮಿಗೆ ಸುರಕ್ಷಿತವಾಗಿ ಬಿಡಬೇಕೆಂದು ಅವರನ್ನು ಕೇಳಿಕೊಂಡ. "ಊಟ ಮಾಡಿ ಮಲಗಿಕೊಳ್ಳಿ" ಎಚ್ಚರಿಸಿದ. "ಸಬ್ ಠೀಕ್ ಹೋಗಾ" ಎಂದು ಬೆನ್ನು ತಿರುಗಿಸಿದವನಿಗೆ "ಔರ್ ಕ್ಯಾ ಠೀಕ್ ಹೋಗಾ? ಕ್ಯಾ ಬಚಾ ಹೈ "ಎಂದು ದೈನ್ಯಳಾಗಿ ನೋಡಿದಳು. ಹಾಗೆಲ್ಲ ಹೇಳಬೇಡ...ಅಳಬೇಡ ಎಂದು ಮೆಲುದನಿಯಲ್ಲಿ ಉಸುರಿ ಅವರತ್ತ ನೋಡುತ್ತಲೇ ಬಂದ ರಿಕ್ಷಾ ಹತ್ತಿ ಹೊರಟು ಹೋದ. ಅವಳು ಐನೂರರ ನೋಟೊಂದನ್ನು ಕೊಡಹೋದಳು. ಅವಳ ಕೈಯನ್ನು ಭದ್ರವಾಗಿ ಅಮುಕಿ, ಬೇಡ ಎನ್ನುವಂತೆ ತಲೆ ಕೊಡವಿಕೊಂಡು ಹೊರಟು ಹೋದ. ಕಣ್ಣೀರಾಗಿದ್ದನೇ??? ಸತ್ತು ಮಲಗಿದ ಮಗನೇ ಎದ್ದು ಬಂದುಬಿಟ್ಟನೇ? ಈ ವರೆಗೆ ತಬ್ಬಿ ತಡವರಿಸಿದವನು ಅವನೇ? ಸರಿ ಸುಮಾರು ಅದೇ ವಯಸ್ಸು. ಯಾವುದೋ ಔಷಧಿ ತರಲು ಆಸ್ಪತ್ರೆಯತ್ತ ಹೊರಟಿದ್ದ. ನಮ್ಮನ್ನು ಕಂಡವನೇ ತನ್ನ ಕೆಲಸ ಮರೆತು ನಮ್ಮೊಡನೆ ಬಂದಿದ್ದ. ಕತ್ತಲಲ್ಲಿ ಅಂದು ಸರಿಯಾಗಿ ಕಾಣದ ಆ ಮುಖ ಇಂದು ಸ್ಪಷ್ಟವಾಗಿ ಕಾಣಿಸುತ್ತಿದೆ..‌.. ಯಾವುದಾದರೂ ಆಟೋ ಹತ್ತಿದಾಗೆಲ್ಲ ಪಕ್ಕದಲ್ಲಿ ಬಂದು ಕುಳಿತುಬಿಡುತ್ತಾನೆ...ಆಯೀ ಬರಾ ಆಹೆ ಕಾ...( ಅಮ್ಮ ಚೆನ್ನಾಗಿದ್ದೀಯಲ್ವಾ). ತನ್ನ ದೈನ್ಯ ದರಿದ್ರ ಸ್ಥಿತಿಯಲ್ಲಿ ಆ ಸುಸಜ್ಜಿತ ತಾರಾ ಹೊಟೆಲ್ ಒಳಗೆ ಹೋಗಲು ಅವಳ‌ ಮನಸ್ಸು ಸುತರಾಂ ಒಪ್ಪಲಿಲ್ಲ. ಹಾಗೆಂದೇ ಸೊಸೆಗೆ ಹೇಳಿದ್ದಳು. ಅವಳ ಮನೆಗೆ ಹೋಗಲೂ ಸಾಧ್ಯವಿರಲಿಲ್ಲ. ಆಗಷ್ಟೇ ಮನೆ ಒಕ್ಕಲು‌ ಹೊಕ್ಕ ಅವರು ಸೋಫಾ ಮಂಚ ಎಂದು ಇನ್ನೂ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಹೊಸ ಮನೆಯ ಷಾಪಿಂಗ್ ಸಂಭ್ರಮದಲ್ಲಿದ್ದರು ಮಗ ಸೊಸೆ. ಅಷ್ಟರೊಳಗೆ ಮರಣ ಪತ್ರಕ್ಕಾಗಿ ಎಡತಾಕುವ, ಮಾರ್ಗ್ ನ ಒಳಗೆ ಹೆಣಕ್ಕೆ ಜಾಗ ವ್ಯವಸ್ಥೆ ಮಾಡುವ ಓಡಾಟ ಅವಳ ಎಳೆಯ ಸೊಸೆಯ ಪಾಲಿಗೆ ಬಂದಿತ್ತು. ಸೊಸೆಯ ಜೊತೆ ಅವಳು ಬೇಡವೆಂದರೂ ಮುದುಕ ಮುದುಕಿಯರೂ ಓಡಾಡಿದರು. ದೇಹ ಇನ್ನೂ ತಣ್ಣಗಾಗಿರಲಿಲ್ಲ, ಆಗಲೇ ಮುಂದಿನ ವ್ಯವಸ್ಥೆಯ ಓಡಾಟ. ಬೀಗಿತ್ತಿ ಬಂದು ಪುರೋಹಿತರಿಗೆ ಹೇಳಬೇಕೇ? ಎಂದು ಕೇಳಿದರು. ಅವಳೇನು ಉತ್ತರ ಕೊಟ್ಟಾಳು? ಮರಣ ಧೃಡೀಕರಿಸಿದ ಚೀಟಿಯನ್ನು ಆಸ್ಪತ್ರೆಯಿಂದ ಒಯ್ದು ಒಂದು ಕಛೇರಿಗೆ ತಲಪಿಸಬೇಕಾಯಿತು. ಅಲ್ಲಿ ಯಾರೋ ತಮಿಳರ ಒಂದು ಕುಟುಂಬದ ಹೆಣ್ಣು ಮಕ್ಕಳು ಎದೆಯೊಡೆಯುವಂತೆ ದನಿ ತೆಗೆದು, ಹಣೆ ಚಚ್ಚಿಕೊಳ್ಳುತ್ತಾ ಅಳುತ್ತಿದ್ದರು. ಮುದುಕಿಗೆ ಹಾಗೆ ಅಳಲು ಸಾಧ್ಯವಾಗಲೇ ಇಲ್ಲ. ತಮಿಳು ಹೆಂಗಸಿನ ದನಿಗೆ ಅವಳ ಎದೆ ನಡುಗುತ್ತಿತ್ತು. ಅವರು ಕಲ್ಲು ಬೆಂಚಿನ ಮೇಲೆ ಕುಳಿತಾಗಲೂ ಎಡಬಿಡದೇ ಅದು ಅವಳನ್ನು ಹಿಂಬಾಲಿಸುತ್ತಿತ್ತು. "ಹೊಟೇಲಿನ ಆ ಹಾಸಿಗೆಯ ಮೇಲೆ ನಾ ಮಲಗಲಾರೆ. ಸುಪ್ಪತ್ತಿಗೆ ಸುಖಕ್ಕೆ, ನನ್ನ ಈ ಭಾವದಾರಿದ್ರ್ಯಕ್ಕೆ ಅಲ್ಲ" ಖಂಡಿತವಾಗಿ‌ ನುಡಿದಳು. ಮಗ ಗುಣವಾಗುತ್ತಾನೆ ಸ್ವಲ್ಪ ದಿನಗಳ ಕಾಲ ಆ ಹೋಟೆಲ್ ನಲ್ಲಿಯೇ ಅವನನನ್ನು ಜೊತೆಗಿಟ್ಟುಕೊಂಡು ಆರೈಕೆ ಮಾಡಬೇಕು. ಎಂದೆಲ್ಲಾ ಕನಸು ಹೆಣೆದಿದ್ದಳು. ಅದಕ್ಕೆ ಅವಕಾಶವೇ ಆಗಲಿಲ್ಲ. ಅವಳ ಆ ಸ್ಥಿತಿಗೆ ಮಾರ್ಗ್ ( mortuary) ಹೊರಗಿನ ಜಗಲಿಯೇ ಸೂಕ್ತ ಎನಿಸುತ್ತಿತ್ತು. ಹೇಗೂ ಒಳಗೆ ಮಗ ಮಲಗಿದ್ದನಲ್ಲ? ಅವಳಿಗೆ ಇನ್ನೇತರ ಭಯ ? ಆಪ್ತರೆಲ್ಲ ಬೆಂಗಳೂರಿನಿಂದ ವಿಮಾನದಲ್ಲಿ ಬಂದಿಳಿದರು. ಅವನಿರುವಾಗಲೇ ಇವರೆಲ್ಲ ಬಂದಿದ್ದರೆ ಎಷ್ಟು ಸಂತೋಷ ಪಡುತ್ತಿದ್ದ!!! "ಈ ಮೂಲೇಲಿ ಒಂದು ಹೆಣ ಬೀಳತೈತಿ. ರಕ್ತಕಾರಿಕೊಂಡು ಒಂದು ಜೀವ...." ಹಾಗೆಂದೇನೂ ಆ ' ವಾಸುದೇವ' ಹೇಳಿರಲಿಲ್ಲ. ಅಭಂಗಗಳನ್ನು ಹಾಡಿಕೊಂಡು ಬೆಳಗಿನ ಹೊತ್ತು ವಾಸುದೇವರುಗಳು ಯಾಯಾವಾರಕ್ಕಾಗಿ ಮಹಾರಾಷ್ಟ್ರದಲ್ಲಿ ತಿರುಗುವುದು ಸಾಮಾನ್ಯವಾಗಿ ಕಾಣುವ ಚಿತ್ರ. ಎಂಥ ಕಂಠ, ಎಂಥ ಮಾಧುರ್ಯ! ವಿಟ್ಠಲಾ.....ಮಾಯ ಬಾಪ್ಪಾ!!! ಇಪ್ಪತ್ತನೆಯ ಮಹಡಿಗೂ ಅಲವರಿಕೆಯ ದನಿ ಕೇಳಿಸುತ್ತದೆ. ಹದಿನಾರನೇ ಮಹಡಿಯ ಬಾಲ್ಕನಿಯಿಂದ ಕಂಡ ಅವನನ್ನು ಹಿಡಿಯಲು ಕೆಳಗೆ ಓಡಿದ್ದಳು. ಅವನು ತಾಳ ಹಿಡಿದು ನಿಧಾನ ನಡೆಯುತ್ತಿದ್ದರೂ ಅವಳು ಕೆಳಗೆ ಇಳಿಯುವ ಹೊತ್ತಿಗೆ ಬಹಳ ದೂರ ಸಾಗಿದ್ದ. ಓಡಿ ಅವನನ್ನು ಹಿಡಿದು ಕೈಗೆ ಸಿಕ್ಕಷ್ಟು ಚಿಲ್ಲರೆಯನ್ನು ಅವನ ಜೋಳಿಗೆಯೊಳಗೆ ಹಾಕಿದ್ದಳು. ತನಗಿಷ್ಟವಾದ ಅಭಂಗವನ್ನೇನಾದರೂ ಹಾಡಬಹುದೆಂದು ಕಾದಿದ್ದಳು. ತಲೆಯ ಮೇಲೆ ಕೈಯಿಟ್ಟು ವಿಟ್ಠಲ ಒಳ್ಳೆಯದು ಮಾಡುವನೆಂದು ಹರಸಿದ್ದ. ಅದೇ ಸಂಜೆ ಸಂಗೀತದ ಹುಚ್ಚು ಹತ್ತಿಸಿಕೊಂಡ ಇದೇ ಮಗ ವಾಸುದೇವನ ಚಿತ್ರದ ಜೊತೆಗೆ ಅವನ ಹಾಡನ್ನೂ ಅವನ ಬಗ್ಗೆ ಮಾಹಿತಿಯನ್ನೂ ಕಳುಹಿಸಿದ್ದ. ಭೀಮ್ ಸೇನ್ ಜೋಶಿ ಕೇಳದೇ ನಿದ್ದೆಗೆ ಜಾರುವ ಪರಿಪಾಠವೇ ಇರಲಿಲ್ಲ ಮಗನಿಗೆ. ರಕ್ತಕಾರಿಕೊಳ್ಳುತ್ತಾ ಪ್ರಜ್ಞಾಹೀನನಾಗಿ ಮಲಗಿದವನಿಗೆ ಹಾಡು ಕೇಳಿಸಿದರೆ ಎದ್ದು ಬಿಡಬಹುದೇ? ಹಾಡು ಹಾಕಲಾ? ಸೊಸೆಯನ್ನು ಕೇಳಿದಳು. ಇದು ಐ.ಸಿ.ಯು. ಸೊಸೆ ಎಚ್ಚರಿಸಿದಳು. ಬೇಕಾದರೆ ಕಿವಿಯಲ್ಲಿ ಏನಾದರೂ ಹೇಳಿ ಕಿವಿಗೆ ಏನನ್ನೂ ಚುಚ್ಚಿಲ್ಲವಲ್ಲ? ವಿಷಾದದ ನಗೆ ನಕ್ಕಳು. " ಬೇಡ...ನೀನು ಅಲ್ಲಿಗೆಲ್ಲಾ ಬರಬೇಡಮ್ಮಾ, ಆ‌್ಯಂಬುಲೆನ್ಸ್ ಒಳಗೇ ಮುಖ ನೋಡಿ ಹೋಟೆಲ್ಲಿಗೆ ವಾಪಸು ಹೋಗಿಬಿಡು...ನೋಡೋದಕ್ಕೆ ಕಷ್ಟ ಆಗುತ್ತೆ ಕಣೇ... ಬೇಡ" ಬೆಂಗಳೂರಿನಿಂದ ಬಂದಿದ್ದ ಅಣ್ಣ ಅವಳಿಗೆ ಹೇಳಿದ. ಆದರೂ ಎಲ್ಲರೂ ಹೊರಟರು- ಅವಳ ಸೊಸೆಯೂ ಮುದುಕ ಮುದುಕಿಯರೂ ಹೊರಟರು ವೈಕುಂಠ ಧಾಮಕ್ಕೆ. ಕಾಲ್ಬಳೆ ತೊಟ್ಟ ಮುದ್ದಾದ ಹಾಲು ಬಣ್ಣದ ದುಂಡನೆಯ ಕಾಲು ಮಡಿಲಲ್ಲಿ ಮಲಗಿ ಒದೆಯುತ್ತಿತ್ತು. ಕೈಕಾಲು ಬಡಿಯುವ ಹಿಗ್ಗು....ತಾಯಿಯ ಸಂಭ್ರಮ. ಕರುಳು ಕತ್ತರಿಸಿಕೊಟ್ಟ ನೋವು. ಬಿಗಿದ ಬಿಳಿ ಹೊದಿಕೆಯಿಂದ ಆಚೆಗೆ ಹೊರಬಿದ್ದ ಕಾಲುಗಳು ಕಪ್ಪಾಗಿಬಿಟ್ಟಿದ್ದವು. ಎರಡೂ ಹೆಬ್ಬೆರಳುಗಳನ್ನು ಸೇರಿಸಿ ದಾರ ಬಿಗಿದಿದ್ದರು. ಕಾಲ್ಬೆರಳಿನಿಂದ ತಲೆಯವರೆಗೆ ಏನೇನೋ ಶಾಸ್ತ್ರ. ಸ್ನಾನದ ಬದಲು ನೀರಿನ ಪ್ರೋಕ್ಷಣೆ. ತುಳಸಿ ದಳ ಹಾಕುವುದಕ್ಕೆಂದು ಬಾಯಿಗೆ ತುರುಕಿದ ಹತ್ತಿಯನ್ನು ಕಿತ್ತು ತೆಗೆದ ಅವಳ ಅಣ್ಣನ ಕೈಗೆಲ್ಲ ರಕ್ತ ಮೆತ್ತಿಕೊಂಡಿತ್ತು. ಹತ್ತಾರು ಜನ ಚಟ್ಟದಿಂದ ಎತ್ತಿ ಚಿತೆಯ ಮೇಲೆ ಇರಿಸಿದರು ಅವಳ ಮಗುವನ್ನು... ಸೌದೆ ಪೇರಿಸಿಲೆಂದೇ ನೇಮಕವಾದ ಹುಡುಗರು, ಶಿಸ್ತಾಗಿ ಬಂದು ಸರಸರನೆ ಕಟ್ಟಿಗೆ ಒಟ್ಟಿದರು ಅವಳ ಮಗುವಿನ ಮೇಲೆ. ರೇಷಿಮೆ ಸೀರೆ ಹೂಮಾಲೆಗಳಿಂದ ಅಲಂಕಾರಗೊಂಡ ತೊಟ್ಟಿಲು!! ಕೆಳಗಿನಿಂದ ಮೇಲಕ್ಕೆ ಮೇಲಿನಿಂದ ಕೆಳಕ್ಕೆ ಆ ಬದಿಯಿಂದ ಈ ಬದಿಗೆ ಸಿಂಗರಿಸಿದ ಗುಂಡಪ್ಪನ ಜೊತೆಗೆ...ಮಗುವನ್ನು ಮುತ್ತೈದೆಯರು ಹಾಡಿ, ತೂಗಿ ಮಲಗಿಸಿದರು...ಜೋ ಅಚ್ಯುತಾನಂದ ಜೋ ಜೋ ಮುಕುಂದಾ...ಪರಮಾನಂದ...ಮುಕುಂದಾ.... ರಾಮ ಗೋವಿಂದಾ...ಕಿವಿಯಲ್ಲಿ ಹೆಸರಿಟ್ಟರು. ಗೋವಿಂದ ಗೋವಿಂದ.... ನಾರಾಯಣ.... ಧಗ ಧಗನೆ ಉರಿದು ಹೋದ..... ಢಬ್ ....ಮುದುಕಿಯ ತಲೆ ಸಿಡಿದು ಹೋಳಾಯಿತು. ಹೊತ್ತಿಕೊಂಡ ಬೆಂಕಿ ಆರಲೇ ಇಲ್ಲ ...ಇಲ್ಲ...ಆರಲಿಲ್ಲ ಬೆಂಕಿ....ಅಯ್ಯೋ ಬೆಂಕಿ ...ಉರಿ...ಸಂಕಟ... ಅವಳ ಕಿರಿಯ ಮಗ ಅಮೇರಿಕೆಯಿಂದ ಬಂದವನೇ ಸೂಟ್ಕೇಸ್ ಬಿಸಾಕಿ ಮಾರ್ಚರಿಯ ಕಡೆಗೆ ಓಡಿದ್ದ. ಅಷ್ಟು ಕಿರಿಯ ವಯಸ್ಸಿನಲ್ಲೇ ಹಿರಿಯ ಜವಾಬ್ದಾರಿ ಹೊತ್ತು ತನ್ನ ಅಣ್ಣನಿಗೆ ಚಿತೆಗೆ ಬೆಂಕಿ ಕೊಟ್ಟಿದ್ದ. ಕಲಾಪಗಳೆಲ್ಲ ಮುಗಿದ ಮೇಲೆ ಬಟ್ಟೆ ಬದಲಾಯಿಸಿದವನೇ ಓಡಿ ಬಂದು ಸ್ಮಶಾನದ ಒಂದು ಕಲ್ಲು ಬೆಂಚಿನ ಮೇಲೆ ಕುಳಿತಿದ್ದ ಮುದುಕಿಯ ಮಡಿಲೊಳಗೆ ದೊಪ್ಪನೆ ಬಿದ್ದ. ಅವನಾದರೋ ಹೋದ. ಇವನನ್ನು ಹೇಗೆ ಕಾಪಾಡಿಕೊಳ್ಳಲಿ ದೇವರೇ? ಭಯ ಊರಿಬಿಟ್ಟಿತ್ತು. ತಲೆ ಕೂದಲಲ್ಲಿ ಬೆರಳಾಡಿಸುತ್ತ ಅವನ ತಲೆ ನೇವರಿಸಿದಳು. ಕಣ್ಣು ಮುಚ್ಚಿದರೆ ಸಾಕು ಉರಿಯ ಕೆನ್ನಾಲಗೆ ನುಂಗಲು ಬರುತ್ತದೆ... ಮುದುಕಿ ತನ್ನ ಚಿತೆಯವರೆಗೆ ಈ ಕೆನ್ನಾಲಗೆಯನ್ನು ಹೊತ್ತು ಸಾಗಬೇಕಾಗಿದೆ. ಅದಕೆ ಕತ್ತಲಾಗಬೇಕಾಗಿದೆ.. ಶವಯಾತ್ರೆಗೆ ಬರುವ ಮುನ್ನ ತೀರ್ಥಯಾತ್ರೆಗೆ ಹೋಗಿದ್ದರು ಮುದಿ ದಂಪತಿ. ಅದು Explore ಮಾಡುವ ವಯಸ್ಸೇ? ಕಾರು ಮಾಡಿಕೊಂಡು ಹಿಮಾಲಯದ ಬೆಟ್ಟ ಗುಡ್ಡಗಳಲ್ಲಿ ಸುತ್ತಿದ್ದೇ ಸುತ್ತಿದ್ದು. ಯಾತ್ರೆ ಮುಗಿವ ಮುನ್ನ ಡ್ರೈವರ್ ಅವರಿಗೆ ಹಣಕಾಸಿನ ವಿಷಯದಲ್ಲಿ ಮೋಸ ಮಾಡಿದ್ದ. ಬಾಯಿ ಜೋರಿನ ಮುದುಕಿ " ಹಿಸಾಬ್ ಭಗವಾನ್ ಕರೇಗಾ" ( ದೇವರು ನೋಡಿಕೊಳ್ಳುತ್ತಾನೆ) ಎಂದು ಡ್ರೈವರ್ ಜೊತೆ ಜಗಳವಾಡಿದ್ದಳು. ಲೆಕ್ಕಾಚಾರ ಹೀಗೆ ಚುಕ್ತಾ ಆಗುವುದೆಂದು ಅವಳಿಗೇನು ಗೊತ್ತಿತ್ತು? ಹಿಮಪಾತ ಹೆಚ್ಚಾಗಿ ಅವರ ಕೇದಾರ ಯಾತ್ರೆ ರದ್ದಾಗಿತ್ತು. ಮಗನಿಗೆ ಕೇದಾರಕ್ಕೆ ಹೋಗಬೇಕೆಂಬ ಮಹದಾಸೆ ಇತ್ತು. "ರದ್ದಾಗಿದ್ದು ಒಳ್ಳೆಯದೇ ಆಯಿತು ಕೇದಾರನಾಥ. ಮಗ ಸೊಸೆ ಮೊಮ್ಮಗನೊಂದಿಗೆ ನಿನ್ನ ನೋಡಲು ಬರುವೆ ಎಂದು ಕೇದಾರನಾಥನಿಗೆ ಮಾತು ಕೊಟ್ಟಳು. ಕೆಲವು ದಿನಗಳಿಂದ ಮುನಿಸಿಕೊಂಡಿದ್ದ ಮಗನ ಸಂಬಂಧವನ್ನು ಸರಿಪಡಿಸಿಕೊಳ್ಳಲು ಒಳ್ಳೆಯ ಅವಕಾಶವಿದೆಂದು ಖುಷಿಯಾಗಿದ್ದಳು. ೨೭ ರ ಮಧ್ಯರಾತ್ರಿ ಮುಂಬಯಿ ತಲಪಿದರು. ಅದೇ ಹೊತ್ತಿಗೆ‌ ಮಗ ಆಸ್ಪತ್ರೆ ಸೇರಿದ್ದ. ಮಾರನೆಯ ದಿನ ಸಂಜೆಯ ಹೊತ್ತಿಗೆ ಕೇದಾರನಾಥನೇ ಅವನನ್ನು ಕರೆಸಿಕೊಂಡುಬಿಟ್ಟಿದ್ದ. ಕೇದಾರನಾಥ ಅವಳಿಗೆ ಹೀಗೆ ಉಪಕಾರವನ್ನೇ ಮಾಡಿದ್ದ. ಇಲ್ಲದಿದ್ದರೆ ಅವಳಿಗೆ‌ ಮಗನ ಮುಖವಾದರೂ ಎಲ್ಲಿ ಸಿಗುತ್ತಿತ್ತು? ಬದುಕಿಗೆ ರಿವರ್ಸ್ ಗೇರ್ ಇಲ್ಲವೆಂಬಂತೆ ಅವಳ ಮುದುಕ ಅಸೂಕ್ಷ್ಮನಾಗಿ ನಿರ್ದಯನಂತೆ ಅವಳಿಗೆ ಕಾಣಿಸಿದ. ತಿಳಿವಳಿಕೆಗೂ ಅನುಭವಕ್ಕೂ ಎಷ್ಟು ಅಂತರ!! ಮಕ್ಕಳು ದೊಡ್ಡವರಾಗಿ ಗೂಡು ಬಿಟ್ಟು ಹಾರಿಹೋದ ಮೇಲೆ ಗಂಡನಿಗೆ ವೃತ್ತಿಯಿಂದ ನಿವೃತ್ತಿಯೂ ದೊರೆತು ಬದುಕಿನ ಯಾಂತ್ರಿಕತೆ , ಏಕತಾನತೆಯಲ್ಲಿ ಹೊಸತನವನ್ನು ಕಂಡುಕೊಳ್ಳುವುದು ಕಷ್ಟವೆನಿಸಿತ್ತು ಅವಳಿಗೆ. ಟಿ.ವಿ. ಧಾರಾವಾಹಿಗಳಂತೆ ಬದುಕಿಗೆ ದಿನಕ್ಕೊಂದು ತಿರುವುದ್ದರೆ ಎಷ್ಟು ಚೆನ್ನ ಎಂದು ಕೊಳ್ಳುತ್ತಿದ್ದಳು. ಆದರೆ ಸಾಮಾನ್ಯ ತಿರುವಲ್ಲ ಗಾಡಿ ಹೀಗೆ ಪ್ರಪಾತಕ್ಕೆ ಬೀಳುವುದೆಂದು ಅವಳೆಂದಾದರೂ ಊಹಿಸಿದ್ದಳೇ?? ಆಘಾತವನ್ನು ತಿಳಿಯಾಗಿಸಲು ಕಿರಿಯ ಮಗ ಅವರನ್ನು ತನ್ನ ಜೊತೆ ಅಮೇರಿಕೆಗೆ ಎಳೆದುಕೊಂಡು ಬಂದ. ಎಲ್ಲಿಗೆ ಹೋದರೆ ತಾನೇ ಏನು? ಅದೇ ಮನಸ್ಸು ಅದೇ ದೇಹ ಅದೇ ಗಿರಕಿ ಕಹಾನಿ. "ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ" ಎಂದಾಗ 'ಇಲ್ಲಿ- ಅಲ್ಲಿ' ಬಿಟ್ಟು 'ಇನ್ನೆಲ್ಲಾದರೂ' ಎನ್ನುವ ಒಂದು third option ಇದೆ. ಆದರೆ 'ಇಲ್ಲಿಯೂ ಇರಲಾರೆ, ಮತ್ತೆಲ್ಲಿಗೂ ಹೋಗಲಾರೆ!' ಎನ್ನುವಾಗ ಯಾವ ಆಯ್ಕೆಗಳೂ ಇಲ್ಲ. ನಿರಾಧಾರ ಬಯಲಲ್ಲಿ ನಿಂತಹಾಗೆ. ಬಹುಶಃ ಸಾವೊಂದೇ ಇರುವ ಆಯ್ಕೆ. ಆದರೆ ಅದು ಬರಬೇಕಲ್ಲ? "ಶಾಂತಿಯನ್ನು ಹುಡುಕಿಕೊಂಡು ಹೊರಗೆಲ್ಲೋ ಅರಸುವ ನಮ್ಮಂತಹ ಹುಳುಗಳ ಪಾಡೆಲ್ಲಾ ಇಷ್ಟೇ! ಎಲ್ಲಿಗೆ ಬಂದರೂ ಅಷ್ಟೇ ! ಸೋಕ್ಷಮೋಕ್ಷವಾಗುವುದಿಲ್ಲ. ಪಾಪಿ ಸಮುದ್ರಹೊಕ್ಕರೂ ಮೊಳಕಾಲುದ್ದವೇ ನೀರು!" ಎಂದು ಅವಳಿಗೆ ಎನಿಸುತ್ತಿತ್ತು. "ಗುರು ಬಿನ್ ಕೋನ್ ಬತಾಯೇ ಬಾಟ್ " ಕಬೀರನ ಗೀಳು ಹತ್ತಿತು. ಅವನನ್ನು ಹುಚ್ಚು ಹಿಡಿದಂತೆ ಕೇಳುತ್ತಿದ್ದಳು. ಥಟ್ಟನೆ ಆಗ ಅವಳಿಗೆ ಇನ್ನೊಂದು ಆಯ್ಕೆ ಹೊಳೆಯಿತು. ಅದೆಂದರೆ - ಹೊರಗಲ್ಲೋ ಹೋಗುವುದಲ್ಲ.. ಒಳಗೆ ಹೋಗುವುದು. ಒಳಗೆ ಕೂಡ ಸ್ಥಾಯಿಯಾಗಿ ನಿಲ್ಲಲು ಸಾಧ್ಯವೇ?. ಹೊರಗೆ -ಒಳಗೆ ಹೀಗೆ ಬಂದು ಹೋಗಿ ಮಾಡುತ್ತಿರಬೇಕಲ್ಲ?- ಪತರಗುಟ್ಟುತ್ತಾ... ತಿತಿಕ್ಷಾ ಎನ್ನುವುದು ಎಷ್ಟು ದೊಡ್ಡ ಗುಣ? ಇದರ ಬಗ್ಗೆ ವೇದಗುರುಕುಲದಲ್ಲಿ ಒಬ್ಬರು ಅವಳಿಗೆ ತಿಳಿಸಿ ಹೇಳಿದ್ದರು. ಗಂಡನ ಈ ಗುಣ ಅವಳಿಗೆ ಅಸೂಕ್ಷ್ಮವೆಂದೇ ಭಾಸವಾಗುತ್ತಿತ್ತು. ಅದು ಸಾಧಿಸುವವರೆಗೆ ಈ ಮಿಥ್ ಆಫ್ ಸಿಸಿಫಸ್ ನ ಯಾತ್ರೆ ನಿಲ್ಲುವುದಿಲ್ಲ ಎಂದೇ ಭಾವಿಸುತ್ತಿದ್ದಳು. ಅನೇಕ ಸಮಾಧಾನಗಳು ಹಿತೈಷಿಗಳಿಂದ ಹರಿದು ಬರುತ್ತಿದ್ದವು. ಎಲ್ಲವೂ ಬುದ್ಧಿಗೆ ಅರ್ಥವಾಗುತ್ತಿದ್ದವು. ಆದರೆ ಹೃದಯಕ್ಕೆ ಇಳಿಯುತ್ತಿದ್ದಿಲ್ಲ. ಹೇಳುವವರಾದರೂ ಬುದ್ಧಿಯಿಂದಲೇ ಹೇಳತ್ತಾರೆಯೇ ಹೊರತು ಅನುಭವದಿಂದ ಹೇಳುವುದಿಲ್ಲವಲ್ಲ? ನನಗೇ ಯಾಕೆ ಈ ಘೋರ ಕಷ್ಟ ? ಎಂದು ಕೇಳಿಕೊಳ್ಳುವಾಗ "ನಿನಗ್ಯಾಕೆ ಇಲ್ಲ ?"ಎಂದು ಧ್ವನಿಸಿದಂತಾಗುತ್ತದೆ. ಭಯವಾಗುತ್ತದೆ, ಎದೆ ನಡುಗುತ್ತದೆ. ಯಾರಿಗೂ ಇಂತಹ ಒಂದು ಅನುಭವವಾಗದಿರಲಿ ಘೋರಕಷ್ಟ ಬಾರದಿರಲಿ" ಎಂದೇ ಪ್ರಾರ್ಥಿಸುತ್ತಿದ್ದಳು ತಾಯಂದಿರಿಗೆ ಮಕ್ಕಳ ಬಗ್ಗೆ ಎಂದೂ ಕಾಡುವ ಭಾವವೆಂದರೆ ಪ್ರೇಮವಲ್ಲ! ಬದಲಾಗಿ ಅವರ ಸುರಕ್ಷೆಯ ಬಗೆಗೆ ಆತಂಕ, ಭಯ. ಮಾತಿಗೊಮ್ಮೆ ಜೋಪಾನ, ಜಾಗ್ರತೆ ಎಂದು ಅವರು ತಮ್ಮ ಮಕ್ಕಳನ್ನು ಎಚ್ಚರಿಸುವುದರ ಹಿಂದೆ ಈ ಭಯವೇ ಅಡಗಿದೆ. ಅಂತಹ ಕಾಲ್ಪನಿಕ ಭಯವೊಂದು ದುತ್ತೆಂದು ವಾಸ್ತವದಲ್ಲಿ ಎದುರಾಗಿಬಿಟ್ಟರೆ ? ಹೋಗುವುದಾದರೂ ಎಲ್ಲಿಗೆ? ಇಲ್ಲಿಯೂ ಇರಲಾರೆ ಎಲ್ಲಿಗೂ ಹೋಗಲಾರೆ.... ಪದೇ ಪದೇ ಹೇಳಿಕೊಳ್ಳುತ್ತಾ ಮುದುಕಿ ಕಬೀರನ ಮೊರೆ ಹೊಕ್ಕರೆ "ಕಾಯಾ ನಹೀ ತೇರೀ ನಹೀ ತೇರಿ ಮತ್ ಕರ್ ಮೇರೀ ಮೇರೀ ....ಕಾಯಾ" ಅಲೆಯೊಳಗೆ ಅಲೆಯಾಗಿ ಪಂ.ಭೀಮ್ ಸೇನ್ ಜೋಶಿ..... ವಾಹ್ ಮುದುಕಿ ಅದೆಷ್ಟು ‌‌ಚೆಂದಾಗಿ ಮಗನ ಸಾವನ್ನು ನಗದು ಮಾಡಿಕೊಂಡು ಬಿಟ್ಟಳು. ತುಂಬಾ ಜೋರು ಮಾಡತಿದ್ದಳು. ಅವಳಿಗೆ ಹಂಗೇ ಆಗಬೇಕು....

No comments:

Post a Comment