Monday, 14 August 2023
Misc FB
ಪು. ಶಿ. ರೇಗೆಯವರ ಸಾವಿತ್ರಿ : ಪರ್ಯಾಪ್ತ ಅನುವಾದ:
ಮರಾಠಿ ಲೇಖಕ ಪುರುಷೋತ್ತಮ್ ಶಿವರಾಮ್ ರೇಗೆಯವರ ಸಾವಿತ್ರಿ ಕಾದಂಬರಿಯನ್ನು ಗಿರಿಜಾ ಶಾಸ್ತ್ರಿ ಯವರು ಅದೇ ಹೆಸರಿನಲ್ಲಿ ಭಾಷಾಂತರಿಸಿದ್ದಾರೆ. ಇದನ್ನು ಸುಧಾ ಆಡುಕುಳ ಅವರು ಆನಂದ ಭಾವಿನೀ ಎಂದು ರಂಗ ರೂಪಕ್ಕೆ ಅಳವಡಿಸಿ ಕರ್ನಾಟಕದ ಹಲವೆಡೆ ಇತ್ತೀಚೆಗೆ ಅದರ ಪ್ರದರ್ಶನಗಳು ನಡೆದವು. ನಾನು ಆನಂತರ ಗಿರಿಜಾ ಕಳಿಸಿದ ಅನುವಾದವನ್ನು ಓದಿದೆ. ಇದು ಗಿರಿಜಾಗೆ ನಾನು ಬರೆದ ಟಿಪ್ಪಣಿ:
ಪ್ರೀತಿಯ ಗಿರಿಜಾ,
ತನ್ನ ಜೀವನದ ದಿನ ದಿನದ ಆಗು ಹೋಗುಗಳು, ಮಾನಸಿಕ ಸ್ಥಿತಿ, ಆಲೋಚನೆಗಳು, ಹಾಗೂ ಸಮಕಾಲೀನ ವರ್ತಮಾನವನ್ನು ಕುರಿತ ಚಿಕ್ಕ ಚಿಕ್ಕ ಪತ್ರಗಳ ರೂಪದಲ್ಲಿದ್ದರೂ, ಒಂದು ಕಾವ್ಯದ ಗಹನತೆಯನ್ನು ಹೊಂದಿರುವ ಸಾವಿತ್ರಿ ಕಾದಂಬರಿಯ ವಸ್ತು-ವಿನ್ಯಾಸದ ಬಗ್ಗೆ ನಾನು ಇಲ್ಲಿ ಹೆಚ್ಚೇನೂ ಬರೆಯುವುದಿಲ್ಲ. ಇದು ಪ್ರೇಮನಿವೇದನೆಯೆಂದರೆ ಪ್ರೇಮ ನಿವೇದನೆ, ಅಲ್ಲವೆಂದರೆ ಅಲ್ಲ. ಯಾಕೆಂದರೆ ಇಲ್ಲಿ ಆಜ್ನಾತನಾಗಿ ಹಾಜರಿರುವ “ಆತನಿಗೆ” ಸಾವಿತ್ರಿ ಬರೆಯುವ ಪತ್ರಗಳಲ್ಲಿ ವ್ಯಕ್ತವಾಗುವ ಪ್ರೇಮ ಕೇವಲ ಆತನಿಗೇ ಸೀಮಿತವಾದುದಲ್ಲ. ಅದು ಒಂದು ಅತ್ಯುನ್ನತ ಮನಃಸ್ಥಿತಿಯಲ್ಲಿ ಅಷ್ಟೇ ಉನ್ನತ ಮನೋಭೂಮಿಕೆಯಲ್ಲಿ ಮಾತ್ರ ಸಾಧ್ಯವಾಗುವ ವಿಶ್ವಮಾನವ ಪ್ರಜ್ನೆ, ವಿಶ್ವಪ್ರೇಮ. ಈ ಕಾರಣಕ್ಕಾಗಿ ಈ ಸಾವಿತ್ರಿ ಮಹರ್ಷಿ ಅರಬಿಂದೋ ಅವರ Savitri: A legend and a Symbol ಮಹಾ ಕಾವ್ಯಕ್ಕೆ ಹತ್ತಿರ. ಕುವೆಂಪು ಕಾದಂಬರಿಗಳನ್ನೂ ನೆನಪಿಸುವ ಕೃತಿ.
ವಿಶೇಷವೆಂದರೆ ಈ ಎಲ್ಲ ಕೃತಿಗಳಲ್ಲೂ ಒಂದು ಪಯಣ ಅಥವಾ ಪರ್ಯಟನವಿದೆ. ಆ ಪಯಣ ವಾಸ್ತವಿಕವೂ ಹೌದು ಮಾನಸಿಕವೂ ಹೌದು. ತನ್ನದೇ ಬೆಳಕಿನಲ್ಲಿ ಮುನ್ಸಾಗುವ ಅನಂತ ಪಯಣ ಅದು. (ಟ್ರಾವೆಲ್ಲಿಂಗ್ ಇನ್ಫಿನಿಟೀ ಬೈ ಇಟ್ಸ್ ಓನ್ ಲೈಟ್ -ಸಾವಿತ್ರಿ ). ಅಕ್ಕನ ಹಂಬಲ ಮತ್ತು ಇಲ್ಲಿನ ಸಾವಿತ್ರಿಯ ಹಂಬಲಗಳ ನಡುವೆ ಹೋಲಿಕೆ ಇದ್ದೂ ಎರಡೂ ಒಂದೇ ಅಲ್ಲ. ಅಕ್ಕನ ವಚನಗಳ ದೇಹ ಕೇಂದ್ರಿತ ಮತ್ತು ಆತ್ಮ ಕೇಂದ್ರಿತ ಪ್ರತಿಮೆಗಳ ಭಾವ ತೀವ್ರತೆ ಇಲ್ಲಿಲ್ಲ.ಸಾವಿತ್ರಿ ಒಂದು ರೀತಿಯಲ್ಲಿ ವೈಚಾರಿಕವಾಗಿ ಚಿಂತಿಸುತ್ತಲೇ ಆ ವೈಚಾರಿಕತೆಯನ್ನು ಅನುಭವದಿಂದ ವಿಶ್ಲೇಷಣೆಗೆ ಒಳಪಡಿಸುವ ಪಾತ್ರ. ಎಲ್ಲ ಪತ್ರಗಳೂ “ಅವನಿಗಾಗಿ” ಬರೆಯಲ್ಪಟ್ಟವು. ಅವನು ಆದರ್ಶವಾದರೆ ಆದರ್ಶ ಜೊತೆಗೂಡುವಿಕೆ ಹಾಗೂ ಸಂಗಾತಿತನ ಸಾವಿತ್ರಿ ಬಿತ್ತುವ ಕನಸು.
ಆರಬಿಂದೋ ಅವರ ಸಾವಿತ್ರಿ ಯಂತೆಯೇ ಮನುಷ್ಯನಿಗೆ ತನ್ನ ನಶ್ವರತೆಯಾಚೆಗಿನ ದೈವಿಕ ಪ್ರೇಮದ, ದೈವಿಕ ಪ್ರಜ್ನೆಯ ಮತ್ತು ಶಾಶ್ವತ ಬದುಕಿನ ಹಾದಿಯನ್ನು ಈ ಕಾದಂಬರಿ ತೆರೆಯುತ್ತದೆ. ಇಬ್ಬರನ್ನೂ ಬೆಳೆಸುವ ಗಂಡು-ಹೆಣ್ಣು ಸಂಬಂಧದ ಮತ್ತು ವಿಶ್ವ ಪ್ರೇಮದ ಸ್ವರೂಪಗಳು ಈ ಕಾದಂಬರಿಯ ವಿನ್ಯಾಸದಲ್ಲಿ ಅನಾವರಣಗೊಂಡಿವೆ. ವೈಚಾರಿಕತೆಯಷ್ಟೇ ಅನುಭವವೂ ಇಲ್ಲಿ ಮುಖ್ಯವಾಗಿದೆ.
ಕಳೆದ ಶತಮಾನದ ಪೂರ್ವಾರ್ಧದಲ್ಲಿ ಅದರಲ್ಲೂ ನಾವು ಕನ್ನಡದಲ್ಲಿ ನವೋದಯ ಎಂದು ಯಾವುದನ್ನು ಗುರುತಿಸುತ್ತೇವೋ ಆ ಕಾಲದಲ್ಲಿ ಭಾರತೀಯ ಭಾಷೆಗಳ ಆಧುನಿಕ ಸಾಹಿತ್ಯದಲ್ಲಿ “ಪ್ರೇಮ” ಯಾಕೆ ಪ್ರಧಾನವಾಗಿ ಮುನ್ನೆಲೆಗೆ ಬಂತು ಎನ್ನುವುದು ಬೇರೆಯೇ ಆದ ಚರ್ಚೆ. ನಮ್ಮ ಬದುಕು ಮತ್ತು ಸಂಸ್ಕೃತಿಗಳು ಕ್ರಿಯಾಶೀಲವಾಗಲು ಮತ್ತು ಸೃಜನಶೀಲವಾಗಲು ನಿರ್ವಾಜ ಪ್ರೇಮವೇ ಬುನಾದಿ ಎನ್ನುವುದನ್ನು ಈ ಕಾದಂಬರಿಯೂ ಸಾದರ ಪಡಿಸುತ್ತದೆ.
ಈ ಕೃತಿಯ ಪತ್ರ ಸಂದರ್ಭಗಳು ಘಟನೆಗಳು ಮತ್ತು ಸಂಗತಿಗಳು ಮಹಾರಾಷ್ಟ್ರದಿಂದ ಹೊರಗಿನ ಅಂದರೆ ಕೊಡಗು, ಹಡಗು, ಜಪಾನಿನ ಪುರಾತನ ರಾಜಧಾನಿ Kyoto ನಗರ ಮತ್ತು ಲಂಡನ್ ಗಳನ್ನು ಸೂಚಿಸುತ್ತಿರುವುದು ಕುತೂಹಲಕರ. ಅಲ್ಲದೇ ಸಾವಿತ್ರಿ ತನ್ನ ಕೊನೆಯ ಪತ್ರ ಬರೆದದ್ದು ಆಗಸ್ಟ್ ೧೫, ೧೯೪೭ ರಂದು ! ಅದರಲ್ಲಿ ಪ್ರಾಯಶಃ ಸೃಜನಶೀಲತೆಯ ಒಂದು ವ್ಯಾಖ್ಯಾನ ಕೂಡಾ ದೊರಕುತ್ತದೆ:
“ ಹಾಗೆ ನೋಡಿದರೆ ನವಿಲಿಗೆ ನೃತ್ಯ ಮಾಡಲು ಎಲ್ಲಿ ಬರುತ್ತದೆ ? ಒಂದು ಕಾಲನ್ನು ಎತ್ತಿದ ತಕ್ಷಣ ಅದು ತನ್ನ ಸಮತೋಲನವನ್ನು ಕಳೆದು ಕೊಳ್ಳುತ್ತದೆ, ಸಾವರಿಸಲಿಕ್ಕಾಗಿ ಅದು ತಕ್ಷಣ ಕಾಲನ್ನು ಕೆಳಗೆ ಬಿಡುತ್ತದೆ. ಇನ್ನೊಂದು ಕಾಲನ್ನು ಮೇಲೆ ಎತ್ತುತ್ತದೆ. ಹೀಗೆ, ಮತ್ತೆ ಮತ್ತೆ......... ad infinitum. ನೋಡುವವರು ಅದನ್ನು ನೃತ್ಯವೆಂದು ಕರೆಯುತ್ತಾರೆ.” (ಕೊನೆಯ ಪುಟ)
ಈ ಸಾಲುಗಳು ಇಡೀ ಕಾದಂಬರಿಗೆ ಹೊಸ ಭಾಷ್ಯವನ್ನು ಬರೆಯುವಂತಿವೆ ಮಾತ್ರವಲ್ಲ, ನಮ್ಮ ಕ್ರಿಯಾಶೀಲತೆ ಮತ್ತು “ನಮ್ಮ ಅಹಮ್ಮಿನ ಕೋಟೆಯಲ್ಲಿ” ನಾವು ಜತನದಿಂದ ಕಾಪಿಟ್ಟುಕೊಂಡು ಬಂದಿರುವ ಸೃಜನಶೀಲತೆಯ ಕಲ್ಪನೆಯನ್ನೂ ಪುನರ್ವಿಮರ್ಶಿಸಲು ಒತ್ತಾಯಿಸುತ್ತವೆ.
ಸಾವಿತ್ರಿ ಚಾರಿತ್ರಿಕವಾಗಿ ಇನ್ನೂ ಒಂದು ದೃಷ್ಟಿಯಿಂದ ಮುಖ್ಯ. ಈ ಕಾದಂಬರಿ ಭಾರತೀಯ ಭೂ ಖಂಡದ ಸ್ತ್ರೀ ವಾದಗಳ ಪೂರ್ವ ಪೀಠಿಕೆಯಂತಿದೆ ಎಂದರೆ ತಪ್ಪಾಗಲಾರದು. ಕಳೆದ ಶತಮಾನದ ೩೦-೪೦ ರ ದಶಕಗಳ ಹೊತ್ತಿಗಾಗಲೇ ಗಣನೀಯ ಸಂಖ್ಯೆಯಲ್ಲಿ ಹೆಣ್ಮಕ್ಕಳು ವಿದ್ಯಾ ವಂತರಾಗಿದ್ದರು. ಬಹಳ ಮಂದಿ ಕಾಲೇಜು ಮೆಟ್ಟಲನ್ನೂ ಏರಿದ್ದರು. ಹಲವರು ಅದಕ್ಕಿಂತ ಉನ್ನತ ಮಟ್ಟದ ವ್ಯಾಸಂಗವನ್ನು ಕೂಡಾ ಪೂರೈಸಿದ್ದರು. ಅವರಲ್ಲಿ ಹೆಚ್ಚಿನವರು ಮೇಲ್ಜಾತಿ, ಮೇಲ್ವರ್ಗಗಳಿಗೆ ಸೇರಿದ್ದರು. ಅದೇನೇ ಇರಲಿ, ವಿದ್ಯಾವಂತ ಸ್ತ್ರೀಯರು ಈ ಹೊತ್ತಿಗೆ ತಮ್ಮ ಬಗ್ಗೆ, ತಮ್ಮ ವೈಯಕ್ತಿಕ ಮತ್ತು ಸಾರ್ವಜನಿಕ ಅಸ್ತಿತ್ವ ಮತ್ತು ಅಸ್ಮಿತೆಗಳ ಕುರಿತು ಹೊಸ ರೀತಿಯಲ್ಲಿ ಯೋಚಿಸಲು ಆರಂಭಿಸಿದ್ದರು. ಅದು ಮಹಿಳೆಯರ ಚಾರಿತ್ರಿಕ ಅಸ್ಮಿತೆಯ ಉದ್ಘಾಟನೆಯ ಕಾಲ. ‘ ಇಂದಿರಾ ಬಾಯಿ’ ಯರ ಕಾಲ. ತಾನು ಕೇವಲ ಗಂಡು ದುರ್ನೋಟದ ವಸ್ತುವಲ್ಲ, ತನಗೂ ಒಂದು ಚರಿತ್ರೆ, ಮನಸ್ಸು, ಹಂಬಲ ಹಾರೈಕೆಗಳಿವೆ ಎನ್ನುವ ಆಧುನಿಕ ಜಾಗೃತಿ ಸ್ತ್ರೀ ಲೋಕದಲ್ಲಿ ತಲೆಯೆತ್ತಿದ ಸಮಯ. ಅಂತಹ ಮಹಿಳಾ ಓದುಗವರ್ಗ ಕೂಡಾ ಈ ಕಾಲದಲ್ಲಿ ನಿರ್ಮಾಣವಾಯಿತು. ತಮ್ಮ ಹಂಬಲಗಳನ್ನು ಮುಚ್ಚಿಡದೇ ನಿರ್ಭಯವಾಗಿ ಮಹಿಳಾ ಲೇಖಕಿಯರು ಬರೆಯಲಾರಂಬಿಸಿದಾಗ ಹೊಸ ಹೊಸ ಸ್ತ್ರೀ ಕೇಂದ್ರಿತ ಸಾಹಿತ್ಯ ಕೂಡಾ ಉತ್ಪಾದಿತವಾಯಿತು. ಮಾನಸಿಕವಾಗಿ ತನ್ನನ್ನು ಅರ್ಥ ಮಾಡಿಕೊಳ್ಳಬಲ್ಲ, ತನ್ನನ್ನು ಸಮಾನ ಗೌರವದಿಂದ ನಡೆಸಿಕೊಳ್ಳಬಲ್ಲ ಪ್ರೀತಿಯ ಸಂಗಾತಿಯ ಹಾರೈಕೆ ಈ ಸಂದರ್ಭದ ಮಹಿಳಾ ಸಾಹಿತ್ಯದಲ್ಲಿ ಕಾಣುತ್ತದೆ. ಆದುದರಿಂದ ಒಂದೋ ಪ್ರೇಮಮಯ ಸಫಲ ದಾಂಪತ್ಯ ಅಥವಾ ಪ್ರೇಮವಿಲ್ಲದ ಮುರಿದುಬಿದ್ದ ವಿಫಲ ದಾಂಪತ್ಯ ಕಥನಗಳು ಈ ಸಂದರ್ಭದಲ್ಲಿ ಸೃಷ್ಟಿಯಾದವು ಮತ್ತು ಜನಪ್ರಿಯವಾದವು. ನಮ್ಮ ತ್ರಿವೇಣಿ ಈ ಸಾಹಿತ್ಯ ಪ್ರಕಾರದಲ್ಲಿ ಅತ್ಯುತ್ತಮ ಕೃತಿಗಳನ್ನು ನೀಡಿದ ಮೇರು ಮಣಿಗಳಲ್ಲಿ ಒಬ್ಬರು. ಗಂಭೀರ ಪುರುಷ ಲೇಖಕರೂ ಏರು ಹುಬ್ಬಿನ ವಿಮರ್ಶಕರೂ ಮಹಿಳಾ ಕಾದಂಬರಿಗಳನ್ನು “ಅಡುಗೆ ಮನೆ ಸಾಹಿತ್ಯ” ಎಂದು ಲೇವಡಿ ಮಾಡಿರಬಹುದು. ಅದು ಅವರ ಖರ್ಮ! ಆದರೆ ಈ ಕೃತಿಗಳು ಆಧುನಿಕ ಭಾರತೀಯ ಭಾಷೆಗಳ ಸ್ತ್ರೀ ವಾದದ ದಾಖಲೆಗಳು ಎನ್ನುವುದಂತೂ ನಿಜ. ಪು. ಶಿ. ರೇಗೆಯವರ ಸಾವಿತ್ರಿ ಈ ಕಾಲದಲ್ಲಿ ಬಂತು ಎನ್ನುವುದು ಗಮನೀಯ. ತನ್ನ ಆಸೆ, ಹಂಬಲ, ಇಚ್ಛೆ, ಕಾಮನೆಗಳನ್ನು ದಿಟ್ಟವಾಗಿ ಹೇಳಿಕೊಂಡವರಲ್ಲಿ ಪ್ರಾಯಶಃ ಯಮಿ ವೇದ ಕಾಲದವಳು, ದ್ರೌಪದಿ, ಮಾಧವಿ ಮೊದಲಾದವರು ಪುರಾಣ ಕಾಲದವರು, ಅಕ್ಕ ಐತಿಹಾಸಿಕ ಕಾಲದವಳು, ಸಾವಿತ್ರಿ ಹಾಗೂ ಅವಳ ಸಮಕಾಲೀನ ಮತ್ತು ಅನಂತರದ ಕಥಾ ನಾಯಕಿಯರು ಆಧುನಿಕರು.
ನಿಮ್ಮ ಮಾತುಗಳಲ್ಲಿ ನೀವು ತೋಡಿಕೊಂಡ ಭಾಷಾಂತರದ ಪಡಿಪಾಟಲುಗಳು ಎಲ್ಲ ಅನುವಾದಕರರೂ ಎದುರಿಸುವ ಕಷ್ಟಗಳು. ಭಾಷಾಂತರದ ಓದುಗರಿಗೆ ಸಾಮಾನ್ಯವಾಗಿ ಅವುಗಳ ಅರಿವಿರುವುದಿಲ್ಲ. ನಾವು ತೆಗೆದುಕೊಳ್ಳುವ ಭಾಷಾಂತರ ನಿರ್ಧಾರಗಳ ಕುರಿತೂ ಯಾರೂ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಇರಲಿ. ನೀವು ಸಾವಿತ್ರಿ ಯನ್ನು ಸೊಗಸಾಗಿ ಕನ್ನಡಕ್ಕೆ ತಂದಿದ್ದೀರಿ. ಈ ಕಾದಂಬರಿಯನ್ನು ರೂಪಿಸುವ ಪುಟ್ಟ ಪುಟ್ಟ ಪತ್ರಗಳು ಸಾವಿತ್ರಿಯ ದೈನಿಕವನ್ನೂ, ಅವಳ ಆಲೋಚನೆಗಳನ್ನೂ, ‘ಆತನ’ ಅನಿಸಿಕೆಗಳಿಗೆ ಅವಳ ಪ್ರತಿಕ್ರಿಯೆಗಳನ್ನೂ ಒಳಗೊಂಡಿವೆ. ಇವನ್ನು ಕನ್ನಡದಲ್ಲಿ ಕಾಗದ ಬರೆಯುವ ಪ್ರಮಾಣೀಕೃತ ಶೈಲಿಯಲ್ಲಿ ನೀವು ಪ್ರಸ್ತುತ ಪಡಿಸಿರುವುದರಿಂದ ಕನ್ನಡ ಸಾವಿತ್ರಿ ಆಪ್ತವಾಗಿದೆ. ನಿತ್ಯದ ವಾಸ್ತವ, ಮನೋ ಲಹರಿಗಳು, ಪ್ರಶ್ನೆಗಳು, ವಿಚಾರಣೆ, ಸಲಹೆಗಳು, ಆತಂಕಗಳು, ಮುಂದಿನ ಯೋಜನೆಗಳು ಇತ್ಯಾದಿ ಚಿಕ್ಕ ಚಿಕ್ಕ ವಾಕ್ಯಗಳು, ಚಿಕ್ಕ ಚಿಕ್ಕ ವಾಕ್ಯಗಳಲ್ಲಿ ಚೆನ್ನಾಗಿ ಮೂಡಿ ಬಂದಿವೆ. ಹಾಗೇಯೇ ದೀರ್ಘ ವಾಕ್ಯಗಳು ಚಿಂತನೆಯ ಗಹನತೆಯನ್ನು ಸೂಚಿಸುವಂತಿವೆ. ಈದನ್ನು ಓದುವಾಗ ನಮ್ಮ ಅಥವಾ ಪಕ್ಕದ ಮನೆ ಮಗಳು ಮಾತಾಡಿದಂತೆ ಅಥವಾ ಹೇಳಿದಂತೆ ಅನ್ನಿಸುತ್ತದೆ. ತಿರು ಪೇಟೆಯಿಂದ ಪ್ರಪಂಚ ಸುತ್ತಿ ಬರುವ ಪತ್ರಗಳಲ್ಲಿನ ಆಶಯಗಳು ನಮ್ಮನ್ನೂ ಅಲ್ಲೆಲ್ಲ ತಿರುಗಾಡಿಸಿ ಆನಂದ ಭಾವಿನಿಯ ಸಂತಸ ಮತ್ತು ಆತಂಕ ಎರಡರಲ್ಲೂ ಭಾಗವಹಿಸುವಂತೆ ಮಾಡುತ್ತವೆ.
ಯಾವುದೇ ಭಾಷಾಂತರ ಯಾಂತ್ರಿಕವಾದಾಗ ಹೆಜ್ಜೆ ಹೆಜ್ಜೆಗೂ ಭಾಷೆಯ/ಕನ್ನಡದ ಹಾದಿಯಲ್ಲಿ ಕಲ್ಲೋ ಮುಳ್ಳೊ ಚುಚ್ಚಿದಂತಾಗಿ ಓದಿನ ಪಯಣವೇ ಪ್ರಯಾಸವಾಗುತ್ತದೆ. ಘಳಿಗೆಗೊಮ್ಮೆ ಪುಸ್ತಕವನ್ನು ಬದಿಗಿಡುವಾ ಅಂತ ಅನ್ನಿಸುತ್ತದೆ. ಆದರೆ ನಿಮ್ಮ ಅನುವಾದ ಮುದ ನೀಡುವ ತರ್ಜುಮೆಯಾಗಿದೆ.
ತರ್ಜುಮೆಯಲ್ಲಿ ದೇಶೀಕರಣ ಮತ್ತು ವಿದೇಶೀಕರಣ ಎಂಬ ಎರಡು ತಂತ್ರಗಳನ್ನು ವಿದ್ವಾಂಸರು ಗುರುತಿಸಿದ್ದಾರೆ. ಮೊದಲನೆಯ ಬಗೆಯಲ್ಲಿ ಮೂಲ ಪಠ್ಯ ನಮ್ಮ ಭಾಷೆಯ ಜಾಯಮಾನಕ್ಕೆ ತಕ್ಕಂತೆ “ಪಳಗುತ್ತದೆ.” ಎರಡನೆಯ ರೀತಿಯ ಭಾಷಾಂತರದಲ್ಲಿ ಮೂಲದ ಉಕ್ತಿ ಸೌಂದರ್ಯ ಯಾಂತ್ರಿಕವಾಗಿ ಅಲ್ಲ ಬದಲಾಗಿ ಸೃಜನಶೀಲವಾಗಿ ನಮ್ಮ (=ಭಾಷಾಂತರದ) ಭಾಷೆಯಲ್ಲಿ ಹೂ ಬಿಡುತ್ತದೆ. ದೇಶೀಕರಣ ತಥಾಕಥಿತ ಮೂಲ ಪಠ್ಯವನ್ನು ಸಂಪೂರ್ಣವಾಗಿ ಪರಿವರ್ತಿಸುತ್ತದೆ. ಉದಾಹರಣೆಗೆ ನಾವು ಕನ್ನಡಕ್ಕೆ ಕಾದಂಬರಿಯೊಂದನ್ನೋ, ಕವಿತೆಯನ್ನೋ ಅನುವಾದಿಸಿದಾಗ ಅದು ಶುದ್ಧಾಂಗವಾಗಿ ಕನ್ನಡ ಕೃತಿಯಾಗಿ ಬದಲಾಗುತ್ತದೆ. ಆದರೆ ವಿದೇಶೀಕರಣ ರೀತ್ಯಾ ತರ್ಜುಮೆಯಲ್ಲಿ ತಥಾಕಥಿತ ಮೂಲ ಪಠ್ಯವೂ ಬದಲಾಗುತ್ತದೆ, ತರ್ಜುಮೆಯ ಭಾಷೆಯೂ ಸ್ವಲ್ಪ ಮಟ್ಟಿನ ಪರಿವರ್ತನೆಗೆ ಒಳಗಾಗುತ್ತದೆ. ದೇಶೀಕರಣದ ತರ್ಜುಮೆಗೆ ನಾನು ನಿಮಗೆ ಉದಾಹರಣೆ ಕೊಡಬೇಕಾಗಿಲ್ಲ. ವಿದೇಶೀಕರಣಕ್ಕೆ ಉದಾಹರಣೆ ಕೊಡುವುದಾದರೆ, ಇದು ತರ್ಜುಮೆಯಾದ ಕವಿತೆ ಅಲ್ಲ, ಆದರೂ ಜಯಂತ ಕಾಯ್ಕಿಣಿ ಅವರ ಸಿನಿಮಾ ಪದ್ಯ “ ಅನಿಸುತಿದೆ ಯಾಕೋ ಇಂದು” ವಿನ ಈ ಸಾಲುಗಳನ್ನು ಗಮನಿಸಿ: “ ಕೊಲ್ಲು ಹುಡುಗಿ ಒಮ್ಮೆ ನನ್ನಾ .. ಹಾಗೇ ಸುಮ್ಮನೇ.. “; “ಪೂರ್ಣ ಚಂದಿರಾ ರಜಾ ಹಾಕಿದ ನಿನ್ನಯ ಮೊಗವನು ಕಂಡ ಕ್ಷಣ” ಅಥವಾ “ ಮನಸೀನಾ ಪುಟದಲಿ ಕೇವಲ ನಿನ್ನದೆ ಸಹಿ ಇದೆ.” ಕೊಲ್ಲು, ರಜಾ ಹಾಕಿದಾ, ಮನಸಿನಾ ಪುಟದಲಿ, ನಿನ್ನದೆ ಸಹಿ ಇದೆ ಇತ್ಯಾದಿ ಇಂಗ್ಲೀಶ್ ಅಭಿವ್ಯಕ್ತಿಗಳು ಇಲ್ಲಿ ಹೇಗೆ ಮೂಲ ಪದಪುಂಜಗಳನ್ನೂ, ಕನ್ನಡವನ್ನೂ ಪರಿವರ್ತಿಸಿ, ಹೊಸ ಉಕ್ತಿ ವೈವಿಧ್ಯವನ್ನು ಪರಿಚಯಿಸಿ ಕನ್ನಡದ ಸಮೃದ್ಧಿಗೆ ಕಾರಣವಾಗಿವೆ ಎಂಬುದನ್ನು ಗಮನಿಸಿ. ನನ್ನ ಪ್ರಕಾರ ಇಂತಹ ಭಾಷಾಂತರ ಭಾಷೆಗಳನ್ನು ಬೆಳೆಸುತ್ತದೆ, ಭಾಷಾ ಸಾಮೀಪ್ಯವನ್ನು ಸಾಧಿಸುತ್ತದೆ. ಈ ಅರ್ಥದಲ್ಲಿ ಭಾಷಾಂತರದ ಭಾಷೆ ಮೂಲ ಮತ್ತು ಸ್ವೀಕಾರದ ಭಾಷೆಗಳ ನಡುವೆ ರೂಪುವಡೆದ ಹೊಸ ಬಾಷೆಯೇ ಆಗಿದೆ (ಡೇರಿಡಾ, ಹೋಮಿ ಭಾಭಾ).
ಆಶ್ಚರ್ಯದ ಸಂಗತಿ ಎಂದರೆ ಭಾಷಾಂತರದ ವಿಷಯಕ್ಕೆ ಬಂದಾಗ ಭಾಷಾ ಸಮುದಾಯಗಳು ಸ್ವಲ್ಪ ಮಟ್ಟಿಗೆ ಸ್ವಾರ್ಥಿಯಾಗಿ ಬಿಡುತ್ತವೆ . ಅವುಗಳ ಸದಸ್ಯರ ಭಾಷಾ ಅಸ್ಮಿತೆ ಎಲ್ಲಿಂದಲೋ ಧುತ್ತೆಂದು ಜಾಗೃತವಾಗಿಬಿಡುತ್ತದೆ ಮತ್ತು ಬಹಳ ಬಾರಿ ಅದು ಅನುವಾದ ವಿಮರ್ಶಕರ ದ್ವಂದ್ವ ನೀತಿಗೆ ಕಾರಣವಾಗುತ್ತದೆ. ಬೇರೆ ಭಾಷೆಯಿಂದ ಕೃತಿಯೊಂದು ನಮ್ಮ ಭಾಷೆಗೆ (ಇಲ್ಲಿ ಉದಾಹರಣೆಗೆ ಕನ್ನಡ ಅಂದುಕೊಳ್ಳೋಣ) ಭಾಷಾಂತರವಾಗಿ ಬರುವಾಗ ತನ್ನ ಮೂಲ ಗುಣಗಳನ್ನು ಅದು ಪೂರ್ತಿಯಾಗಿ ಬಿಟ್ಟು ಕನ್ನಡೀಕರಣಗೊಳ್ಳಬೇಕೆಂದು ಅಪೇಕ್ಷಿಸುತ್ತೇವೆ. ಅದು ಸಹಜ ಎಂದೂ ಅಂದುಕೊಳ್ಳುತ್ತೇವೆ. ಆದರೆ ಕನ್ನಡದ ಕೃತಿಯೊಂದು ಬೇರೆ ಭಾಷೆಗೆ ಅನುವಾದ ಆಗುವಾಗ ಭಾಷಾಂತರದ ಬಗೆಗಿನ ಮೇಲೆ ಹೇಳಿದ ಸಹಜ ನಿಲುವು ಬದಲಾಗುತ್ತದೆ. ಬೇರೆ ಭಾಷೆಗೆ ಕನ್ನಡದಿಂದ ತರ್ಜುಮೆಯಾಗುವ ಕೃತಿ ಅ ಭಾಷೆಯ ಸಹಜ ಜಾಯಮಾನಕ್ಕೆ ಹೊಂದುವಂತೆ ಇರಬೇಕೆಂದು ನಾವು ಅಪೇಕ್ಷಿಸುವುದಿಲ್ಲ! ಬದಲಾಗಿ ಅದರ ಕನ್ನಡತನಕ್ಕೆ ಚೂರೂ ಭಂಗ ಬರಬಾರದು ಎಂದು ವಾದಿಸುತ್ತೇವೆ. ಅನೇಕ ಖ್ಯಾತ ವಿಮರ್ಶಕರೂ ಕೂಡಾ ಒಳ ಬರುವ ಮತ್ತು ಹೊರ ಹೋಗುವ ತರ್ಜುಮೆಯ ಬಗೆಗೆ ಒಂದೇ ಉಸಿರಿನಲ್ಲಿ ಈ ವೈರುಧ್ಯದ ದೋರಣೆಯನ್ನು ತಳೆಯಲು ಹಿಂದೆಗೆಯುವುದಿಲ್ಲ. ಆದುದರಿಂದಲೇ ಗಾಯತ್ರಿ ಸ್ಪಿವಾಕ್ ನಿರ್ದಿಷ್ಟ ಓದುಗರನ್ನು-ಆದರ್ಶ ಓದುಗರನ್ನು ಕೂಡಾ- ಹೊರಗಿಟ್ಟೇ ಭಾಷಾಂತರದ ಕೆಲಸಕ್ಕೆ ಹೊರಡಬೇಕು ಎಂದು ಹೇಳುತ್ತಾರೆ. ನಮ್ಮ ಓದಿನಿಂದ ನಮಗೆ ದಕ್ಕುವ ತಥಾಕಥಿತ ಮೂಲದ ಉಕ್ತಿ ವೈವಿಧ್ಯ ಮತ್ತು ಸೌಂದರ್ಯವನ್ನು ಅನುವಾದಿಸುವುದು ಒಳ್ಳೆಯ ಅನುವಾದ.
ಮರಾಠಿಯಿಂದ ಕನ್ನಡಕ್ಕೆ ಅನುವಾದಿಸುವಾಗ ನೀವು ಈ ಸಮಸ್ಯೆಯನ್ನು ಎದುರಿಸಿರುವ ಸಾಧ್ಯತೆ ಕಡಿಮೆ. ಎರಡು ಭಿನ್ನ ಭಾಷಾ ಕುಟುಂಬಗಳಿಗೆ ಸೇರಿದ್ದರೂ, ಒಂದೇ ಸಾಂಸ್ಕೃತಿಕ ವಲಯಗಳಿಗೆ ಸೇರಿದ ಭಾಷೆಗಳಾದ್ದರಿಂದ ಅವುಗಳ ಅಭಿವ್ಯಕ್ತಿಯ ರೀತಿಗಳು ತುಂಬಾ ಹತ್ತಿರ. ಅವುಗಳ ನಡುವಣ ಕೊಡು-ಪಡೆ ಅಷ್ಟರ ಮಟ್ಟಿಗೆ ಸುಲಭಸಾಧ್ಯ. ಆದರೆ ಈ ಕಾದಂಬರಿಯ ಮನೋಲೋಕವನ್ನು ಅರ್ಥ ಮಾಡಿಕೊಳ್ಳಲು ನೀವು ಸಾಕಷ್ಟು ಶ್ರಮಿಸಿದ್ದೀರಿ. ನಿಮ್ಮ ಭಾಷಾಂತರ ಕನ್ನಡದ್ದೇ ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ. ಅಲ್ಲಿ ಇಲ್ಲಿ ಚಿಕ್ಕ ಮಟ್ಟಿನ ಅರ್ಥ ಸಂಧಿಗ್ಧತೆ ಬಂದಿದ್ದರೂ ಅದು ಗೌಣ. ಸಾವಿತ್ರಿಯ ಕೊಡಗು ವಾತಾವರಣವೂ ನಿಮ್ಮ ಅನುವಾದಕ್ಕೆ ಸಹಾಯ ಮಾಡಿದೆ. ನಾನು ನಮ್ಮೂರಿನಲ್ಲೇ ನಡೆದ ಕಥೆಯಂತೆ ಇದನ್ನು ಓದಿದ್ದೇನೆ. ಇಷ್ಟು ಚೆಂದದ ತರ್ಜುಮೆಯನ್ನು ಕನ್ನಡಕ್ಕೆ ತಂದ ನಿಮಗೆ ಕೃತಜ್ನತೆಗಳು ಮತ್ತು ಅಭಿನಂದನೆಗಳು. ಸಾವಿತ್ರಿಯ ರಂಗರೂಪವನ್ನು ರಚಿಸಿದ ಸುಧಾ ಆಡುಕುಳ, ಅಭಿನಯಿಸಿದ ಸಿರಿ ವಾನಳ್ಳಿ ಮತ್ತು ಪ್ರಸ್ತುತ ಪಡಿಸಿದ ರಂಗ ತಂಡದ ಎಲ್ಲರಿಗೂ ಅಭಿನಂದನೆಗಳು.
ಇನ್ನೂ ಬರೆಯಬಹುದು. ಆದರೆ ಸದ್ಯಕ್ಕೆ ಸಾಕು -😊
ಇಂತೀ,
ಶಿವರಾಮ ಪಡಿಕ್ಕಲ್ jan 16/23
ನಮ್ಮ ಒಂದು ಟೆಂಪಲ್ ರನ್ ( ಪದ್ಮಾಕುಮಾರಿಯವರ ಕ್ಷಮೆ ಕೋರಿ)
"ಇಷ್ಟೊಂದು ಜನ fan followers? ಯಾವ ಸಿನಿಮಾ ನಟನಿಗೂ, ಗಾಂಧೀಜಿಯಂತಹ ನಾಯಕನಿಗೂ ಇಲ್ಲದಷ್ಟು! ಅದೂ, ಕಾಲವಾಗಿ ನೂರೈದು ವರುಷಗಳ ಆನಂತರವೂ? ದೇಶದ ಅನೇಕ ಕಡೆಗಳಿಂದ ಜನ ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ, ಎಂದರೆ ಅವನು ತನ್ನ ಬದುಕಿದ ಕಾಲದಲ್ಲಿ ಎಂತಹ ಕೆಲಸ ಮಾಡಿರಬೇಕು-ಇಂತಹ ಸಾಮಾಜಿಕ ಸ್ಥಾನಮಾನ ಸಿಗಬೇಕಾದರೆ! ಸಾಮಾನ್ಯ ವ್ಯಕ್ತಿಯೊಬ್ಬ ಒಂದು ದೊಡ್ಡ ಸಂಸ್ಥಾನವಾಗಬೇಕಾದರೆ, ಅವನು ಪ್ರತಿಪಾದಿಸಿದ ಕರುಣೆ, ಪ್ರೀತಿ, ಕೋಮು ಸೌಹಾರ್ದ ಅದೇ ಮುಖ್ಯವಾಗಿರಬೇಕಲ್ಲವಾ?"
ಅವನೂ ಅವಳೂ ಬೆಳಗಿನ ಝಾವ ನಾಲ್ಕಕ್ಕೇ ಶಿರಡಿ ಸಾಯಿಬಾಬನ ಮಂದಿರದೊಳಗೆ ನೂರಾರು ಜನರ ಸರತಿ ಸಾಲಿನಲ್ಲಿ ನಿಂತಿದ್ದರು. ಸಾಲು ಸಾಲು ಸುತ್ತುವ ಕಂಬಿಗಳು! ಬಾಬನ ನೋಡಲಿಕ್ಕೆಂದು ಅವಳು ಬಂದಿದ್ದರೆ, ಕೇವಲ ಅವಳ ಜೊತೆಗೆಂದು ಇವನು ಬಂದಿದ್ದ.
ಮೂರ್ಖರು ಎಲ್ಲಾ ಮೂರ್ಖರು...ಎಲ್ಲಾ ವ್ಯಾಪಾರ. ಎಂದ
ಇಷ್ಟೊಂದು ಜನ ಲಕ್ಷಗಟ್ಟಲೆ! ಎಲ್ಲರೂ ಮೂರ್ಖರೇ ಅಂತೀಯ? ಇದು ಅಹಂಕಾರ ಆಗೋಲ್ವಾ?
ಈ ಸಣ್ಣ ಊರಲ್ಲಿ ಏರ್ಪೋರ್ಟ್ ಕೂಡ ಇದೆ. ರಸ್ತೆ ಎಷ್ಟು ಚೆನ್ನಾಗಿದೆ. ಎಲ್ಲ ಕಡೆಯಿಂದ ರೈಲು, ಬಸ್ ವ್ಯವಸ್ಥೆ ಇದೆ.ಸಂಸ್ಥೆಯ ಹೆಸರಿನಲ್ಲಿ ದತ್ತಿ ದಾನಗಳಿವೆ, ಶಾಲಾ ಕಾಲೇಜುಗಳಿವೆ! ಎಷ್ಟು ಹೊಟೆಲ್ಲುಗಳು ! ಇಷ್ಟೆಲ್ಲ ವ್ಯವಸ್ಥೆ ಯಾಕಾಗಿ? ಯಾರ ಸಲುವಾಗಿ?
ಎಲ್ಲ ವ್ಯಾಪಾರ, ದುಡ್ಡು ಮಾಡೋ ಸಾಧನ ! ಸಾಯಿಬಾಬನ್ನ ಎನ್ ಕ್ಯಾಷ್ ಮಾಡ್ಕೋತಿದ್ದಾರೆ. ನಾನ್ ಸೆನ್ಸ್. ಇದನ್ನೆಲ್ಲಾ ನೋಡ್ತಾ ಸುಮ್ನೆ ಯಾಕೆ ಕೂತಿದ್ದಾನೆ ಅವನು? ಅವನು ಬದುಕಲ್ಲಿ ಎಂದಾದರೂ ಚಿನ್ನದ ಕಿರೀಟ, ಚಿನ್ನದ ತಗಡಿನ ಮನೆ ಬಯಸಿದ್ದನಾ? ತುಂಡು ಮುಂಡುಟ್ಟ ಫಕೀರ! ಯಾವಾಗಲೂ ದೀನ ದಲಿತರ ಪರವಾಗಿದ್ದವನು ಅಂತ ಹೇಳ್ತೀಯಲ್ಲ ನೀನೇ? ಅವನ ಇಷ್ಟಕ್ಕೆ ವಿರುದ್ಧವಾಗಿ ಇವರೆಲ್ಲಾ ಮಾಡ್ತಿಲ್ವಾ? ಅದನ್ನು ನೋಡ್ಕೊಂಡು ಸುಮ್ನೆ ಕೂತಿದ್ದಾನೆ ಯಾಕೆ? ಅಲ್ಲಲ್ಲೇ ನೇತುಹಾಕಿದ್ದ "Beware of pickpocketers and thieves" ಎಂಬ ಫಲಕಗಳತ್ತ ಪ್ರಶ್ನಾರ್ಹವಾಗಿ ಬೊಟ್ಟು ಮಾಡಿ ತೋರಿಸಿದ.
ವ್ಯಾಪಾರ ಮಾಡ್ತಿದ್ದಾರೆ ನಿಜ. ಹೊಟೆಲ್ ಇಲ್ಲದೇ ಇದ್ದಿದ್ದರೆ ನಾವು ಎಲ್ಲಿ ಇಳಕೋಬೇಕಿತ್ತು? ಏನು ಊಟ ಮಾಡ್ಬೇಕಿತ್ತು?ಟೂರಿಸಂ ಎಷ್ಟು ದೊಡ್ಡ ಉದ್ಯಮ. ಉಚಿತವಾಗಿ ಕೂಡ ಊಟ ಇದೆಯಲ್ಲಾ? ಧರ್ಮಶಾಲೆಗಳೂ ಇವೆಯಲ್ಲ? ಅಲ್ಲಿ ಹೋಗಿ ಇರೋಣ ಆಗುತ್ತಾ? ನಮಗೆ ಎಲ್ಲಾ ಸುಸಜ್ಜಿತ ಬೇಕಲ್ಲ?
ಉಚಿತ ಇರೋಕಡೆ ಕೊಳಕು ಬೇಡ ಅಂತೀಯ! ಸುಸಜ್ಜಿತ ಇರೋಕಡೆ ಹಣ ಲೂಟಿ ಮಾಡ್ತಾರೆ ಅಂತೀಯ!
ಏನು ಮಾಡಿದ್ರೂ ಯಾರದೋ ಹೊಟ್ಟೆಪಾಡು ನಡೀತಿದೆಯಲ್ಲ? ವ್ಯಾಪಾರ ಅಂದಮೇಲೆ ದ್ರೋಹ ಇದ್ದೇ ಇರುತ್ತೆ ಅದು ಯಾರ ಸನ್ನಿಧಿಯಾದರೆ ತಾನೇ ಏನು? ಏನಿದ್ದರೂ ವ್ಯವಸ್ಥಾಪಕರು ಜವಾಬ್ದಾರರು. ಈ ವ್ಯವಸ್ಥೆ ಮನುಷ್ಯರು ಮಾಡಿಕೊಂಡದ್ದು. ಅದಕ್ಕೆ ಅವರು ಕಾರಣ.
ಮತ್ತೆ ಅವನೇನು ಕಣ್ಣುಮುಚ್ಚಿ ಕುಳಿತಿದ್ದಾನಾ?
ಇದನ್ನು ನೀನು ಅವನಿಗೇ ಕೇಳಬೇಕು.
ಎಲ್ಲಿದ್ದಾನೆ?
ಸಮಾಧಿಯೊಳಗೆ ಕೂತಿದ್ದಾನಲ್ಲ?
ಇಬ್ಬರಿಗೂ ನಗು
ಅವನೇನು ಮಾಡ್ತಾನೇ? ಇವರೇನು ಮಾಡ್ತಾರೆ ಅದರಿಂದ ನಮಗೇನು? ನನ್ನ ಪ್ರಶ್ನೆ ಅದಲ್ಲ. ಜನ ಹೇಗೆ ಬರ್ತಾರೆ ! ಅವನೇನು ತಿರುಪತಿ ತಿಮ್ಮಪ್ಪನ ತರಹ ದೇವರಲ್ಲ. ಒಬ್ಬ ಅಂಬಿಗನ ಮಗ, ಮುಸಲ್ಮಾನರು ಸಾಕಿದ ಮಗ, ಬ್ರಾಹ್ಮಣ ಮತ್ತು ಮುಸ್ಲಿಮ್ ದಂಪತಿಗೆ ಹುಟ್ಟಿದ ಮಗ ಎಂದೆಲ್ಲ ಹೇಳ್ತಾರೆ. ಅಂತಹ ಸಾಮಾನ್ಯನೊಬ್ಬನಿಗೆ ಅಸಮಾನ್ಯನಾಗಲು ಹೇಗೆ ಸಾಧ್ಯವಾಯಿತು? ಅದೇ ಆಶ್ಚರ್ಯ!
ಪವಾಡ ಎಲ್ಲಾ ಮಾಡ್ತಾನಲ್ಲ?
ಅದು ಆನಂತರದ ಅವನ ಭಕ್ತರು ಕಟ್ಟಿದ ಕತೆಯೂ ಇರಬಹುದು. ಅವನು ಹುಟ್ಟಿದ ತಾರೀಖು ಹಾಗೂ ಅವನ ತಾಯಿತಂದೆಯರ ಬಗ್ಗೆಯೇ ನಿಶ್ಚಯವಾಗಿ ಏನೂ ಹೇಳಲು ಸಾಧ್ಯವಿಲ್ಲ ಎಂದಾಗ, ಪವಾಡದ ಬಗ್ಗೆ ಹುಟ್ಟಿಕೊಂಡಿರುವ ಸಂಗತಿಗಳೂ ಕಪೋಲ ಕಲ್ಪಿತವಾಗಿಯೇ ಇರಬಹುದಲ್ಲ? ಚರಿತ್ರೆಯಲ್ಲಿ, ನಾಯಕನೊಬ್ಬ ದೇವರಾಗುವುದು ಹೀಗೆಯೇ ಅಲ್ಲವಾ?
ಹಾಗೆಂದಾಗ ಅಲ್ಲಿಗೆ ಯಾಕೆ ಹೋಗಬೇಕು? ತಾಕತ್ತಿದ್ದರೆ ಇರುವ ಕಡೆಯೇ ಕರೆಸಿಕೊಳ್ಳಬೇಕು.
ಅದು ಎಲ್ಲರಿಗೂ ಎಲ್ಲಿ ಸಾಧ್ಯ? ತಮ್ಮ ತಮ್ಮ ಸಾಮರ್ಥ್ಯ ಕ್ಕನುಗುಣವಾಗಿ ನಡೆದುಕೊಳ್ಳುತ್ತಾರೆ. ಅದನ್ನು ಹೀಗೆ ಆಗಬೇಕು ಎಂದು ನಿರ್ದೇಶಿಸಲು, ನಿಯಂತ್ರಿಸಲು ನಾವ್ಯಾರು? ನಮಗೆ ಇಷ್ಟವಿಲ್ಲದಿದ್ದರೆ ಹೋಗುವುದು ಬೇಡವಪ್ಪ ಅಷ್ಟೇ...
ತರ್ಕಕ್ಕೆ ತನ್ನನ್ನು ತಾನು ಸಾಬೀತು ಪಡಿಸುವ ಹಟವಿರುತ್ತದೆ. ಆದರೆ ನಂಬಿಕೆ ತರ್ಕಕ್ಕೆ ಸಿಗುವುದಿಲ್ಲ. ಒಂದಕ್ಕೆ ಭಾವದ ನೆಲೆಯಾದರೆ ಇನ್ನೊಂದಕ್ಕೆ ಬುದ್ಧಿಯ ನೆಲೆ. ಇದೆ ಎನ್ನುದು ಎಷ್ಟು ನಂಬಿಕೆಯೋ ಇಲ್ಲ ಎನ್ನುವುದೂ ಅಷ್ಟೇ ನಂಬಿಕೆ. ಎರಡನ್ನೂ ಸಾಬೀತು ಪಡಿಸಲು ಸಾಧ್ಯವಿಲ್ಲ.
ಏನೇ ಆಗಲಿ ಮನುಷ್ಯರನ್ನು ಬದಲಾಯಿಸುವಲ್ಲಿ ದೇವರಾಗಲೀ, ದೇವ ಮನುಷ್ಯರಾಗಲೀ ಎಲ್ಲ ವಿಫಲರೇ. ಎಂದ ಅವನು.
ಮತ್ತೆ, ದೇವರಿಗೇ ಸಾಧ್ಯವಾಗದ್ದು ನಮಗೆ ಸಾಧ್ಯವಾ? ಮಾಡಿದವರ ಪಾಪ ಆಡಿದವರ ಬಾಯಲ್ಲಿ ನಮಗೇಕೆ? ಎಂದಳು.
ನಗುತ್ತಾ ಇಬ್ಬರೂ ಶಿರಡಿಯ ರಸ್ತೆ ಬದಿಯ ಅಮೃತ ಸಮಾನ 'ಏವಲೇ' ಚಹಾವನ್ನು ಆಸ್ವಾದಿಸುತ್ತಾ ಹೊಟೇಲ್ ಕಡೆಗೆ ನಡೆದರು.
('ಏವಲೇ' ಚಹಾವನ್ನು 'ಅಮೃತ ತುಲ್ಯ ಚಹಾ' ಎಂದು ಮರಾಠಿಗರು ವರ್ಣಿಸುತ್ತಾರೆ)
jan 18 -23
ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದಾ.....
ಬೆಳಗಿನ ವಾಯುವಿಹಾರಕ್ಕೆಂದು ನಮ್ಮ ಮನೆಯ ಬಳಿಯೇ ಇರುವ ಉದ್ಯಾನಕ್ಕೆ ಹೊರಟೆವು. ನಾನು ವೇಗವಾಗಿ ನಡೆದರೆ ರಘುನಾಥ್ ತಮ್ಮ ಸಂಧಿವಾತದ ನಡಿಗೆಯಲ್ಲಿದ್ದರು. ಜೊತೆಗೆ ಭೀಮಸೇನ್ ಜೋಶಿಯವರ "ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದಾ"
ಅವಳು 'ಸಿಂಧುಭೈರವಿ'' ! ಕಾವೇರಿ ಅರಬ್ಬಿ ಕಡಲೆಡೆಗೆ ಧಾವಿಸುತ್ತಿದ್ದಳು...ನಿಧಾನಗತಿಯಲ್ಲಿ ವಯ್ಯಾರವಾಗಿ.
ಪ್ರಶ್ನೆ : "ದೇವರುಗಳನ್ನು ಹೀಗೆ ಸ್ಥಳೀಕರಿಸುವ ಅಗತ್ಯವೇನು?"
ಉತ್ತರ: "ಇದು ಭಕ್ತಿಯ ಎಕ್ಸೈಟ್ಮೆಂಟ್. ಭಕ್ತಿ ಎಷ್ಟು ವೈವಿಧ್ಯಗಳಲ್ಲಿ ರೂಪ ಪಡೆದಿದೆ ಎಂಬ ವಿಸ್ಮಯ, ಇಂತಹ ಸೌಂದರ್ಯವನ್ನು ನೋಡದಾ ಕಂಗಳು ಇದ್ದರೇನು ಇಲ್ಲದಿದ್ದರೇನು ಎಂಬ ಆತ್ಯಂತಿಕ ಪ್ರಪತ್ತಿ ಅಷ್ಟೇ"
ಪ್ರಶ್ನೆ : "ವೈಶ್ವಿಕವಾಗಿ ನೋಡಬೇಕಲ್ಲವಾ?"
ಉತ್ತರ: " ಸ್ಥಳೀಯವಾದ ಎಲ್ಲದುದರ ದೊಡ್ಡ ಕ್ಯಾನ್ವಾಸ್ ವಿಶ್ವವೇ ನಿಜ! ಆದರೆ ಮಜಾ ಇರುವುದು ಅದರ ಸಣ್ಣ ಸಣ್ಣ ಪಿಕ್ಸೆಲ್ ಗಳಲ್ಲಿ ( ಕಣಗಳಲ್ಲಿ) ಕಡಲಿನಲ್ಲಿ ಹನಿ ಲೀನವಾಗಬೇಕಾದುದೇ ನಿಜ.
ಆದರೆ ಅದರ ಜೀವಂತಿಕೆ ಉಲ್ಲಾಸಗಳಿರುವುದು ಅದಕ್ಕೆ ಹರಿದು ಬರುವ ನದಿಗಳ ಹರಿವಿನಲ್ಲೇ . ಎಲ್ಲವೂ ವಿಲೀನವಾದ ಕಡಲಿನಲ್ಲಿಏನಿದೆ? ಕೇವಲ ಉಬ್ಬರ ಇಲ್ಲವೇ ಶಾಂತ.
ಅದಕ್ಕೇ ಸರ್ವಪ್ರಿಯಾನಂದರು "ಬ್ರಹ್ಮನ್ ಬಗ್ಗೆ ಮಾತನಾಡುವುದೆಂದರೆ ಮಾಯೆಯಬಗ್ಗೆಯೇ ಮಾತನಾಡಬೇಕು, ನಿರ್ಗುಣ ನಿರಾಕಾರದ ಬಗ್ಗೆ ಏನು ಮಾತನಾಡಲು ಸಾಧ್ಯ ಅದೊಂದು ಅನಿರ್ವಚನೀಯ ಅನುಭವ ಅಷ್ಟೇ" ಎನ್ನುತ್ತಾರೆ.
ಪ್ರಶ್ನೆ: ಪ್ರೀತಿ, ಸಂಭೋಗ, ಕರುಣೆ ಇವೂ ಕೂಡ ಅನಿರ್ವಚನೀಯವೇ!
ಉತ್ತರ: ಹೌದು ಮಾಯೆಯ ರೆಫೆರೆನ್ಸ್ ಇಲ್ಲದೇ ಬ್ರಹ್ಮನ್ ಕುರಿತಾಗಿ ಮಾತನಾಡಲು ಸಾಧ್ಯವೇ ಇಲ್ಲ. ಹಾಗೆ ನೋಡಿದರೆ ಮಾಯೆಯ ಕೂಸುಗಳಾದ ಎಲ್ಲಾ ರೀತಿಯ ರಸಾನುಭವಗಳೂ ಅನಿರ್ವಚನೀಯವೇ! ಪ್ರತಿಮೆ ರೂಪಕಗಳ ಸಹಾಯವಿಲ್ಲದೇ ಅವುಗಳನ್ನು ದಕ್ಕಿಸಿಕೊಳ್ಳುವ ಹಾಗೆಯೇ ಇಲ್ಲ.
ಕಲೆ ಸಾಹಿತ್ಯ ಬದುಕು ಮುಂತಾದ ಬಹುಮುಖ ಸಂಸ್ಕೃತಿ ಎಲ್ಲವೂ ಮಾಯೆಯ ರೂಪಗಳೇ! ಅದಕ್ಕೇ ಅಕ್ಕ "ಚೆನ್ನಮಲ್ಲಿಕಾರ್ಜುನ ನೀನೊಡ್ಡಿದ ಮಾಯೆಯ ಆರು ಗೆಲಬಾರದು" ಎನ್ನುತ್ತಾಳೆ. ಇಲ್ಲಿ 'ಗೆಲಬಾರದು' ಎನ್ನುವುದನ್ನು ಗೆಲಲಾರದು , ಗೆಲ್ಲಲು ಅಸಾಧ್ಯ ಎಂದೇ ಓದಿಕೊಳ್ಳಬೇಕು . ಆದರೆ ನನಗೇನೋ 'ಗೆಲಬಾರದು' ಎಂದೇ ಅಕ್ಷರಶಃ ಒಂದು ಉದ್ಘೋಷವಾಗಿ (statement) ಓದಿಕೊಳ್ಳುವುದೇ ಇಷ್ಟ. ಗೆದ್ದು ಬಿಟ್ಟರೆ ಬದುಕಿನ ವೈಭವಗಳೆಲ್ಲಾ ಮಾಯವಾಗಿಬಿಡುತ್ತವೆ. ದೇಹದ ಉರವಣೆಗಳೂ ಇವೆ ನಿಜ. ಆದರೆ ಅವೂ ನಮ್ಮನ್ನು ಮಾಗಿಸುವ ದಿವ್ಯಗಳೇ ಆಗಿವೆ ಎಂಬುದು ನನ್ನ ನಂಬಿಕೆ. ಸಾಕ್ಷಾತ್ ಚೆನ್ನಮಲ್ಲಿಕಾರ್ಜುನನೇ ನನಗೆ ಎದುರಾಗಿ "ಭವಗೆಟ್ಟು ಬಂದ ಮಗಳೇ ತೆಗೆದುಕೋ ಮುಕ್ತಿಯನು" ಎಂದು ಉಚಿತವಾಗಿ ಮುಕ್ತಿಯನ್ನು ನೀಡಿದರೂ ನಾನೊಲ್ಲೆ. ಕದಳಿವನ ಹೊಕ್ಕಮೇಲೆ ಹಾಡು ಹಸೆ ಎಲ್ಲಿದೆ ? ಮೂಳೆ ಮುರಿಯುವ ಅವನ ಅಪ್ಪುಗೆ ?
ನಾನು ಮತ್ತೆ ಮತ್ತೆ ಮನುಷ್ಯಳಾಗಿಯೇ, ಹೆಣ್ಣಾಗಿಯೇ ಹುಟ್ಟಿಬರಬೇಕೆಂಬ ಆಸೆ. ನನಗೆ ಮುಕ್ತಿಯಲ್ಲಿ ಮಜಾ ಇಲ್ಲ. ಅದ್ವೈತ ನನಗೆ ಮನುಷ್ಯ ಸಂಬಂಧಗಳ ನಿಭಾವಣೆಗಷ್ಟೇ ಬೇಕು. ವೈಯಕ್ತಿಕ ಮುಕ್ತಿಗಲ್ಲ.
ಬ್ರಹ್ಮನ್ ಮತ್ತು ಮಾಯೆಗೆ ಉದಾಹರಣೆಯಾಗಿ ಕ್ರಮವಾಗಿ ಚಿನ್ನ ಮತ್ತು ಒಡವೆಗಳ ಉದಾಹರಣೆಯನ್ನು ಕೊಡುತ್ತಾರೆ. ಒಡವೆಗಳೆಲ್ಲವೂ 'ಚಿನ್ನವೇ' ಸರಿ ಆದರೆ "ಹಾರ ಹೀರ ವೈಜಯಂತಿ ತೋರ ಮುತ್ತಿನ ಹಾರ ಪದಕ" ಎಲ್ಲವೂ ಬೇರೆ ಬೇರೆ ವಿನ್ಯಾಸಗಳವೇ ಅಲ್ಲವೇ? ಕಲೆ ಎನ್ನುವುದು ವಿನ್ಯಾಸದ ವೈವಿಧ್ಯವೇ ಅಲ್ಲವೇ? ಅದೇ ಸೌಂದರ್ಯವಲ್ಲವೇ? ಬರೀ ಚಿನ್ನವನ್ನು ಇಟ್ಟುಕೊಂಡು ಮಾಡುವುದಾದರೂ ಏನು? ಅದರ ಸಾರ್ಥಕ್ಯ ಇರುವುದೇ ಒಡವೆಯಾಗುವುದರಲ್ಲಿ ಅಲ್ಲವೇ? ರಂಗನ ಹಾರವಾಗಬೇಕು ಇಲ್ಲವೇ ರಮಣಿಯ ಪದಕವಾಗಬೇಕು !
ಕಾವೇರಿ ರಂಗ, ಶ್ರೀರಂಗ ರಂಗ, ಪಂಢರಪುರದ ರಂಗ, ತಿರುಪತಿಯ ರಂಗ, ಬದರಿಯ ರಂಗ ಇವರೆಲ್ಲರ ಕತೆಗಳೂ ಬೇರೆ ಬೇರೆ, ಅವರುಗಳು ನಿಂತ ನೆಲೆಗಳೂ ಬೇರೆ ಬೇರೆ! ಅಲ್ಲಿನ ಬೆಟ್ಟಗುಡ್ಡಗಳು, ಹರಿವ ನದಿಗಳು ಬೇರೆ, ಮಣ್ಣು ಬೇರೆ ! ಅವರು ತಮ್ಮ ತಮ್ಮ ಸ್ಥಳಗಳಲ್ಲಿ ಹರಿಯಬಿಟ್ಟಿರುವ ವೈವಿಧ್ಯಮಯ ಸಂಸ್ಕೃತಿ ವೈಭವ ಗಳನ್ನು ಕಾಣದಿದ್ದರೆ ಈ ಕಂಗಳಿದ್ದೂ ಏನು ಪ್ರಯೋಜನ?
ವೈಶ್ವಿಕವಾಗುವುದರಲ್ಲಿ ಇವರೆಲ್ಲರೂ ಇಸ್ತ್ರಿಮಾಡಿಕೊಂಡ ಸಮವಸ್ತ್ರ ಧರಿಸಿದ ಸಿಪಾಯಿಗಳಂತೆ ನೆಟ್ಟಗೆ ನಿಂತುಬಿಡುತ್ತಾರೆ. ಹೀಗೆ ನೆಟ್ಟಗೆ ನಿಲ್ಲುವುದು ಸೌಂದರ್ಯವೇ ಅಲ್ಲ. (ವೈದ್ಯಕೀಯದಲ್ಲಿ ಕೂಡ ಅದು ಸಾವೇ!) ವಕ್ರವೇ ಸೌಂದರ್ಯ ! ನಮ್ಮ ಕೊಳಲು ರಂಗ ಹೇಗೆ ನಿಂತಿದ್ದಾನೆ ನೋಡಿ ಸೊಟ್ಟಗೆ!! ಸುದರ್ಶನ, ಪಾಂಚಜನ್ಯ ಹಿಡಿದ ಕೃಷ್ಣಮಾತ್ರ ನೇರ ನಿಲ್ಲುವುದು ಕುರುಕ್ಷೇತ್ರದಲ್ಲಿ. ಅವನು ಬಾಗುವುದಿಲ್ಲ ಅಲ್ಲಿ. ನಮಗೆ ಬೇಕು ಬಾಗಿ ಬಳುಕಿ , ಹೆಣ್ಣಿನಂತೆ ಏನು? ಹೆಣ್ಣುಗಳನ್ನೇ ಸುತ್ತುವರಿದ ಕೊಳಲನೂದುವ ಚೆಲುವ. ಕೊಳಲು ಕೇಳದ ಕಿವಿಗಳು, ಅವನ ರಾಸಲೀಲೆ ಕಾಣದ ಕಂಗಳು ಇದ್ದರೆಷ್ಟು ಬಿಟ್ಟರೆಷ್ಟು?
ಈ ಬರಹಕ್ಕೆ ಕಾರಣವಾದ ಭೀಮಸೇನ್ ಜೋಶಿಯವರ ಹಾಡನ್ನೂ ಲಗತ್ತಿಸಿರುವೆ.
ಜೋಗ್ ಮತ್ತು ನಾಟರಾಗದ ಜುಗಲ್ ಬಂದಿ
ಉಸ್ತಾದ್ ನಿಸಾರರ ಸಂಗೀತ ಶಾಲೆಯ ಮೆಟ್ಟಿಲೇರಿ ವಿಜು ಕರೆಗಂಟೆ ಒತ್ತಿದಳು. ಅದು ಶಾಲೆಯೇ? ಒಂದು ದೊಡ್ಡ ಮನೆ. ಬೆಚ್ಚಗಿನ ಮನೆ!
"ಬಹುತ್ ದೇರ್ ಕರ್ ದೀ? " ಒಳಗಿನಿಂದ ಪರಿಚಿತ ದನಿ.
"ಅದು.,.ಬಸ್ ಸ್ಟಾಪಿನಲ್ಲಿ ಇಳಿದು ...ರಿಕ್ಷಾ ಹತ್ತೋವಾಗ ರಿಕ್ಷಾವಾಲಾ ಭಾಳ ನಖರಾ ಮಾಡ್ತಿದ್ದಾ...."ವಿಜು ಹೇಳುತ್ತಿದ್ದಂತೆ
"ಒಳಕ್ಕ ಬಾರ... ಮೊದ್ಲು ಕೂಡು. ಏನ್ ಬಾಗಲಾಗೇ ಎಲ್ಲ ಒಪ್ಪಿಸಬೇಕೇನು? " ನಗುತ್ತಾ ಉಸ್ತಾದರು ಎರಡೂ ಬಾಗಿಲು ತೆಗೆದರು.
ಗೊತ್ತಾತು ಬಿಡ್ರಿ ಸರ್, ನಾನು ಇಷ್ಟ್ ದಪ್ಪ ಇದ್ದೀನಿ ಅಂತ ಹೀಂಗ್ ಚಾಷ್ಟೀ ಮಾಡ್ತೀರಿ....ಎರಡೂ ಬಾಗಿಲ್ ತೆಗೆದೂ...
ಇಲ್ಲೇ...ಎರಡ್ ಹಡದ್ ಮ್ಯಾಗೂ ಹೀಂಗ ಅಂದ್ರ? ನೀ ಏನ್ ಇನ್ನಾ ಹುಡಿಗ್ಯಿದ್ದೀ? ಮಕ್ಕಳಾದ ಮ್ಯಾಲೆ ಲಟ್ಠ ಆಗೋದು ಸಹಜ್ ಅಲ್ಲಾ! ಭಾಳ ಹೈರಾಣಾಗಿದ್ದೀ ಬಾ ಕೂಡು...ಸೋಫಾದ ಮೇಲಿನ ಧೂಳು ಹೊಡೆಯುತ್ತಾ ಕೂರುವಂತೆ ಕೈ ಮಾಡಿದರು.
ಬಸ್ಸಿನಾಗ ಭಾಳ ಗರ್ದಿ ಇತ್ತೇನು? ಕೇಳುತ್ತಲೇ ಉತ್ತರಕ್ಕೆ ಕಾಯದೇ ಒಳಹೋಗಿ ಬಂದು ಕೆಂಪು ದ್ರವ ತುಂಬಿದ ಒಂದು ಗಾಜಿನ ಲೋಟ ಮುಂದೆ ಹಿಡಿದರು.
"ವಾಹ್ ...ರೂಅಬ್ಝಾ!" ಗಟಗಟನೆ ಕುಡಿದಳು.
ಸಾವಕಾಶ್ ...ಸಾವಕಾಶ್ ಎನ್ನುತ್ತಾ ಅವಳನ್ನೇ ದಿಟ್ಟಿಸುತ್ತಿದ್ದರು.
ಹಿಂಗ್ಯಾಕ ನೋಡ್ತೀರಿ?
ಏನಿಲ್ಲ ಅಷ್ಟು ದೂರದಿಂದ ಹೈರಾಣಾಗಿ ನೀ ಬಂದಿ. ಆದ್ರ ಇವತ್ ರಿಯಾಝ್ ಬ್ಯಾಡೇನೋ ಅಂತಾ... ಮುಂಜಾನೀನಾ ನೋಡು ಈ ತಾನಪುರ ಶ್ರುತಿಮಾಡಿಟ್ಟಾ....
ಆದ್ರೂ...ಯಾಕೋ ಬ್ಯಾಡನಸ್ತದಾ
ತಂಬೂರೀ ಟೊಂಯ್... ಟೊಂಯ್... ಉಸ್ತಾದರ ಬಿಳಿಯ ನೀಳ ಬೆರಳುಗಳು ತಂಬೂರಿಯ ತಂತಿಯನ್ನು ಮೀಟುತ್ತಿದ್ದವು. ಆಳವಾದ ತೀಕ್ಷ್ಣ ಕಣ್ಣುಗಳು ಅವುಗಳ ಮೇಲೆಯೇ ನಾಟಿದ್ದವು! ಕಪ್ಪು ಬಿಳಿ ಬೆರೆತ ಗಡ್ಡ. ತಕ್ಷಣವೇ ಅವಳತ್ತ ತಿರುಗಿ ,
"ಹೀಂಗ್ ಮಾಡೋಣು...ಇವತ್ ಸುಮ್ಮ ಮಾತಾಡೋಣು, ಚಲೇಗಾ?"
"ಯಾವುದರ ಕುರಿತು ಸರ್?"
ಮುಂಜಾನಿಂದ ಈ ಜೋಗ್ ರಾಗ ಕಾಡ್ಲಿಕ್ಕ್ ಹತ್ಯದಾ...ಇದಕ್ಕ ನಿಮ್ಮ ಕರ್ನಾಟಕಿನಾಗ ಏನಂತೀರಿ? ಹ್ಞಾಂ ನಾಟ... ನಾಟರಾಗ.. "ಜಗದಾನಂದಕಾರಕ..." ಕೈಮೇಲೆತ್ತಿ ನಗುತ್ತಾ ಪಲುಕಿದರು.
"ಸರ್ ನೀವು ತಮಾಷೆ ಮಾಡ್ತಿದ್ದೀರಿ?
"ಮಝಾಕ್! ಹಂಗ್ ಎಂದಾದ್ರೂ ಹೇಳೀಯ ತಾಯಿ! ನಾನೊಬ್ಬ ಕಲಾವಿದ ಇದ್ದೀನಿ. ಎರಡೂ ಆ ದೇವಿ ನಾಲಗೇನಾ ಅಲ್ಲೇನ? ಸುಮ್ಮ... ನೀ ಸಿಟ್ಟಿಗೆದ್ದರ ನಿನ್ ಮಾರಿ ಕೆಂಪ್ ಆಗ್ತಾವಲ್ಲ! ನೋಡಬೇಕನಸ್ತಪಾ...ನೋಡ್ ನೋಡ್ ವಿಜಿಶರ್ಮಾನ ಕಿವಿ ಕೂಡ ಈಗ ಕೆಂಪಾತಲ್ಲ? ಉಸ್ತಾದರು ಜೋರಾಗಿ ನಗಹತ್ತಿದರು.
ಚಾಷ್ಟೀ ಸಾಕಿನ್ನ... ಹ್ಞು ಎಲ್ಲಿದ್ದಾ? ಜೋಗ್ ...ಜೋಗ್ ಸಂಜೀರಾಗ ರಾತ್ರಿರಾಣಿ...ಅಂತಾರ ಭಕ್ತಿ... ಯೋಗ...ಪ್ರೀತಿ ಇದರಾಗ ತುಂಬಿ ತುಳಕ್ತದಾ ಅಂತಾರ...
ಸರ್ ಆದರೆ ಕರ್ನಾಟಕ ಸಂಗೀತ ದೊಳಗೆ ಭಕ್ತಿ ಮಾತ್ರ ಮುಖ್ಯ. ಭಕ್ತಿ ಇಲ್ಲದ ಸಂಗೀತ ಸಂಗೀತವೇ ಅಲ್ಲ. ಮನುಷ್ಯರ ಭೌತಿಕ ಪ್ರೀತಿ ಮುಖ್ಯ ಅಲ್ಲ...
ಭಕ್ತಿನಾಗ ಪ್ರೀತಿ ಇಲ್ಲೇನು? ಪ್ರೀತಿನಾಗ ಭಕ್ತಿ... ಅಂದ್ರಾ ಪರಸ್ಪರ ಶರಣಾಗೋದಿಲ್ಲೇನು? ಹುಚ್ಚಿ ಇದ್ದೀ ..!ಎರಡೂ ಹ್ಯಾಂಗ ಬ್ಯಾರೆ ಬ್ಯಾರೆ ಆಕ್ಕೇತಿ?ಮನಶಾರೆ ಪ್ರೀತಿ ಬ್ಯಾರೆ , ದೇವ್ರ ಪ್ರೀತಿ ಬ್ಯಾರೇನು? ಮನಶಾರ ಪ್ರೀತಿ ಮಾಡೋಹಂಗಾ ಅಲ್ಲೇನ ದೇವ್ರನ್ನಾ ಪ್ರೀತಿ ಮಾಡೋದು? ಮೀರಾ, ಅಕ್ಕನ ಹಾಡಿನೊಳಗಾ ಇಬ್ರ ಅಂಕಿತಾನೂ ತೆಗೆದು ಜರಾ ಹಾಡಿನೋಡು..ಹೆಂಗನಸ್ತದಾ ಹೇಳು. ಜಯದೇವ ಎಷ್ಟು ಎರೋಟಿಕ್ ಆಗಿ ಬರ್ದಾನ
"ಪ್ರಿಯೇ ಚಾರು ಶೀಲೆ......ಸಪದಿ ಮದನಾನಲೋ ದಹತಿ ಮಮ ಮಾನಸಂ / ದೇಹಿ ಮುಖ ಕಮಲ ಮಧುಪಾನಂ" ಇದ್ನೂ ಭಕ್ತಿಸಂಗೀತಾನೇ ಅಂತಾರಲ್ಲವ್ವ?
ನಿನ್ ಕ್ಲಾಸಿಫಿಕೇಷನ್ ಛಂದ್ ಅದಾ ವಿಜು. ಸಾಮಾಜಿಕವಾಗಿ ಬದುಕಲಿಕ್ಕ ಛಂದದಾ. ಆದ್ರ ಪ್ರಕೃತಿ ಒಳಗಾ ಈ ಯಾ ಕ್ಲಾಸಿಫಿಕೇಷನ್ ಇಲ್ಲ ಬಿಡು....ಪ್ರಕೃತಿ ಅಂದ್ರಾನೇ ಸಂಗೀತ ಅಲ್ಲೇನು?ಈ ಗಾಳಿಗಂಧ, ಮಳಿ, ಈ ಹಣ್ಣ ಹಂಪಲಾ, ಬಣ್ಣದ ಭೂಮಿ, ಕಾಪೂಸಿನಂತಹ ಮೃದು ಹೂ ಕೇಸರ, ಹಕ್ಕಿ ಕೂಜನ ಇವೇ ಅಲ್ಲೇನು ಸಂಗೀತ. ಇವೆಲ್ಲ ಬಿಟ್ಟ್ ಸಂಗೀತ ಅದೆ ಅಂತೀಯ? ಸಂಗೀತಂದ್ರ ಬರೀ ಶಬ್ದ ಅಂತಾ ಮಾಡೀಯೇನು? ಪ್ರೀತಿ ಇಲ್ದೇ ಇದ್ರ ಇವೆಲ್ಲ ಸಾಧ್ಯ ಅಂತೀಯೇನು?
ರಿವರ್ಸ್ ಗೇರ್ ಹಾಕಿದ ಉಸ್ತಾದರು
ಮತ್ತಾ ರಾಗಕ್ಕ ಕಾಲಗೀಲ ಏನಿಲ್ಲೇ...ಹಂಗ ನೋಡದ್ರ ಎಲ್ಲಾ ರಾಗಾನೂ ಸಾರ್ವಕಾಲಿಕಾನ ಅದಾ..ಮುಗುಳ್ನಗುತ್ತಾ,... ಇವನವ್ನಾ ಈ ಜೋಗ್ ಮಾತ್ರ ಬಿಡವೊಲ್ದ್ ನೋಡ.
"ಸಾಜನ್ ಮೋರೆ ಘರ್ ಆಯೆ..." ಜೋಗ್ ನ ಜಲಪಾತದಲ್ಲಿ ಉಸ್ತಾದರು ಮುಳುಗಿಹೋದರು. ತನ್ಮಯರಾಗಿ, ಉತ್ಕಂಠಿತರಾಗಿ ಹಾಡುತ್ತಿದ್ದವರು ಸ್ವಲ್ಪ ಹೊತ್ತಿನ ನಂತರ ಕಣ್ಣು ತೆರೆದು,
ಮೇಘದೂತದಾಗ ಒಬ್ಬಳು ನಾಯಕಿ ಬರ್ತಾಳ ನೋಡು. ಆಕಿ ಸಿಂಗಾರ ಮಾಡ್ಕೊಂಡು ತನ್ನ ಪ್ರಿಯತಮನೆಡೆಗೆ ಕತ್ತಲಲ್ಲಿ ಯಾರಿಗೂ ಕಾಣದ್ಹಂಗ ಓಡಿ ಹೋಗುತ್ತಿರುವಾಗ... "ಆ ಹೆಣಮಗಳ ಮುಂದ ನೀ ಘರ್ಜಿಸಿ ಆಕೀನ ಭಯಬೀಳಿಸಬ್ಯಾಡ" ಅಂತ ಕವಿ ಮೇಘಕ್ಕ ತಾಕೀತು ಮಾಡ್ತಾನ... ಅಂತಾ ನಾಯಕಿಗೆ ಏನಂತಾರ? ಅಭಿಸಾರಿಕೆ ಹೌದಲ್ಲೋ? ಭರತನ ಅಷ್ಟ ನಾಯಕಿಯರಲ್ಲಿ ಒಬ್ಳು!
ನಾಯಕಿಯರಿಗೆ ಮಾತ್ರ ಎಂಟು ಹೆಸರು ಆದ್ರೆ ನಾಯಕರಿಗೇಕಿಲ್ಲ?ಪಾಟಿ ಸವಾಲು ಹಾಕಿದಳು ವಿಜು.
"ಹಂಗಂತೀಯಾ? ಥಟ್ಟನೇ "ನಾಯಕರಿಗಾದ್ರ ಎಂಟಲ್ಲ ನೂರೆಂಟಲ್ಲ ಸಾವಿರದೆಂಟು ಹೆಸರಿಟ್ಟರೂ ಕಮ್ಮಿ ಆಕ್ಕೈತಿ ಬಿಡು" ಎಂದು ಜೋರಾಗಿ ನಕ್ಕರು. ಮತ್ತೆ ಗಂಭೀರವಾಗಿ
"ನೋಡು ಈ ಜೋಗ್ ನೊಳಗಾ ಆ ಮೇಘದೂತದ ಅಭಿಸಾರಿಕಾ ಕಾಣಿಸಿದ್ಳು ನನಗಾ...ಎಂಥ ಹಪಾಹಪಿ! ಏನು ಆತಂಕ,ಭಯ, ಅದೆಷ್ಟು ಅವಸರ! ಏರ್ತಾ ಇಳೀತಾ ಇದ್ದದ್ದು ಆಕಿ ಎದೀನಾ ? ಇಲ್ಲ ಕದ್ದು ಮುಚ್ಚಿ ಓಡುವ ರಸ್ತೀನಾ? ಕಣ್ಣಾಮುಚ್ಚಾಲೆ ಆಡ್ತ್ಯಾವಲ್ಲ, ಅವು ರಸ್ತೀ ಮ್ಯಾಲೀನ್ ಬೆಳಕಾ? ಆ ಬೆಳಕು ಹೊರಗಿದ್ದುದಾ ಇಲ್ಲ ಆಕಿ ಒಳಗಿತ್ತಾ? ಆಕಿ ಅವನ್ನ ಸೇರಿದಳಾ? ಇಲ್ವಾ? ಸೇರಬೇಕಾ? ನನ್ ಕೇಳಿದೀ ಅಂದ್ರ ಅವಳು ಸೇರಲೇ ಬಾರದು"
"ಯಾಕೆ?" ಆಶ್ಚರ್ಯದಿಂದ ಕೇಳಿದಳು.
ಏನು ಧಡ್ಡಿ ಇದ್ದೀ ನೀನು, ನನ್ ಶಿಷ್ಯಳಾಗಿ ! ಯಾಕಂದ್ರ ಇಬ್ರೂ ಸೇರಿದರಂದ್ರ ಸಂಗೀತ ನಿಂತು ಹೋಗ್ತದಲೇ... ಹಾಡೇ ಮುಗೀತಂದ್ರ ಇನ್ ಬದುಕೆಲ್ಲಿರ್ತಾದಾ? ಯೋಗ / ಜೋಗ್ ಶಾರೀರದೊಳಗಾ ಇರ್ಬೇಕ್! ಶರೀರದಲ್ಲಿ ಅಲ್ಲ, ವಿಚಾರ ಮಾಡು" ಎಂದರು.
ವಿಜು ನಾಟರಾಗದೊಳಗೆ ಕಳೆದು ಹೋಗಿದ್ದಳು. ಗಂಡ ಮಕ್ಕಳ ಜೊತೆ ದೋಣಿವಿಹಾರ ಮಾಡುತ್ತಿದ್ದಳು. ಮೇಲೆ ನೀಲಿ ಆಕಾಶ ನೀರೊಳಗೂ ನೀಲಿ. ನೀಲಿ ನೀರೊಳಗೆ ಜಗದಾನಂದಕಾರಕ ವೀಣೆ ಮಿಡಿಯುತ್ತಿತ್ತು. ಬದಿಯಲ್ಲೇ ಜೋಗ್ ರಾಗದ ಅಲೆಗಳೆದ್ದವು. ಸಾಜನ್ ಮೋರೆ ಘರ್ ಆಯೇ....ತರಂಗಗಳು ಸುತ್ತುವರೆದವು...
ದೂರದಿಂದ ಗಾಳಿಯಲ್ಲಿ ಜೋಗ್ ಮತ್ತು ನಾಟರಾಗದ ಜುಗಲ್ ಬಂದಿಕೇಳಿ ಬರುತ್ತಿತ್ತು.. "ಸೂರ್ಯ ಚಂದ್ರರೇ ನಯನವಾಗುಳ್ಳ, ನಾಗೇಂದ್ರಶಯನ...ಸೃಷ್ಟಿ ಸ್ಥಿತ್ಯಂತಕಾರ ...ಓಂಕಾರ ಪಂಜರದಲ್ಲಿ ಗಿಣಿಯಾಗಿರುವ ...ಸರೋಜ ಭವ ಕೇಶವ" ಥಳ ಥಳ ಹೊಳೆಯುತ್ತಿದ್ದ jan 13 23
ಶಿಲೆಯೊಡನೆ ಸ್ವಗತ
ಬೆಳಗಿನ ಜನಜಂಗುಳಿ ಕರಗಿ ಹೋಗಿತ್ತು. ರಾತ್ರಿ ಏಳರ ಸಮಯ. ನಾನು ಮತ್ತು ಅವಳು ಇಬ್ಬರೇ ಮುಖಾಮುಖಿ ನಿಂತಿದ್ದೆವು. ಅವಳು -ಕುಂದಾಪುರದ ಬಳಿ ಇರುವ ಕಮಲಶಿಲೆಯ ಬ್ರಾಹ್ಮೀ ದುರ್ಗಾಪರಮೇಶ್ವರೀ. ಹೊರಗೆ ಧೋ ಧೋ ಅಕಾಲಿಕ ಮಳೆ. ಬಂಗಾಳ ಕೊಲ್ಲಿಗೆ ಉಬ್ಬಸವಂತೆ! ಹೀಗಾಗಿ ಅರಬ್ಬಿ ತೀರಕ್ಕೆ ಸಮೀಪವಿರುವ ಇವಳ ತಲೆಯ ಮೇಲೂ ಮಳೆ ! ಎಲ್ಲರ ಮೂಗುಬ್ಬಸವನ್ನು ಕಳೆಯುವವಳು ಮೊದಲು ತಂಪಾಗಬೇಕಲ್ಲ?
ಬೇವಿನ ಗಿಡ ನೆಡುವ ಹರಕೆ ಇತ್ತು. ಅದನ್ನು ತೀರಿಸುವ ಸಲುವಾಗಿ ಬೆಂಗಳೂರಿನಿಂದ ಕುಂದಾಪುರದ ರೈಲು ಹತ್ತಿದ್ದೆವು. 'ವನಮಹೋತ್ಸವ' ಆದ್ದರಿಂದ ಗಂಡನಿಗೆ ಅದರ ಬಗ್ಗೆ ತಕರಾರೇನೂ ಇರಲಿಲ್ಲ. ಆದರೆ ಅಂಗಿ ಕಳಚಿ ದೇವಸ್ಥಾನದ ಒಳಗೆ ಮಾತ್ರ ಬರಲಿಲ್ಲ. ನಾನು ಮಾತ್ರ ಒಳಹೊಕ್ಕೆ.
ಚಿನ್ನದ ಮುಖ, ವಿಧವಿಧ ಆಭರಣ, ರೇಷಿಮೆ ದುಕೂಲ, ಅರಸಿನ ಕುಂಕುಮ ಹೂ ತರತರದ ಅಲಂಕಾರ. ಕನ್ನಡಿಯಂತೆ ಫಳ ಫಳ ಹೊಳೆಯುತ್ತಿದ್ದಳು.
ಗರ್ಭಗುಡಿಯಲ್ಲಿ ಅರ್ಚಕರೂ ಕಾಣಲಿಲ್ಲ. ನನ್ನ ಅವಳ ಏಕಾಂತಕ್ಕೆ ಭಂಗ ತರಬಾರದೆಂದು ಎಲ್ಲೋ ಹೊರಗೆ ಹೋಗಿರಬೇಕು. ನೋಡುತ್ತಲೇ ಇದ್ದೆ ಅವಳು ಮುಡಿದ ಹೂವಿನ ಸೊಬಗನ್ನು ! ಪರಿಮಳ ಆಹ್ಲಾದಕರವಾಗಿ ಉಸಿರಿನೊಂದಿಗೆ ಒಳಹೊರಗೆ ಹಾಯುತ್ತಿತ್ತು. ಮುಟ್ಟಲು ಸಾಧ್ಯವಾಗಲಿಲ್ಲ ಅಷ್ಟೇ. ಇವೆಲ್ಲ ಅಂದ ಚೆಂದಗಳು ಭಕ್ತರ ಕಣ್ಣಿಗಾಗಿ ಅಷ್ಟೇ . ಅವಳು ಉದ್ಭವವಾಗಿರುವುದು 'ಅರೂಪ' ಲಿಂಗಿಯಾಗಿ. ಕಮಲಶಿಲೆ ಆಕಾರದಲ್ಲಿ. ಪೂಜೆಗೊಳ್ಳುವುದೂ ಹಾಗೆಯೇ. 'ಅರೂಪ' ಮತ್ತು 'ಲಿಂಗ' ಇವುಗಳ ಕಲ್ಪನೆಯಲ್ಲಿಯೇ ವೈರುಧ್ಯವಿದೆ. ನಮ್ಮ ಲೋಕಗ್ರಹಿಕೆಯಲ್ಲೇ ಅಸಂಖ್ಯಾತ ವೈರುಧ್ಯಗಳು ಇವೆಯಲ್ಲ? ಮತ್ತೆ ನಮ್ಮ ದೇವರುಗಳೂ ಹಾಗೆಯೇ!
"ನೀನು ಹೀಗೆ ಕನ್ನಡಿಯಾಗಿ ಹೊಳೆದರೆ ಅದರೊಳಗೆ ಎದುರು ನಿಂತ ನಾನೇ ಕಾಣುವೆನಲ್ಲೇ? ನನಗೆ ನಾನೇ ಕಾಣಬೇಕು ನಿಜ. ಆದರೆ ಅದಕ್ಕೂ ಮೊದಲು ನನಗೆ ಜಗತ್ತು ಕಾಣಬೇಕಲ್ಲ? ಕಂಡಕಡೆಯಿಂದ ಕಾಣದಕಡೆಗೆ ಚಲಿಸುವುದೇ ಸರಿಯಲ್ಲವೇ? ನಿನಗೇಕೆ ಮುಖವಾಡ , ವಿಶ್ವಮುಖಿಗೆ? ಬಹುಶಃ ನನ್ನನ್ನು ಅಣಕಿಸಲೆಂದೇ ನೀನು ಚಿನ್ನದ ಮುಖವಾಡ ತೊಟ್ಟಿರಬೇಕು? ನೀನು ಕನ್ನಡಿಯಾಗಿದ್ದೀ! ಕಿಟಕಿಯಾಗಬೇಕು ಅಲ್ಲವೇನೇ? ನನಗೇನೋ ನೀನೊಂದು ಚೌಕಟ್ಟು ಕಿಟಕಿಯ ಚೌಕಟ್ಟೇ ಆಗಿರುವೆ.
ಕಿಟಕಿ ತೆರೆದರೆ ತಾನೇ ಬಯಲು, ಆಕಾಶ ಕಾಣುವುದು?
ಬಯಲನ್ನು, ಆಕಾಶವನ್ನು ಕಾಣಲು ಕಿಟಕಿಯೊಂದು ಮಾಧ್ಯಮ, ಆಧಾರವಷ್ಟೇ. ಎಷ್ಟು ಸಣ್ಣ ಕಿಟಕಿ, ಹಿಂದೆ ನಿಂತು ದಿಟ್ಟಿಸುವ ಕಣ್ಣುಗಳು ಇನ್ನೂ ಸಣ್ಣವು! ಆದರೆ ಅಂತಹ ಸೂಜಿಕಣ್ಣಿನೊಳಗೆ ಆಕಾಶ - ಜಗತ್ತು ಹೇಗೆ ನುಗ್ಗಿಬಿಡುತ್ತದೆ ನೋಡು! ಷರೀಫರ ಕೋಳಿ ಕೋಡುಗನನ್ನು ನುಂಗಿದ ಹಾಗೆ! ನಿನ್ನೆದುರು ನಿಂತ ನನ್ನ ಧಾರ್ಷ್ಟ್ಯದ ಹಾಗೆ.
ನಮ್ಮಲ್ಲಿ ಎಷ್ಟೊಂದು ಕಿಟಕಿಗಳಿವೆ. ಕಿಟಕಿಗಳು ಇರುವುದು ಲೋಕ ಕಾಣುವುದಕ್ಕೆ ಅಲ್ಲವೇನೇ? ಕಂಡ ಲೋಕವನ್ನು ಒಳಗಿಟ್ಟು ನಿಗೂಢ ಕಾಯಬೇಕು, ಧೇನಿಸಬೇಕು! ಬೆಳಕು ಹಾಯದ ಮೇಲೆ ಎಷ್ಟು ಕಣ್ಣುಗಳಿದ್ದರೇನು ?
ನಿನಗೋ ಸಹಸ್ರ ಕೈಕಾಲುಗಳು ಕಣ್ಣುಗಳು! ನೀನೆಷ್ಟು ಕಂಡಿರಬೇಡ? ನಿನ್ನ ಗತಿಯೋ ಅಗಮ್ಯ ದುರ್ಗಮ್ಯ!
ನನಗೂ "ಗೂಡಾನ್ನ ಪ್ರಿಯ"ವೇ ಕಣೇ! ನಿನ್ನ ಅಂಗಳದಲ್ಲಿ ಇಂದು ಅದನ್ನು ಬಡಿಸಿದಷ್ಟು ತಿಂದೆ.
ನೀನು "ಮಾಂಸನಿಷ್ಠೆಯಂತೆ? " ಆದರೆ ನಾನು ನೋಡು ಮಾಂಸಲಳೇ ಆಗಿರುವೆನಲ್ಲ? ಏನು ತಿಂದರೂ ಕೊನೆಗೆ ಕೊಬ್ಬುವುದು ಮಾಂಸವೇ ತಾನೇ?
ನಿನ್ನ ಹಾಗೆ ನನಗೂ ಹುಲಿ/ಸಿಂಹದ ಸವಾರಿ ಮಾಡಬೇಕೆನಿಸುತ್ತದೆ. ಆದರೆ ಏನು ಮಾಡಲಿ ಹೇಳು ಹುಳ ಹುಪ್ಪಟೆಗಳಿಗೂ ಹೆದರುವೆ ನಾನು. ಒಮ್ಮೆ ಕಿಟಕಿ ತೆರೆ ನಿನ್ನ ಸಾವಿರ ಕೈಗಳನ್ನು ನೋಡಬೇಕಿದೆ ನನಗೆ. ಆಗಲಾದರೂ ಪಾಪಕ್ಕೆ ಪಕ್ಕಾದ ನನ್ನ "ಭಯ ಲೋಭ"ಗಳು ಹಿಂಗಿಯಾವು. ಗೋಡೆಗಳು ಬಿದ್ದು ಬಯಲು ಕಾಣಬಹುದು."
ಯಾರೋ ಬಂದರು. ನಮ್ಮ ಸಂಭಾಷಣೆ... ಅಲ್ಲಲ್ಲ ನನ್ನ ಸ್ವಗತ ( ಸಾಲಿಲೊಕಿ) ತುಂಡಾಯಿತು. ಹೊರಗೆ ದೊಡ್ಡ ಪ್ರಾಕಾರ. ಅಲ್ಲಿ ಕುರ್ಚಿಗಳನ್ನು ಇಟ್ಟಿದ್ದರು. ಅಲ್ಲಿ ಹೋಗಿ ಸುಮ್ಮನೇ ಕಣ್ಣು ಮುಚ್ಚಿ ಕುಳಿತೆ. ಅಷ್ಟರಲ್ಲಿ ವಿದ್ಯುತ್ ಪೂರೈಕೆ ತುಂಡಾಯಿತು. ದೀಪಗಳು ಆರಿಹೋದವು. ದ್ವಿಜಾವಂತಿ ರಾಗದ "ಅಖಿಲಾಂಡೇಶ್ವರಿ" ಹಾಡು ಒಳಗಿನಿಂದ ಒದ್ದುಕೊಂಡು ಬಂದಿತು. ತಕ್ಷಣ ನನಗೆ ಅರಿವಿಲ್ಲದಂತೆ ಕಣ್ಣೀರು ಇಳಿಯತೊಡಗಿತು. ಕತ್ತಲಲ್ಲಿ ನಾನೊಬ್ಬಳೇ ! ಅದು ಹೇಗೆ ಗುಡಿಯ ಒಳಗೆ ಅವಳಿದ್ದಳಲ್ಲ? ಹೊರಗೆ ಅವಳದೇ ನೇರಕ್ಕೆ ನಾನು ಕುಳಿತಿದ್ದೆ.
ಬೆಳಿಗ್ಗೆ ಗುಡಿಯ ಮುಂದೆ ಹೂ, ಬಳೆ, ಅರಿಸಿನ ಕುಂಕುಮ, ಪರಿಮಳದ್ರವ್ಯ, ಕುಪ್ಪಸದ ಖಣಗಳ ಸಂತೆ. "ನಾನೇನು ಬಳೆ ತೊಟ್ಟುಕೊಂಡಿದ್ದೇನಾ" ಎಂದು ಮೀಸೆ ಹುರಿಮಾಡುವ ಬಹದ್ದೂರ್ ಗಂಡೂ ಕೂಡ ನತಮಸ್ತಕನಾಗಿ ಇಲ್ಲಿ ಹೂ ಕುಂಕುಮ, ಬಳೆಗಳು ತುಂಬಿದ ಹರಿವಾಣ ಹಿಡಿದು, ಅಂಗಿ ಕಳಚಿ ದೈನ್ಯನಾಗಿ ನಿಲ್ಲುತ್ತಾನೆ -ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಹೊರಗಿನ ಸಮಾಜಕ್ಕೆ ಇರುವ ಒಂದು ಡಯಲಕ್ಟಿಕಲ್ ಸಂಬಂಧ ಸ್ವರೂಪದ ಪ್ರತೀಕದಂತೆ. ಹರಿವಾಣ ಅಣಕಿಸುತ್ತದೆ. "ಎಷ್ಟು ಬಳೆ ಹಾಕಿಕೊಂಡರೂ ಸಾಲುವುದಿಲ್ಲ ಅಮ್ಮನಿಗೆ ನೋಡು" ಎಂದು ದೇವೀ ಉಪಾಸಕಿ ಶೋಭಾ ಶಣೈಅವರು ತಮ್ಮ ಅಮ್ಮನನ್ನು ಕೊಂಡಾಡುತ್ತಿದ್ದುದು ನೆನಪಾಗುತ್ತದೆ.
(ಬಳೆ, ಕುಂಕುಮಕ್ಕೆ ಹಚ್ಚಿಕೊಳ್ಳಬೇಕೆಂದಲ್ಲ. ಕೆಲವರು ತೊಡಲೇ ಬೇಕು, ಇನ್ನು ಕೆಲವರು ತೊಡಲೇ ಬಾರದು ಎನ್ನುವ ನಿಷೇಧದ ಬಗ್ಗೆ ದನಿ ಎತ್ತಬೇಕಾಗಿದೆ. ಬಳೆ ತೊಡುವ ಕಾರಣಕ್ಕಾಗಿಯೇ ದುರ್ಬಲ ಎನ್ನುವುದಾದರೆ. ಅದು ದೌರ್ಬಲ್ಯವಲ್ಲ ಶಕ್ತಿ ಎಂದು ಸಾಬೀತು ಪಡಿಸುವ ಅಗತ್ಯ ಇದೆ)
ಜಾತಿವಿಜಾತಿಯನ್ನದೇ ಇಲ್ಲಿ ಅನ್ನದಾಸೋಹದ ಪುಣ್ಯಕಾರ್ಯ ನಡೆಯುತ್ತದೆ. ಅಮ್ಮನಲ್ಲವೇ ? ಸದಾ ಅವಳಿಗೆ ತನ್ನ ಮಕ್ಕಳ ಹೊಟ್ಟೆಯದೇ ಚಿಂತೆ.
ಟಿಪ್ಪು ಮತ್ತು ಹೈದರಾಲಿ ಈ ದೇವಾಲಯವನ್ನು ರಕ್ಷಿಸಿ ಪೋಷಿಸಿದರಂತೆ ಆ ಕಾರಣವಾಗಿ ಅವರ ನೆನಪಿನಲ್ಲಿ ಸಂಜೆಯ ಹೊತ್ತು ಸಲಾಂ ಪೂಜೆ ನಡೆಯುತ್ತದೆ ಎಂದು ಗೂಗಲ್ ಹೇಳುತ್ತದೆ.
ಇಲ್ಲಿ ಶಿವ ವಿಷ್ಣು ಗಣಪತಿ ಇತ್ಯಾದಿ ದೇವತೆಗಳು ನೆಲೆಸಿರುವುದು ಗರ್ಭಗುಡಿಯ ಹೊರಗಿನ ಪ್ರಾಕಾರದಲ್ಲಿ. ಅವಳ ಮನೆಯೆಂದ ಮೇಲೆ ಅವಳೇ ಒಡತಿಯಾಗಬೇಕಲ್ಲವೇ? ಜೊತೆಗೆ ಸಿಂಹ /ಹುಲಿ ಬೇರೆ! ಇದು ಪ್ರಳಯಭಯಂಕರಿಯ ಹೊತ್ತ ಸಿಂಹವಲ್ಲ. ಬದಲಾಗಿ ಆತ್ಮದ ಗುಹೆಯೊಳಗೆ ಇರುವ ಕೇಸರಿ! ಅದನ್ನು ಸಾತ್ ಮಾಡಿಕೊಂಡವಳು ದುರ್ಗಾಪರಮೇಶ್ವರೀ! ಗುಹೇಶ್ವರೀ! ಅವಳ ಮೂಲ ಸ್ಥಳವೂ ಒಂದು ಗುಹೆಯೇ. ದೇವಸ್ಥಾನದಿಂದ ಎರಡು ಕಿ.ಮೀ ಎತ್ತರದ ಗುಹೆಯೊಳಗೆ ಅವಳ ವಾಸ. ಈ ಜಾಗಕ್ಕೆ ಸುಪಾರ್ಶ್ವ ಮುನಿ ಗೋರಕ್ಷನಾಥ ಮುಂತಾದ ಹೆಸರುಗಳು ಲಗತ್ತಾಗಿವೆ. ಬಹುಶಃ ಅವರು ಇಲ್ಲಿ ಬಂದು ತಪಸ್ಸು ಮಾಡಿರಬೇಕು!
ನಮಗೋ ಗುಹೆಯ ಹೊರಗೇ ಅಲೆಯುವುದರಲ್ಲಿ ಆಸಕ್ತಿ. ಈ ಅಲೆತದಲ್ಲಿ ದಾರಿಯ ತೋರು ಫಲಕಗಳೇ ದಾರಿಗಳಾಗಿಬಿಡುತ್ತವೆ. ನಮ್ಮ ದಾರಿಯನ್ನು ನಾವು ನಡೆಯುವುದೇ ಇಲ್ಲ. ಫಲಕಗಳನ್ನು ಹಿಡಿದುಕೊಂಡು ಪರಸ್ಪರ ಗುದ್ದಾಡುವುದರಲ್ಲೇ ವ್ಯಸ್ತರಾಗಿಬಿಡುತ್ತೇವೆ. ಹೊರಗೇ ಉಳಿದುಬಿಡುತ್ತೇವೆ.
" ಈ ಒಡಲು ಕಲ್ಪಾಂತರ ಸ್ಥಾಯಿಯೇ ಪೇಳಾ?" (ಪಂಪ)
Dec12/ 22
ಶಾರದೆಯ ಕಾಡು….- ಗಿರಿಜಾ ಶಾಸ್ತ್ರೀ
March 10, 2023 aakrutikannada
ಆಶ್ರಮದಂತಿರುವ ‘ಧ್ವನ್ಯಾಲೋಕ’ ವಿದ್ಯಾಸಂಸ್ಥೆ ಪ್ರಸಿದ್ಧ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಸಿ.ಡಿ. ನರಸಿಂಹಯ್ಯನವರ ಕನಸಿನ ಕೂಸಾಗಿತ್ತು. ಭಾರತದಲ್ಲಿ ಅಮೇರಿಕನ್ ಸಾಹಿತ್ಯವನ್ನು ಪರಿಚಯಿಸಿದವರೇ ಅವರು. ಕಾಮನ್ ವೆಲ್ತ್ ಸಾಹಿತ್ಯದ ಬೆಳವಣಿಗೆಗೆ ಕಾರಣರಾದವರು ಅದನ್ನು ಈಗ ಅವರ ಮಗನಾದ ಪ್ರೊ ಶ್ರೀನಾಥ್ ಅವರು ವಿಭಿನ್ನ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ, ಇನ್ನಷ್ಟು ವಿಷಯವನ್ನು ಲೇಖಕಿ ಗಿರಿಜಾ ಶಾಸ್ತ್ರೀ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ಮೈಸೂರಿನ ‘ಧ್ವನ್ಯಾಲೋಕ’ ಶಾರದೆಯ ಒಂದು ಸಹಜ ಕಾಡು. ನೂರಕ್ಕಿಂತ ಹೆಚ್ಚು ಜಾತಿಯ ಮರಗಳಿವೆ. ಮೂರುವರೆ ಎಕರೆಗಳ ಈ ಕಾಡನ್ಮು ಸಮವಾಗಿ ಕತ್ತರಿಸಿ ರಿಸಾರ್ಟ್ ಮಾಡಲಾಗಿಲ್ಲ. ಕಾಡನ್ನು ಕಾಡಿನಂತೆಯೇ ಉಳಿಸಿಕೊಂಡು ಅದರೊಳಗೆ ಒಂದು ಜ್ಞಾನ ದೇಗುಲವನ್ನು ರೂಪಿಸಲಾಗಿದೆ. ಇಲ್ಲಿ ಹಗಲೂ ಇರುಳೂ ಕಾಡಿನ ಕಲರವ.
ಜ್ಞಾನದಾಹಿಗಳು ಇಲ್ಲಿ ಕಳೆದು ಹೋಗಬಲ್ಲಂಥ ಗ್ರಂಥಾಲಯವಿದೆ. ಅಪರೂಪದ ಗ್ರಂಥಗಳಿಂದ ತುಂಬಿರುವ ಇದರ ಒಳ ಹೊಕ್ಕರೆ ಸಾಕು ಅನಂತ ಪ್ರಾಚೀನತೆ ಮೂಗಿಗೆ ಬಡಿಯುತ್ತದೆ. ಕೇವಲ ಪರ್ವತ ಮತ್ತು ಸಾಗರಗಳ ಮುಂದೆ ನಿಂತಾಗ ಮಾತ್ರ ಭೂಮಾನುಭೂತಿಯಾಗುವುದಿಲ್ಲ. ಅಪೂರ್ವ ಗ್ರಂಥಾಲಯ ಹೊಕ್ಕಾಗಲೂ ಆಗುತ್ತದೆ. ಅದರೊಳಗೆ ಹೊಕ್ಕ ಪಾಮರರು ನಾವು ನಮ್ಮ ಸ್ಥಾನ ನಿರ್ದೇಶನಕ್ಕೆ ತಡಕಾಡುತ್ತಾ ಕಳವಳ ಪಡುತ್ತೇವೆ. ನಮ್ಮ ಭ್ರಮೆ ಹರಿಯುತ್ತದೆ. ೧೯೫೨ ರಿಂದಲೂ ಲಿಟರರಿ ಕ್ರೈಟೀರಿಯಾನ್ ಎನ್ನುವ ಶಾಣ್ಮಾಸಿಕ ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿರುವ ಶ್ರೇಯಸ್ಸು ಈ ಗ್ರಂಥಾಲಯಕ್ಕಿದೆ. ಸುಮಾರು ೨೩ ವರುಷಗಳಿಂದ ಅನುವಾದಕ್ಕೆಂದೇ ಇರುವ ಸಾರಸ ಎಂಬ ಪತ್ರಿಕೆಯನ್ನು ಶ್ರೀನಾಥ್ ಅವರು ನಡೆಸಿಕೊಂಡು ಬರುತ್ತಿದ್ದಾರೆ.
ಒಂದು ರಂಗಮಂದಿರವಲ್ಲದೇ ರಾಜೀವ ಗಾಂಧೀ ಹೆಸರಿನ ಬಯಲು ರಂಗಮಂದಿರ ಕೂಡ ಇದೆ.
ಮರಗಳು ರೂಪಿಸಿದ ದಾರಿಯಲ್ಲೇ ನೆಲದ ಹಾಸುಗಳನ್ನು ನೆಡಲಾಗಿದೆ. ” ನೆಲ ಹಾಸುವುದಕ್ಕಾಗಿ ಒಂದು ಸಣ್ಣ ಗಿಡವನ್ನೂ ಘಾಸಿಗೊಳಿಸಿಲ್ಲ” . ಎಂದು ನಳಿನಾ ಅವರು ಹೇಳುತ್ತಾರೆ. ಇಲ್ಲಿ ಹಲವಾರು ತೆಂಗಿನಮರಗಳಿವೆ . ಬಿದ್ದ ಗರಿಗಳನ್ನು ಕಾಯಿಗಳನ್ನು ಯಾರು ಒಯ್ಯುತ್ತಾರೆ? ಗೊತ್ತಿಲ್ಲ ಈ ನಳಿನಾ ಅಕ್ಕನಿಗೆ. ಒಡೆತನವನ್ನು ಸ್ಥಾಪಿಸುವ ಮನಸ್ಸಿಗೆ ಸದಾ ಇದೇ ಆತಂಕವಲ್ಲವೇ? ನನ್ನ ನೆಲದ ಫಲವನ್ನು ಯಾರೋ ಸಂಬಂಧವಿಲ್ಲದವರು ಉಣ್ಣುತ್ತಾರೆ. ಹಾಗೆ ಉಣ್ಣುವವರು ಕಳ್ಳರು. “ಯಾರೋ ತೊಗೊಂಡು ಹೋಗ್ತಾರೆ ಬಿಡಿ” ಎಂದು ಯಾರು ತಿಂದರೆ ತಾನೆ ಏನು? ಎನ್ನುವಂತೆ ನಳಿನಿಯವರು ತಣ್ಣಗೆ ಹೇಳಿದಾಗ ನನಗೆ ಆಶ್ಚರ್ಯ ವಾಯಿತು.
ಆಶ್ರಮದಂತಿರುವ ಈ ವಿದ್ಯಾಸಂಸ್ಥೆ ಪ್ರಸಿದ್ಧ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಸಿ.ಡಿ. ನರಸಿಂಹಯ್ಯನವರ ಕನಸಿನ ಕೂಸು. ಭಾರತದಲ್ಲಿ ಅಮೇರಿಕನ್ ಸಾಹಿತ್ಯವನ್ನು ಪರಿಚಯಿಸಿದವರೇ ಅವರು. ಕಾಮನ್ ವೆಲ್ತ್ ಸಾಹಿತ್ಯದ ಬೆಳವಣಿಗೆಗೆ ಕಾರಣರಾದವರು ಅದನ್ನು ಈಗ ಅವರ ಮಗನಾದ ಪ್ರೊ ಶ್ರೀನಾಥ್ ಅವರು ವಿಭಿನ್ನ ರೀತಿಯಲ್ಲಿ (ಅನುವಾದ ಸಾಹಿತ್ಯ ಕುರಿತಾದ ವಿಚಾರ ಸಂಕಿರಣಗಳು, ಕಮ್ಮಟಗಳು) ಮುನ್ನಡೆಸುತ್ತಿದ್ದಾರೆ. ಮತ್ತು ಬೆಳೆಸುತ್ತಿದ್ದಾರೆ . ಇನ್ನೂ ಬಹಳಷ್ಟು ಯೋಜನೆಗಳಿವೆ. ಶ್ರೀಮತಿ ನಳಿನಾ ಶ್ರೀನಾಥ್ ಅವರ ಬೆನ್ನಿಗಿದ್ದಾರೆ.
ಸಿ.ಡಿ.ಎನ್. ಅವರ ಪ್ರತಿಭಾವಂತ ಮಗ, ಅವರ ಬಹಳ ಭರವಸೆಯ ಮಗ ಸಂಜಯ ಅಕಾಲಿಕ ಮರಣಕ್ಕೆ ತುತ್ತಾದರು. ಅವರ ನೆನಪಿನಲ್ಲಿ ಒಂದು ವಿಚಾರ ಮಂಟಪ ಧ್ವನ್ಯಾಲೋಕದ ಹೊಸ್ತಿಲಲ್ಲೇ ನಮಗೆ ಎದುರಾಗುತ್ತದೆ. ಇಲ್ಲಿಯೇ ವಾಸವಾಗಿರುವ ಅವರ ಶ್ರೀಮತಿ ಜಯಶ್ರೀ ಅವರೂ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದವರು. ಇಡಿಯ ಕುಟುಂಬವೇ ಇಂಗ್ಲಿಷ್ ಪ್ರಾಧ್ಯಾಪಕರುಗಳದ್ದು. English is our Business ಎಂದು ಸಿ.ಡಿ. ಎನ್ ಅವರು ತಮಾಷೆ ಮಾಡುತ್ತಿದ್ದರಂತೆ.
ಸಂಜಯ ವಿಚಾರ ಮಂಟಪದಲ್ಲಿ ನಾಟಕದ ತಾಲೀಮುಗಳು, ಕವಿ ಕಲಾವಿದರ ಸಂದರ್ಶನಗಳು ನಡೆಯುತ್ತವೆ. ಸಂಶೋಧಕರು ತಿಂಗಳು ಗಟ್ಟಲೆ ಇಲ್ಲಿ ಬಂದು ತಂಗುತ್ತಾರೆ, ಸಿನಿಮಾ ಚಿತ್ರಕಥೆ ಬರೆಯುವವರೂ ಬರುತ್ತಾರೆ. ಹಾಗೆ ಬಂದವರಿಗೆ ಉಳಿದುಕೊಳ್ಳಲು ಇಲ್ಲಿ ಸರಳವಾದ ಕೋಣೆಗಳಿವೆ. ಉಣಬಡಿಸುವ ಮೆಸ್ ಇದೆ. ಈ ವಿಷಯ ಹೆಚ್ಚಿನ ಮೈಸೂರಿಗರಿಗೇ ಗೊತ್ತಿಲ್ಲ.
ಹಾಸನದ ರಾಜಾರಾಯರು ಮತ್ತು ಆರ್ . ಕೆ. ನಾರಾಯಣ್ ಅವರ ಘಮಲು ಈ ಧ್ವನ್ಯಾಲೋಕದಲ್ಲಿ ಸುಳಿದಾಡುತ್ತದೆ. ನಿಜಿಮ್ ಎಜಕ್ಕಿಲ್, ಬಾಲಚಂದ್ರ ನೆಮಾಡೆ, ಕಂದಸ್ವಾಮಿ ಮುಂತಾದವರೆಲ್ಲಾ ಮುಂಬಯಿಯಿಂದ ಬಂದು ಹೋಗಿದ್ದಾರೆ. ಭಾರತದ ಎಲ್ಲಾ ಭಾಗಗಳಿಂದಲೂ ಜ್ಞಾನಾಕಾಂಕ್ಷಿಗಳಾದ ಜನ ಬರುತ್ತಾರೆ. ಇದರ ಹೆಸರೇ “center for Indian studies” ಎಂದು. ನಾನು ಹತ್ತು ವರುಷಗಳ ಹಿಂದೆ ಇಂಡಿಯನ್ ಇಂಗ್ಲಿಷ್ ಲೇಖಕಿಯರ ಬಗೆಗೆ ಸಂಶೋಧನೆಯನ್ನು ಕೈಗೊಂಡಾಗ ನನಗೆ ತೋರುಗಂಬವಾಗಿದ್ದು ಈ ಸಂಸ್ಥೆಯೇ !
ನಾವು ಧ್ವನ್ಯಾಲೋಕದೊಳಗೆ ಹೊಕ್ಕಾಗ ಇಲ್ಲಿನ ಮ್ಯಾನೇಜರ್ ಸುಭಾಷ್ ಅವರು ನಮ್ಮ ಲಗ್ಗೇಜುಗಳನ್ನು ಹೊತ್ತು ತಂದು ನಮ್ಮ ಕೋಣೆಗೆ ತಲಪಿಸಿದರು. ಮೆಟ್ಟಿಲು ಏರುತ್ತಿದ್ದಾಗ “ಬನ್ನಿ ಊಟ ಮಾಡಿ ” ಎಂಬ ದನಿ ಕೇಳಿಸಿತು. ಹಿಂದೆ ನಳಿನಾ ಅವರು ನಿಂತಿದ್ದರು. ಒಳ ಹೋದಾಗ ಕೂರಿಸಿ ಬಡಿಸಿದರು. ಯಾರೋ ಕ್ಯಾಂಟೀನಿನ ಪಾರುಪತ್ತೆಗಾರರಿರಬೇಕು ಎಂದು ಕೊಂಡೆ. ಅವರೇ ಈ ವಿದ್ಯಾಸಂಸ್ಥೆಯ ಒಡತಿ ಎಂದು ತಿಳಿಯಲಿಲ್ಲ. ಹಾಗೆ ಗುರುತಾದ ನಳಿನಾ ಅವರು ಹಿರಿಯಕ್ಕನಂತೆ ಎಲ್ಲೆಲ್ಲಿ ಏನೇನೆಂದು ಅಕ್ಕಪಕ್ಕ ಪರಿಚಯಿಸಿದರು. ಎದುರಾದಾಗಲೆಲ್ಲ ಇವತ್ತೇನು ಮಾಡಿದಿರಿ? ಯಾರನ್ನ ಭೇಟಿಯಾದಿರಿ ? ಹೀಗೆ ಉಭಯಕುಶಲ. ಆಗಾಗ ಸಂಸಾರದ ಕಷ್ಟ ವ್ಯಸನ ಸಂತೋಷಗಳ ವಿನಿಮಯ. ಕಂಡಾಗಲೆಲ್ಲ ನಮ್ಮನ್ನು ಅಗತ್ಯಕ್ಕಿಂತ ಹೆಚ್ಚಾಗಿ ಹೊಗಳಿ ಮುಜುಗರಗೊಳಿಸುತ್ತಿದ್ದರು. ಅವರೂ ಪ್ರವಾಸಿಗರ ತಂಗುವ ಕೋಣೆಯಲ್ಲೇ ಇರುವುದು. ಕೆಳಗಿನ ಮೆಸ್ ನಲ್ಲಿಯೇ ಊಟ. ಅವರ ಪತಿ ಶ್ರೀನಾಥ್ ಮಿತಭಾಷಿ. ಅಂತಹವರೂ ಕೂಡ ವಾಕ್ ಮಾಡುತ್ತಿದ್ದ ನಮ್ಮ ಬಳಿಗೆ ಬಂದು ನನ್ನ ‘ಸಂಗೀತದ ಒಸಗೆ’ ಪುಸ್ತಕದ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನು ಹೆಚ್ಚಾಗಿಯೇ ಆಡಿದರು. ಬರೆದು ಕೊಟ್ಟರು. ಬಿಡುಗಡೆಗೆ ಮುನ್ನವೇ ನನ್ನ ಪುಸ್ತಕಕ್ಕೆ ಬಂದ ಮೊತ್ತ ಮೊದಲ ಮಹತ್ವದ ಪ್ರತಿಕ್ರಿಯೆ ಅದು. ರಘುನಾಥ್, ಅವರ ಹಾಗೂ ಅವರ ತಂದೆಯ ಪುಸ್ತಕಗಳ ಬಗ್ಗೆ ಬರೆದಾಗ ಮೆಲುದನಿಯಲ್ಲೇ ಸಂತೋಷ ವ್ಯಕ್ತಪಡಿಸಿದರು. “ಇನ್ನೂ ಸ್ವಲ್ಪದಿನ ಇರಿ. ಈಗಲೇ ಯಾಕೆ ಹೋಗುತ್ತೀರ” ಗಂಭೀರ ಸ್ವಭಾವದ ಅವರಿಂದ ಈ ಮಾತುಗಳನ್ನು ನಾನು ನಿರೀಕ್ಷಿಸಿಯೇ ಇರಲಿಲ್ಲ. ( ಇವರೊಡನೆ ನಡೆಸಿದ ಸಂದರ್ಶನವನ್ನು ಪ್ರತ್ಯೇಕ ಹಂಚಿಕೊಳ್ಳುವೆ) ಅಲ್ಲಿ ನಾವು ತಂಗಿದ್ದು ಬರೋಬ್ಬರಿ ಹನ್ನೆರೆಡು ದಿನಗಳು. ಎಲ್ಲಿಯೂ ನಾವು ಒಂದು ಕಡೆ ಇಷ್ಟು ದಿನಗಳು ತಂಗಿದ ನೆನಪೇ ಇಲ್ಲ. ಕಾಲ ಹೇಗೆ ಹೋಯಿತೆಂದು ತಿಳಿಯಲೇ ಇಲ್ಲ. ಹೊರಡುವ ದಿನ ನಮಗೆ ಶ್ರೀನಾಥ್ ದಂಪತಿಯಿಂದ ಮೈಲಾರಿ ಹೊಟೆಲ್ ನಲ್ಲಿ ಆತಿಥ್ಯ. ತಾವೇ ಬಿಡಿಸಿದ ಒಂದು ಕಲಾತ್ಮಕ ಆಕರ್ಷಕ ಹೂದಾನಿಯನ್ನು ನನಗೆ ಉಡುಗೊರೆಯಾಗಿ ಇತ್ತರು
ನಾನು ಸಂಶೋಧನೆಗೆಂದು ಅನೇಕ ವಿಶ್ವವಿದ್ಯಾಲಯಗಳ ಮೆಟ್ಟಿಲು ಹತ್ತಿದ್ದೇನೆ, ಪ್ರವಾಸವೆಂದು ಅನೇಕೆ ಹೋಟೆಲ್ ವಸತಿ ಗೃಹಗಳಲ್ಲಿ ತಂಗಿದ್ದೇನೆ. ಎಲ್ಲಾ ಕಡೆ, ಒಂದು ಅಂತರವನ್ನಿಟ್ಟುಕೊಂಡು ವ್ಯಾಪಾರದ ಬಿಗುವಿನಲ್ಲೇ ಮಾತನಾಡಿಸಿದ್ದಾರೆ. ಆದರೆ ಧ್ವನ್ಯಾಲೋಕದ ಅನುಭವವೇ ಬೇರೆ. ಮೈಸೂರು ನನ್ನ ತವರೂರು. ನಮ್ಮ ಧ್ವನ್ಯಾಲೋಕದ ವಾಸ್ತವ್ಯ ಅದನ್ನು ಮತ್ತೆ ಮತ್ತೆ ನೆನಪುಮಾಡಿಕೊಟ್ಟಿತು. ಬಹಳ ಉತ್ಸಾಹೀ ಮಹಿಳೆ ಶ್ರೀಮತಿ ಜಯಂತಿ ರಾಮಚಂದ್ರನ್ ಎಂಬ ಅಪರೂಪದ ಗೆಳತಿ ಸಿಕ್ಕಿದ್ದು ಇಲ್ಲಿಯೇ. ಪ್ರಸನ್ನ ಸಂತೇ ಕಡೂರು ಅವರು ನಮ್ಮನ್ನು ನೋಡಲು ಬಂದಾಗ ನಾವೆಲ್ಲಾ ಒಟ್ಟಿಗೆ ಸೇರಿ ಸಾಹಿತ್ಯಕ ಹುಯಿಲೆಬ್ಬಿಸಿದ್ದು ಅವಿಸ್ಮರಣೀಯ.
ಅಲ್ಲಲ್ಲೇ ಮರಗಳ ಕೆಳಗೆ ಕಲ್ಲು ಬೆಂಚುಗಳು. ತಂಪಾದ ಗಾಳಿ, ಬೆಚ್ಚನೆ ಬಿಸಿಲು , ರಾತ್ರಿಹೊತ್ತು ತಲೆಯೆತ್ತಿ ನೋಡಿದರೆ ಚಂದ್ರತಾರೆಗಳು ! ಜೀರುಂಡೆ ಕೂಗು! ಪ್ರೀತಿಯಿಂದ ಎದುರುಗೊಳ್ಳುವ ಮಂದಿ! ಸುಖ ಎಂದರೆ ಮತ್ತೇನು?
ಗಿರಿಜಾ ಶಾಸ್ತ್ರೀ – ಇಂಗ್ಲಿಷ್ ಉಪನ್ಯಾಸಕರು,ಲೇಖಕರು, ಮುಂಬೈ
ಓಂಶಾಂತಿಧಾಮ ವೇದಗುರುಕುಲ' : ನನ್ನದೊಂದು ಲೇಖನ ವಿಶ್ವಾಣಿಯಲ್ಲಿ. ಶಶಿಧರ ಹಾಲಾಡಿಯವರಿಗೆ ಧನ್ಯವಾದಗಳು
ಮನುಷ್ಯಜಾತಿ ತಾನೊಂದೆ ವಲಂ" ಎನ್ನುವ ಪ್ರಣಾಳಿಕೆಯನ್ನಿಟ್ಟುಕೊಂಡು, ವಸುಧೈವ ಕುಟುಂಬಕಂ ಎನ್ನುವ ಒಂದು ಅಖಂಡವಾದ ತಾತ್ವಿಕ ನೆಲೆಗಟ್ಟಿನ ಮೇಲೆ ಓಂಶಾಂತಿಧಾಮ ವೇದ ಗುರುಕುಲ ಎನ್ನುವ ಟ್ರಸ್ಟ್ ಬೆಂಗಳೂರಿಗೆ ತೊಂಬತ್ತು ಕಿ.ಮೀ. ದೂರದಲ್ಲಿ ಕನಕಪುರದ ಸಂಗಮದ ಬಳಿ ನೆಲೆ ನಿಂತಿದೆ.
ಇದು "ವೇದಗಳಿಗೆ ಮರಳಿ" ಎನ್ನುವ ಸ್ವಾಮಿ ದಯಾನಂದ ಸರಸ್ವತಿಯವರ ಪರಿಕಲ್ಪನೆಯ ಮೇಲೆ ಸ್ಥಾಪಿತವಾಗಿರುವ ವಿದ್ಯಾಕೇಂದ್ರ. ವೇದಾದ್ಯಯನ, ಅಧ್ಯಾತ್ಮ ಸಾಧನೆ ಮತ್ತು ಆರೋಗ್ಯ ಪಾಲನೆ ( ಆಯುರ್ವೇದ) ಇದರ ಮೂರು ಮೂಲ ಉದ್ದೇಶ.
ನಾನು ಓಂಶಾಂತಿಧಾಮ ವೇದ ಗುರುಕುಲಕ್ಕೆ ಕಾಲಿಟ್ಟು ಗೋಶಾಲೆಯ ಹತ್ತಿರ ಬಂದಾಗ ಒಬ್ಬರು ಸಾಮಾನ್ಯ ಗ್ರಾಮೀಣ ವ್ಯಕ್ತಿಯ ಹಾಗೆ ರಸ್ತೆ ಬದಿಯಲ್ಲಿ ಅಥವಾ ಸಂತೆಯೊಳಗೆ ಕೂರುವ ಹಾಗೆ ಒಂದು ಕುರ್ಚಿಯಮೇಲೆ ಕೆಲವು ವ್ಯಕ್ತಿಗಳನ್ನು ಸುತ್ತುವರಿದು ಕಾಲು ಚಾಚಿ ಕುಳಿತಿದ್ದರು. ಹಾಗೆ ಸಂತೆಯೊಳಗೆ ಕುಳಿತ ಸಂತ ಬೇರಾರೂ ಅಲ್ಲ ಅವರೇ ಈ ಗುರುಕುಲದ ಮಹತ್ವಾಕಾಂಕ್ಷೆಯ ಕನಸು ಕಂಡು ಅದನ್ನು ತಮ್ಮ ಜೊತೆಗಾರರ ಸಹಕಾರದಿಂದ ಹುಟ್ಟು ಹಾಕಿ ಬೆಳೆಸಿದ ಅನಂತ ಆರ್ಯಾ ಎಂದು ಗೊತ್ತಾಯಿತು.
ಮಿಲಿಟರಿ ಸೇವೆಯಲ್ಲಿದ್ದ ಆರ್ಯಾಜೀ ಹೊರದೇಶಗಳಲ್ಲೂ ಸೇವೆ ಮಾಡಿ ಸಾಕಷ್ಟು ಹಣ ಗಳಿಸಿದರು. ಗಳಿಸಿದ ಹಣ ವಾಕರಿಕೆ ತರಿಸಿತು. ಅಪಾರ ಸಂಬಳದ ಕೆಲಸವನ್ನು ತ್ಯಜಿಸಿ ಭಾರತಕ್ಕೆ ಮರಳಿದರು. ಸಂಪಾದಿಸಿದ ಹಣ ಏನು ಮಾಡಬೇಕೆಂದು ತಿಳಿಯಲಿಲ್ಲ. ಆ ವೇಳೆಗೆ ಬ್ರಹ್ಮದೇವ್ ಎನ್ನುವ ಸಿದ್ಧಪುರುಷರೊಬ್ಬರ ಪರಿಚಯವಾಯಿತು. ಆರ್ಯಾಜೀಯವರು ಎಂದೂ ಅಧ್ಯಾತ್ಮದ ಹಾದಿ ತುಳಿದವರಲ್ಲ. ಬ್ರಹ್ಮದೇವ್ ಅವರ ಸಂಪರ್ಕಕ್ಕೆ ಬಂದದ್ದೇ ಪರುಷಮಣಿಯ ಸ್ಪರ್ಶವಾದಂತಾಯಿತು. ಗುರುಕುಲ ಸ್ಥಾಪನೆಯ ಬೆಳಕಿನ ಬೀಜವನ್ನು ಆರ್ಯಾಜೀಯವರ ಮನಸ್ಸಿನಲ್ಲಿ ಬಿತ್ತಿದವರೇ ಬ್ರಹ್ಮದೇವ್ ಅವರು. ಜೊತೆಗೆ ಸತ್ಯವ್ರತ ರಂತಹ ಸಮಾನ ಆಸಕ್ತರೂ ಸೇರಿಕೊಂಡರು. ಆರ್ಯಾಜೀ ಅವರ ಸಹೋದರ ಶಾಮಣ್ಣನವರೇ ಅಲ್ಲದೇ ಸುಧಾಕರ ಬಾಬು ಎಂಬುವವರೂ ಜೊತೆಗೂಡಿದರು.
ಗುರುಕುಲವನ್ನು ಸ್ಥಾಪಿಸಲು ಬೆಟ್ಟಗಳಿಂದ ಸುತ್ತುವರಿದ, ನದಿಗಳು ಕೂಡುವ ಕಾಡಿನ ಪ್ರದೇಶವೇ ಪ್ರಶಸ್ತವಾದ ಜಾಗ ಎಂಬ ಉಲ್ಲೇಖ ಋಗ್ವೇದದಲ್ಲಿ ಇದೆಯಂತೆ. ೧೯೮೮-೮೯ ರ ಸುಮಾರಿಗೆ ಅಂತಹ ಜಾಗಕ್ಕಾಗಿ ಸಾವಿರಾರು ಮೈಲಿಗಳನ್ನು ಕರ್ನಾಟಕದಾದ್ಯಂತ ಅರಸುತ್ತಾ ಮೂವರು ಗೆಳೆಯರು ಅಲೆದಾಡಿದರು. ಕೊನೆಗೊಮ್ಮೆ ಕಾವೇರಿ ಅವರುಗಳನ್ನು ಕೈಮಾಡಿ ಕರೆದಳು. ಕನಕಪುರದ ಸಂಗಮದ ಬಳಿಯ ಅವಳ ತೀರದಲ್ಲಿ ಎಂಬತ್ತು ಎಕರೆಗಳಷ್ಟು ಜಾಗವನ್ನು ಆರ್ಯಾಜೀಯವರು ತಮ್ಮ ಸ್ವಂತ ಹಣದಿಂದ ಖರೀದಿಸಿದರು.
ಆರ್ಯಾಜೀ ಮತ್ತು ಗೆಳೆಯರು ಗುರುಕುಲಕ್ಕಾಗಿ ಕಾಡಿನ ಪ್ರದೇಶವನ್ನು ನೋಂದಾಯಿಸಿಕೊಂಡ ತಕ್ಷಣ ನಾಡ ಪ್ರಭುಗಳ ಕಣ್ಣು ಕೆಂಪಾಯಿತು. ಆಗ ಅವರು ತಮ್ಮ ಪಡೆಗಳ ಸಮೇತ ಬಂದು "ಕೊಟ್ಟಷ್ಟು ದುಡ್ಡು ತೆಗೆದುಕೊಂಡು ಜಾಗ ಖಾಲಿ ಮಾಡು" ಎಂದು ತರ್ಜನಿ ಬೆರಳಲ್ಲಿ ಧಮ್ಕಿ ಹಾಕಿದರು. ಆರ್ಯಾಜೀಯವರು ಮೊದಲೇ ಮಿಲಿಟರಿಯಲ್ಲಿ ಇದ್ದವರು. "ನಾನು ವ್ಯಾಪಾರಕ್ಕೆ ಕುಂತಿಲ್ಲ, ಅದೇನು ಮಾಡ್ಕೋತೀಯೋ ಮಾಡ್ಕೋ ಹೋಗ್ " ಎಂದು ಹೆಗಲ ಮೇಲಿನ ಶಲ್ಯ ಒದರಿ ಎದ್ದು ಹೊರ ನಡೆದರು. ನಾಡ ಪ್ರಭುಗಳು ನಡುಗಿದರು.
೧೯೯೧ ರಲ್ಲಿ ಹೀಗೆ ಮೊದಲು ಹುಟ್ಟಿದ್ದು ಕನ್ಯಾ ಗುರುಕುಲ. ಹಾಗೆ ಗುರುಕುಲಕ್ಕೆ ದಾಖಲಾದ ಕನ್ಯೆಯರಲ್ಲಿ ಸತ್ಯವ್ರತ ಅವರ ಅಕ್ಕ ಸುಶೀಲಮ್ಮನವರೂ ಒಬ್ಬರು . ಮಹಿಳಾ ವೇದಾಧ್ಯಯನದ ಬಗ್ಗೆ ಜಾಗೃತಿಯನ್ನು ಮೂಡಿಸಲು ಇವರು ತಮ್ಮ ಸಹಚರರೊಂದಿಗೆ ಕರ್ನಾಟಕದ ಮೂಲೆ ಮೂಲೆ ತಿರುಗಿದರು. ಭಾಷಣಗಳನ್ನು ಮಾಡಿದರು. ಇಂದು ವೇದವಿದ್ಯಾ ಪಾರಂಗತೆಯಾಗಿ, ಸಂಸ್ಕೃತ ಪಂಡಿತೆಯಾಗಿ ಗುರುಕುಲದ ಎಲ್ಲ ಮಕ್ಕಳಿಗೆ ಸುಶೀಲಮ್ಮ ತಾಯಿಯಾಗಿದ್ದಾರೆ. ಇವರ ಹಾಗೆಯೇ ಅನೇಕ ಮಹಿಳೆಯರು ವೇದವಿದ್ಯಾ ಪಾರಂಗತರಾಗಿ ಹೊರನಡೆದಿದ್ದಾರೆ.
ಕಾಲಾಂತರದಲ್ಲಿ ಹುಡುಗಿಯರು ಮುಂದೆ ಬಾರದ ಕಾರಣ ವೇದ ಗುರುಕುಲವನ್ನು ಬಾಲಕರ ವೇದಗುರುಕುಲವನ್ನಾಗಿ ಬದಲಾಯಿಸಲಾಯಿತು. ಸುಮಾರು ಐವತ್ತು ಮಕ್ಕಳು ಇಲ್ಲಿ ಅಧ್ಯಯನದಲ್ಲಿ ನಿರತರಾಗಿದ್ದಾರೆ.
ವೇದ ಕಲಿಯಲು ಮಕ್ಕಳು ಬಂಗಾಳ ಮತ್ತು ರಾಜಾಸ್ಥಾನದಿಂದಲೂ ಬಂದಿದ್ದಾರೆ. ಇಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ, ಊಟ, ಉಡುಪನ್ನು ನೀಡಲಾಗುತ್ತದೆ. ಕೇವಲ ಊಟವಷ್ಟೇ ಅಲ್ಲ, ಬೆಳಗಿನ ಹೊತ್ತು ವೇದಾಧ್ಯಯನ ವಾದರೆ ಮಧ್ಯಾಹ್ನ ಇತರ ಶಾಲೆಗಳಂತೆ ಆಧುನಿಕ ಶಿಕ್ಷಣ. ಎಷ್ಟೋ ವಿದ್ಯಾರ್ಥಿಗಳು ಇಲ್ಲಿಂದ ಹೊರ ಹೋದವರು ಸ್ನಾತರಾಗಿ ದೇಶವಿದೇಶಗಳಲ್ಲಿ ನೆಲೆಸಿ ಯಶಸ್ವೀ ಜೀವನ ನಡೆಸುತ್ತಿದ್ದಾರೆ.
ಈ ಓಂ ಶಾಂತಿಧಾಮ ಗುರುಕುಲ ಅನೇಕ ಕಾರಣಗಳಿಗೆ ನನಗೆ ಮುಖ್ಯವಾಗಿದೆ.
ಇಲ್ಲಿ ಮಕ್ಕಳಿಗೆ ಶಿಕ್ಷಣದಿಂದ ಹಿಡಿದು, ವಸತಿ, ಉಡುಪು ಎಲ್ಲವೂ ಉಚಿತ. ಉಚಿತವೆಂದಾಕ್ಷಣ ಬೇಕಾಬಿಟ್ಟಿಯಾಗಿಲ್ಲ. ಪೌಷ್ಠಿಕ ಆಹಾರವನ್ನು ಕೊಡಲಾಗುತ್ತದೆ. ಬೆಳಗಿನ ತಿಂಡಿಯನಂತರ ಹತ್ತು ಗಂಟೆಗೆ ಹಾಲು ಮತ್ತು ಬಿಸ್ಕತ್ತು, ಸಂಜೆ ನಾಲ್ಕುಗಂಟೆಗೆ ಹಣ್ಣು , ಲಘು ಉಪಹಾರ, ದೀಪಾವಳಿಯ ತೈಲ ಅಭ್ಯಂಜನ....ಮಕ್ಕಳು ಸುಖವಾಗಿದ್ದಾರೆ. ಹಾಗೆಂದು ಮಕ್ಕಳೇ ಹೇಳಿದ್ದಾರೆ. ಶಿಕ್ಷಣವೆಂಬುದು ಒಂದು ಲಾಭದಾಯಕ ವ್ಯಾಪಾರವಾಗಿರುವ ಇಂದಿನ ದಿನಗಳಲ್ಲಿ ಓಂ ಶಾಂತಿಧಾಮ ಗುರುಕುಲವು ಮಕ್ಕಳಿಗೆ ಉಚಿತ ಹಾಗೂ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವುದು ಪ್ರಶಂಸನೀಯ. ಇಲ್ಲಿಂದ ಕಲಿತು ಹೋದ ಅನೇಕ ಮಕ್ಕಳು ದೇಶವಿದೇಶಗಳಲ್ಲಿ ನೆಲೆಸಿ ಯಶಸ್ವಿಗಳಾಗಿದ್ದಾರೆ.
ಮಹಿಳಾ ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ ಇತ್ತದ್ದು ಮಹತ್ವದ ಅಂಶ. ಅಧ್ಯಾತ್ಮ ಸಾಧನೆಗೆ ಹೆಣ್ಣು ಬಾಧಕ ಎನ್ನುವ ಸಂಸ್ಕೃತಿಯಲ್ಲೇ ಹೆಣ್ಣಿನ ಅಧ್ಯಾತ್ಮ ವಿಕಾಸಕ್ಕೆ ಪುಷ್ಠಿ ಕೊಟ್ಟದ್ದು ಈ ಗುರುಕುಲದ ವೈಶಿಷ್ಟ್ಯ.
"ಸಂಸ್ಕೃತ ಪಂಡಿತರು ತಮ್ಮ ಅತೀವ ಮಡಿವಂತಿಕೆಯಿಂದ ಆ ಭಾಷೆ ನಶಿಸುವಂತೆ ಮಾಡಿದರು" ಎಂದು ಸಂಸ್ಕೃತ ವಿದ್ವಾಂಸರಾದ ಮೈಸೂರಿನ ಲೀಲಾ ಪ್ರಕಾಶ್ ಅವರು ಅಭಿಪ್ರಾಯ ಪಡುತ್ತಾರೆ. ಎಲ್ಲಾ ರೀತಿಯ ಮಡಿವಂತಿಕೆಯನ್ನು ಮೀರುವುದರ ಪ್ರತೀಕವಾಗಿ ನಿಂತಿದೆ ಈ ಗುರುಕುಲ.
ವೇದಾಧ್ಯಯನ ಕೇವಲ ಕೆಲವು ಜಾತಿಗಳಿಗೆ ಮಾತ್ರ ಮೀಸಲಿಟ್ಟಿದ್ದರಿಂದ ಅದು ಸಾಮಾಜಿಕ ಅಸಮತೋಲಕ್ಕೆ ಕಾರಣವಾದುದು ಇತಿಹಾಸ. ಅದಕ್ಕೆ ಪರ್ಯಾಯವನ್ನು ಕಂಡುಕೊಳ್ಳುವುದರಲ್ಲಿ ದಯಾನಂದ ಸರಸ್ವತಿಯವರಿಗೆ ದೊರೆತದ್ದೇ ಆರ್ಯಸಮಾಜದ ಕಲ್ಪನೆ. ಅದರ ಆಧಾರದ ಮೇಲೆಯೇ ಹುಟ್ಟಿಕೊಂಡಿರುವ ಈ ಗುರುಕುಲದಲ್ಲೂ ಯಾವುದೇ ಜಾತಿಯವರಾದರೂ ವೇದ ಕಲಿಯಬಹುದಾಗಿದೆ. ಇಲ್ಲಿನ ಅರ್ಜಿಯಲ್ಲಿ ಜಾತಿಯ ಕಾಲಮ್ ಇಲ್ಲ. ಅಲ್ಲಿಗೆ ಬರುವ ಅತಿಥಿಗಳಿಗೂ "ನೀವು ಯಾವ ಜಾತಿಯವರೆಂದು" ಕೇಳುವುದಿಲ್ಲ.
ಅನ್ಯಧರ್ಮೀಯರಿಗೂ ಸ್ವಾಗತವಿದೆ- ಅವರು ಆರ್ಯಸಮಾಜದ ನಿಯಮಗಳಿಗನುಗುಣವಾಗಿ ಕೆಲವು ಸರಳ ಸಂಸ್ಕಾರಕ್ಕೆ ಒಳಗಾಗುವುದಾದರೆ ಮಾತ್ರ.
ಇಲ್ಲಿ ಯಾವ ದೇವರ ಮೂರ್ತಿಗಳೂ ಇಲ್ಲ.ಗುಡಿ ಗುಂಡಾರಗಳಿಲ್ಲ. ಗಂಟೆಗಳ ದನಿಯಿಲ್ಲ. ಹೀಗಾಗಿ ಭೇದವಾದ ಸುಳಿಯುವ ಸಾಧ್ಯತೆಗಳೇ ಇಲ್ಲ.
ಮಕ್ಕಳು ಮೊಬೈಲ್ ಬಳಸುವ ಹಾಗಿಲ್ಲ. ದೂರದರ್ಶನದಿಂದ ಈ ಮಕ್ಕಳು ದೂರ. ಆಗಾಗ ಕೆಲವು ಆದರ್ಶ ಪುರುಷರ ಚಲನಚಿತ್ರಗಳನ್ನು ತೋರಿಸಲಾಗುತ್ತದೆ.
ಆಟೋಟಗಳಿಗೆಂದೇ ಅಧ್ಯಯನಕ್ಕೆ ಅಭ್ಯಾಸಕ್ಕೆ ನಿಗದಿತ ಸಮಯವಿದೆ. ಹಲವಾರು ಪರಿಣಿತ ಆಚಾರ್ಯರು ಇಲ್ಲಿ ಶಿಕ್ಷಕರಾಗಿದ್ದಾರೆ.
ಇಲ್ಲಿನ ಮಕ್ಕಳ ಶಿಸ್ತು, ನಿಯಮ ಪಾಲನೆ ಬೆರಗುಗೊಳಿಸುವಂತಹದು.
ಮಕ್ಕಳು ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳಬೇಕು.
ಬೆಳಗ್ಗೆ ನಾಲ್ಕಕ್ಕೇ ಏಳಬೇಕು. ತಣ್ಣಿರಿನ ಸ್ನಾನಮಾಡಬೇಕು. ಆನಂತರ ಸಂಧ್ಯಾವಂದನೆ, ದೈವಯಜ್ಞ ಆನಂತರ ಉಪಹಾರ. ತದನಂತರ ತರಗತಿಗಳು ಪ್ರಾರಂಭವಾಗುತ್ತವೆ. ಸಂಜೆ ಮತ್ತೆ ಸಂಧ್ಯಾ ವಂದನೆ, ರಾತ್ರಿ ಊಟ ಆನಂತರ ಭ್ರಮಣ, ಮತ್ತೆ ಅಭ್ಯಾಸ ಮತ್ತು ಬೇಗ ಮಲಗುವುದು.
ಇಲ್ಲಿ ಪ್ಲಾಸ್ಟಿಕ್ ನಿಷೇಧ. ಪ್ಲ್ಯಾಸ್ಟಿಕ್ ಬಾಟಲ್ ಗಳಲ್ಲಿ ನೀರು ತುಂಬಿ ಒಯ್ಯುವ ಹಾಗಿಲ್ಲ.
ಇಲ್ಲಿನ ಸ್ವಚ್ಛತೆ ಪ್ರಮುಖ ಆಕರ್ಷಣೆ. ಯಾಕೆಂದರೆ ಗುಡಿಸುವುದನ್ನೇ ಕಾಯಕಮಾಡಿಕೊಂಡಿರುವಂತಹ, ಸೇವೆಯೇ ಪ್ರಥಮ ಆದ್ಯತೆಯಾಗಿರುವ ಕುಲಕರ್ಣಿ ತಾತನಂತಹವರು ಇದ್ದಾರೆ.
ಇಲ್ಲಿ ಅಸ್ಪೃಶ್ಯತೆಯ ವಾಸನೆಯಿಲ್ಲ.
ಎಲ್ಲ ಜಾತಿಯ ಸಿಬ್ಬಂದಿ ವರ್ಗದವರಿಗೂ ಅಡುಗೆ ಕೋಣೆಗೆ ಪ್ರವೇಶವಿದೆ. ಎಲ್ಲರಿಗೂ ಸಹ ಪಂಕ್ತಿ ಭೋಜನ ಸಾಧ್ಯವಿದೆ
ಬಚ್ಚಲು ತೊಳೆಯುವುದರಿಂದ, ಕಸಗುಡಿಸುವುದರಿಂದ ಹಿಡಿದು ಅಡುಗೆ ಮಾಡುವವರೆಗೆ ಎಲ್ಲರೂ ಎಲ್ಲ ಕೆಲಸವನ್ನೂ ಮಾಡುತ್ತಾರೆ . ಮಾಡುವ ಶ್ರಮಕ್ಕೆ ಘನತೆ ಇದೆ. (Dignity of labour). ಎಲ್ಲವೂ ಇಲ್ಲಿ ಸೇವೆಯೇ!
ವಸುಧೈವಕುಟುಂಬಕಂ ಎಂಬುದು ಪ್ರಾಚೀನ ಮಾತು. ಇಡೀ ವಸುಧೆಯೇ ಒಂದು ಕುಟುಂಬ ಎಂಬ ನಂಬಿಕೆಯಲ್ಲಿ ಲೋಕವನ್ನು ಗ್ರಹಿಸಲಾಗುತ್ತಿತ್ತು. ಈ ಮಾತಿಗೆ ಇಂದು ವಿಸ್ಮೃತಿ ಒದಗಿಬಿಟ್ಟಿದೆ. ಸನಾತನ ಎಂಬುದನ್ನು ನಮಗಿಷ್ಟಬಂದಂತೆ ತಿರುಚಿ ವ್ಯಾಖ್ಯಾನಿಸಲಾಗುತ್ತಿದ್ದೇವೆ. ಇಂತಹ ಸಾಮಾಜಿಕ ಅನಿಷ್ಟಗಳಿಗೆ ಉತ್ತರವೆಂಬಂತೆ ಈ ಗುರುಕುಲದೊಳಗಿನ ಚಟುವಟಿಕೆಗಳು ಕಂಗೊಳಿಸುತ್ತಿವೆ. ಸತ್ಯವ್ರತ ಅವರು ಕಾರ್ಯದರ್ಶಿಗಳಾಗಿ ಗುರುಕುಲವನ್ನು ಸಮರ್ಥವಾಗಿ ನಡೆಸುತ್ತಿದ್ದಾರೆ. ಆರ್ಯಾಜಿಯವರು ಅಧ್ಯಕ್ಷರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ವಿಜ್ಞಾನದ ಪ್ರಾಧ್ಯಾಪಕರಾಗಿದ್ದ ಬಸವರಾಜು ಅವರು ಗೋಶಾಲೆ ನೋಡಿಕೊಳ್ಳುತ್ತಿದ್ದಾರೆ.
ಗುರುಕುಲ ಇಂದು ರಾಷ್ಟ್ರೀಯ ಐಕ್ಯತೆ, ಅಂತಾರಾಷ್ಟ್ರೀಯ ಸೌಹಾರ್ದ, ಹಾಗೂ ಜಾಗತಿಕ ಭಾತೃಪ್ರೇಮದ ಪ್ರತೀಕವಾಗಿ ತಲೆಯೆತ್ತಿ ನಿಂತಿದೆ ಅನೇಕ ಕೊಡುಗೈ ದಾನಿಗಳು ಈ ಗುರುಕುಲಕ್ಕೆ ಉದಾರವಾಗಿ ಸಹಾಯಮಾಡುತ್ತಿದ್ದಾರೆ. ಪ್ರಶಾಂತವಾತಾವರಣದಲ್ಲಿರುವ ಈ ಗುರುಕುಲ ಎಲ್ಲ ರೀತಿಯ ಮಾಲಿನ್ಯದಿಂದ ಹೊರತಾಗಿದೆ. ಮೂರು ಕಾಲಗಳಲ್ಲಿಯೂ ಊಟದ ಸಮಯದಲ್ಲಿಯೂ ಜಾತಿ ವಿಜಾತಿಯನ್ನದೇ ಮಕ್ಕಳು ವೇದ ಘೋಷಮಾಡುವುದನ್ನು ಕೇಳುವುದೇ ಒಂದು ಆನಂದ.
ಕೇವಲ 9 ನೇತರಗತಿಯವರೆಗೆ ಓದಿದ ರಾಜತ್ತಿ ಸಲ್ಮಾ ಏರಿದ ಎತ್ತರ ಯಾರಿಗಾದರೂ ಬೆರಗು ಗೊಳಿಸುವಂತಹದು. ತಮಿಳಿನ ಮೊತ್ತಮೊದಲ ಮುಸ್ಲಿಮ್ ಕವಿಯಾಗಿ ಕಾದಂಬರಿಕಾರ್ತಿ, ಅಂಕಣಕಾರ್ತಿ, ಡಿ.ಎಂ.ಕೆ ಕಾರ್ಯ ಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಸಲ್ಮಾ ತಮ್ಮನ್ನು ತಾವು ಅಭಿವ್ಯಕ್ತಿಸಿಕೊಳ್ಳಲು ಪಟ್ಟ ಪಾಡುಗಳು ನುಂಗಿದ ನೋವುಗಳು ಅನೇಕ. ಅವರೊಡನೆ ಸಂವಾದ ನಡೆಸಿದ ‘ಸೃಜನಾ’ ಸದಸ್ಯೆಯರಿಗೆ ಒಂದು ಮರೆಯಲಾರದ ಸಂಜೆ.. ಅವರ ಒಂದು ಕವಿತೆಯ ನನ್ನ ಕನ್ನಡ ಅನುವಾದ ಇಲ್ಲಿದೆ.
ಒಪ್ಪಂದ
ಒಂದೊಂದು ಬಾರಿಯೂ
ಅಮ್ಮಾ ನಾಜೂಕಾಗಿ ಹೇಳುವುದನ್ನು
ಅಕ್ಕ ಕೋಪದಲ್ಲಿ ಹೇಳುತ್ತಾಳೆ
ಮಲಗುವ ಕೋಣೆಯಲ್ಲಿನ
ತಪ್ಪುಗಳೆಲ್ಲಾ
ನನ್ನದೇ ಎಂದು
ದಿನವೂ ಮಲಗುವ ಕೋಣೆಯಲ್ಲಿ
ಎದುರುಗೊಳ್ಳುವ ಮೊದಲ ಮಾತು
`ಇವತ್ತಿಗೆ ಏನು’?
ಹಲವು ಬಾರಿ
ಕೊನೆಯ ಮಾತೂ
ಇದುವೇ ಆಗಿರುತ್ತದೆ.
ಸೂಳೆಗಾರಿಕೆಯಮೇಲೆ
ಹೊಳೆಯುವ ಕೋಟಿ ನಕ್ಷತ್ರಗಳ
ತೋರುಬೆರಳುಗಳು
ನಡುಗುವ ರಾತ್ರಿಗಳಲ್ಲಿ ಮತ್ತೊಮ್ಮೆ
ತೇಲುವ ಬುದ್ದಿಮಾತುಗಳು
ಮರಿಗಳಿಗೆ ಉಣಿಸಲು
ಕೈಲಾಗದ ಬೆಕ್ಕಿನ
ಬಿಕ್ಕಳಿಸಿ ಅಳುವ ಕೂಗು
ಹಿಂಡುವುದು ಕರುಳು
ನಿನಗೂ ಕೂಡ
ದೂರುಗಳೂ ಇರಬಹುದು
ನನ್ನ ನಿಲುವು
ಕಾಲದಿಂದಲೂ
ಚರಿತ್ರೆಯಿಂದಲೂ
ತಿಳಿಯಲ್ಪಟ್ಟಿದೆ
ನಿನ್ನಿಂದಲೂ
ತಿಳಿಯಲಾಗದಿದ್ದರೂ
ತುಸು ಪ್ರೀತಿ ಪಡೆಯಲು
ನಿನ್ನ ಮಗುವಿನ
ತಾಯಿ ಎಂಬ ಜವಾಬ್ದಾರಿಯನ್ನು
ನೆರವೇರಿಸಲು
ಹೊರಗಿನಿಂದ
ಸ್ಯಾನಿಟರಿ ನ್ಯಾಪ್ಕಿನ್ಗಳನ್ನೂ
ಗರ್ಭನಿರೋಧಕಗಳನ್ನು ಪಡೆಯಲು
ಇನ್ನೂ ಸಣ್ಣ ಸಣ್ಣ ಸಹಾಯವನ್ನು ಬೇಡಿ
ಸಾಧ್ಯವಾಗುವುದಾದರೆ
ನಿನ್ನ ಮೇಲೆ ಸ್ವಲ್ಪ ಅಧಿಕಾರವನ್ನು ಚಲಾಯಿಸಲು
ನಾನು ಸ್ವಲ್ಪ ಅಧಿಕಾರವನ್ನು
ಸ್ಥಿರಪಡಿಸಿಕೊಳ್ಳಲು
ಎಲ್ಲಾ ತಿಳಿವಳಿಕೆಯೊಡನೆ
ತೆರೆದೆಕೊಳ್ಳುವುದು ನನ್ನ ಯೋನಿ
(ತೆಂಕಣ ನುಡಿಗಳಲ್ಲಿ ಸ್ತ್ರೀವಾದಿ ಸಂಕಥನ : ಪು 254: ಕುವೆಂಪು ಭಾಷಾಭಾರತಿ : ಸಂ: ವಿನಯ ವಕ್ಕುಂದ)
ಯಮನ್ ಶರಧಿಯ ಮೇಲೆ ಕಾಪಿಯ ಲೀಲೆ....
ಏಳೆಂಟು ವರುಷಗಳ ಹಿಂದೆ, ಮಳೆಗಾಲದೊಂದು ಮುಂಜಾವು. ಕಲ್ಯಾಣದ ಗಾಯನ ಸಭಾದಲ್ಲಿ ಮೇಘಮಲ್ಹಾರ್ ಮಹೋತ್ಸವ!
ಆಘ್ರಾಘರಾಣೆಯ ಪಂಡಿತರಾದ ಅರುಣ್ ಕಶಾಲ್ಕರ್ ಅವರ ಕಚೇರಿ ಮುಗಿಯಿತು. ಅವರನ್ನು ರಸಿಕರು ಮುತ್ತಿಕೊಂಡರು. ಅವರ ಶಿಷ್ಯೆಯೇ ಆದ ಸಂಜನಾ ಕೌಶಿಕ್ ಳ ಆಹ್ವಾನದ ಮೇರೆಗೆ ನಾನೂ ಆ ಕಚೇರಿಗೆ ಹೋಗಿದ್ದೆ. ಸಂಜನಾ ಅವರ ಗುರುಗಳಿಗೆ ನನ್ನನ್ನು ಪರಿಚಯಿಸಿದಳು. "ನನಗೆ ಸಂಗೀತ ಶಾಸ್ತ್ರ ಗೊತ್ತಿಲ್ಲ. ತಾಳ, ಲಯ, ಸ್ವರಗಳನ್ನು ನಾನರಿಯೆ. ಆದರೆ ಸುಶ್ರಾವ್ಯ ಸಂಗೀತ ನನ್ನನ್ನು ಬಹಳ ಆರ್ದ್ರವನ್ನಾಗಿ ಮಾಡಿಬಿಡುತ್ತದೆ. ನಾನು ರಸಿಕಳು ಮಾತ್ರ" ಎಂದೆ. ಕಶಾಲ್ಕರ್ ಥಾಣೆಯ ಪರಿಸರದಲ್ಲಿ ಬಹಳ ದೊಡ್ಡ ಹೆಸರು. " ಬಹುತ್ ಖೂಪ್ ....ವಹೀ ತೋ ಚಾಹಿಯೇನಾ" ಎಂದರು.
ಆನಂತರ ನಮ್ಮಮನೆಗೆ ಬಂದ ಸಂಜನಾ ಬಸವಣ್ಣನ ವಚನವನ್ನು ಹಾಡಿದ್ದಳು. ನಾನು ಕರಗಿ ಹೋಗಿದ್ದೆ. ಮೈಸೂರು ಅಸೋಸಿಯೇಷನ್ ನಲ್ಲಿ ಕೂಡ ಅವಳ ಕಾರ್ಯಕ್ರಮ ಏರ್ಪಾಡಾಗಿತ್ತು. ಜನ ಬಹಳ ಮೆಚ್ಚಿಕೊಂಡರು.
ಬಹಳ ವರ್ಷಗಳ ಆನಂತರ ಸಂಜನಾ ಕೌಶಿಕ್ ಳನ್ನು ನೋಡಿದ್ದು ಇಂದು ಸಂಜೆ ಮೈಸೂರಿನ ಆಳ್ವಾರ್ ಸಭಾಂಗಣದಲ್ಲಿ. ಬಹಳ ಉತ್ಕಟವಾಗಿ, ತನ್ಮಯಳಾಗಿ ಹಾಡಿದಳು. ರುದ್ರಪಟ್ಟಣ ಮೂಲದ ಈ ಬಾಲೆ ಇಂದು ಹಿಂದೂಸ್ತಾನಿ ಆಗ್ರಾಘರಾಣೆಯ ವಿದುಷಿಯಾಗಿ ಬೆಳೆದಿದ್ದಾಳೆ.
ಬಾಲ್ಯದಲ್ಲಿಯೇ ಅನೇಕ ಸ್ಥಳೀಯ ಗುರುಗಳ ಮಾರ್ಗದರ್ಶನದಲ್ಲಿ ಹಿಂದೂಸ್ತಾನೀ ಸಂಗೀತ ಅಭ್ಯಾಸ ಪ್ರಾರಂಭಿಸಿದ ಸಂಜನಾಳ ಸಂಗೀತ ಪ್ರೇಮ ಎಷ್ಟು ಗಾಢವಾದುದೆಂದರೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿಯುವುದಕ್ಕೆಂದೇ ಮುಂಬಯಿಗೆ ಬಂದಳು. ಅಲ್ಲಿ ಗುರುಕುಲ ಪದ್ಧತಿಯಲ್ಲಿ ಆಗ್ರಾ ಘರಾಣೆಯ ಗುರು ಕಶಾಲ್ಕರ್ ಅವರ ಶಿಷ್ಯತ್ವ ಸ್ವೀಕರಿಸಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದಳು.
ಪುಣೆಯ ಎಸ್.ಎನ್.ಡಿ.ಟಿ. ಮಹಿಳಾ ವಿಶ್ವ ವಿದ್ಯಾಲಯದಲ್ಲಿ ಡಾ. ಪೂರ್ಣಿಮಾ ಧುಮಾಲೆಯವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಅಧ್ಯಯನ ಮುಗಿಸಿರುವ ಸಂಜನಾ ಅವರಿಗೆ ಸಧ್ಯದಲ್ಲಿಯೇ ಡಾಕ್ಟರೇಟ್ ಪದವಿ ದೊರೆಯಲಿದೆ. ಖಯಾಲ್ ಗಾಯನ ಅವರ ವೈಶಿಷ್ಟ್ಯ.
ಇಂದು ಸಂಜನಾ ಭಾರತಾದ್ಯಂತವೇ ಅಲ್ಲದೇ ನೆದರ್ಲೆಂಡ್ಸ್ ನಲ್ಲಿಯೂ ಕಚೇರಿಗಳನ್ನು ನೀಡಿದ್ದಾರೆ.
ಶ್ರೀಕೃಷ್ಣ ಗಾನ ಸಭಾ ಮೈಸೂರು. ಇವರು
ಪಂಡಿತ್ ಭೀಮಸೇನ್ ಜೋಷಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ ಸಂಜನಾ ಅವರ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸಂಜನಾ ಅವರು ಕಚೇರಿಯನ್ನು ಪ್ರಾರಂಭಿಸಿದ್ದು ಯಮನ್ ರಾಗದಲ್ಲಿ. ಕಾರಣ ಕೆಲವೇ ಸಿದ್ಧರಾಗಗಳಲ್ಲಿ ಯಮನ್ ರಾಗವೂ ಒಂದು ಎಂದು ಭೀಮಸೇನಜೋಷಿಯವರು ಹೇಳುತ್ತಿದ್ದರಂತೆ. ಆ ರಾಗವನ್ನು ಆತ್ಮಸಾತ್ ಮಾಡಿಕೊಳ್ಳುವುದು ಕಷ್ಟ ಸಾಧ್ಯ. ಬಹಳ ಸಾಧನೆ ಮಾಡದೇ ಅದು ದಕ್ಕದು ಎಂಬುದು ಅವರ ಅಭಿಪ್ರಾಯವಾಗಿದ್ದಿತ್ತಂತೆ. ಯಮನ್ ಸಂಗೀತದ ಅತ್ಯಂತ ಶ್ರೀಮಂತವಾದ ಮೂಲಭೂತ ರಾಗ. ವಿದ್ಯಾರ್ಥಿಗಳಿಗೆ ಮೊದಲ ಪಾಠ ಪ್ರಾರಂಭವಾಗುವುದು ಇಲ್ಲಿಂದಲೇ. ನಮ್ಮ 'ಕಲ್ಯಾಣಿ'ಯಲ್ಲಿ ದೇವರುಗಳು ಉತ್ತುಂಗದಲ್ಲಿ ನಲಿಯುವಹಾಗೆ ( ಗಾಯತ್ರಿ ರಂಜನಿಯವರ 'ಕೃಷ್ಣಾ ನೀ ಬೇಗನೆ ಬಾರೋ' full version ನೆನಪಿಸಿಕೊಳ್ಳಿ) ಇಲ್ಲಿಯ ಖಯ್ಯಾಲ್ ನಲ್ಲಿಯೂ ವಿಜೃಂಭಿಸುತ್ತಾರೆ.
ಸಂಜನಾ ಮೊದಲಿಗೆ ಯಮನ್ ನ ಮೂರು ಪ್ರಸ್ತುತಿಯನ್ನು ನೀಡಿದರು. ಮೊದಲನೆಯದು ನೋಮ್ ತೋಮ್ ಆಲಾಪವಾದರೆ ಎರಡನೆಯದು "ನಾದ ಬೋಧಜ್ಯೋತಿ ಜಗಾದೇ...ಸಿಯಾನಾಥ್ ಕೋ ಪ್ರಣಾಮ್ " ಎನ್ನುವ ತಮ್ಮದೇ ರಚನೆಯ ಪ್ರಸ್ತುತಿ, ಮತ್ತೊಂದು ಅವರ ಗುರುಗಳ "ಪ್ರಭು ರಾಮಚರಣ ನಿತ ಧ್ಯಾವೋ" ಎನ್ನುವ ಬಂಧಿಶ್.
ಭೀಮ್ ಸೇನ್ ಜೋಶಿಯವರ ಪ್ರಸಿದ್ಧವಾದ 'ಭಾಗ್ಯದಾ ಲಕ್ಷ್ಮೀ ಬಾರಮ್ಮಾ' ಹಾಡನ್ನು ಹಾಡಿ ಅವರ ಜನ್ಮ ಶತಾಬ್ದಿ ಆಚರಣೆಗೆ ಸಾರ್ಥಕ ಕೊಡುಗೆಯನ್ನು ನೀಡಿದರು.
'ಯಮನ್' ನ ವಿಶಾಲ ಶರಧಿಯ ಮೇಲೆ 'ಕಾಪಿ'ಯ ( ಆಜ್ ಖೇಲೆ ಶ್ಯಾಮ ಸಂಗ್ ಹೋಲಿ) ನಾವೆಯೊಳಗೆ ಏರುತ್ತಾ ಆಳಕ್ಕೆ ಇಳಿಯುತ್ತಾ, ತೂಗುತ್ತಾ, ತೊನೆಯುತ್ತಾ ಭೈರವಿಯ ದಡವನ್ನು ಸಂಜನಾ ಮುಟ್ಟಿಸಿದ ಪರಿ ಅನನ್ಯವಾದುದು. ಕರ್ನಾಟಕ ಸಂಗೀತದಲ್ಲಿ ಇದು ಸಿಂಧು ಭೈರವಿ. ಅಪರಂಪಾರ ಸಿಂಧುವನ್ನು ಪಾರುಗಾಣಿಸುವ ಶಕ್ತಿ ಸಂಗೀತಕ್ಕಲ್ಲದೇ ಬೇರೆ ಇನ್ನಾವ ಮಾಧ್ಯಮಕ್ಕಿದೆ? ಇಂದು ಸಂಜನಾ ಕೌಶಿಕ್ ಬಹಳ ಭರವಸೆಯ ಗಾಯಕಿಯಾಗಿದ್ದಾರೆ.
ಅವರಿಗೆ ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯೂ ಸೇರಿ 'ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ', ಬೆಂಗಳೂರಿನ 'ಸುರ್ ಸಾಗರ್'' ಮುಂತಾದ ಸಂಸ್ಥೆಗಳಿಂದ ಶಿಷ್ಯವೇತನಗಳು ದೊರೆತಿವೆ.
'ಕಲಾಕಾರ್ 'ಮತ್ತು 'ಬಾಲಪ್ರತಿಭಾ ರತ್ನ' ಮುಂತಾದ ಪ್ರಶಸ್ತಿ ಪುರಸ್ಕಾರಗಳು ದೊರೆತಿವೆ.
ಅವರ ಬಗ್ಗೆ ಪಂ. ರಾಜೀವ್ ತಾರಾನಾಥರು ಹೀಗೆ ಹೇಳುತ್ತಾರೆ
Sanjana's handling of raga shows a mature excellence, which would do credit to an older musician. In short, she is she is already a musician who demand s keen attention and respect"
"Representing highly acclaimed musical tradition, Sanjana indulges in hard work with utmost dedication aiming at the perfection with a rare insight of Melody and Laya" - ಎಂದು ಪ್ರಸಿದ್ಧ ಪಿಟೀಲು ವಾದಕರಾದ ವಿದ್ವಾನ್ ಎಂ. ಮಂಜುನಾಥ್ ಅವರು ಅಭಿಪ್ರಾಯ ಪಟ್ಟಿರುವುದು ಸಂಜನಾ ಅವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ಕನ್ನಡದ 'ಕೌಶಿಕಿ'ಯೊಬ್ಬರು ಇಲ್ಲಿ ಅರಳುತ್ತಿರುವ ಸೂಚನೆಗಳು ಕಾಣುತ್ತಿವೆ.
ಸಂಜನಾಗೆ ಅಭಿನಂದನೆಗಳು, ಶುಭಾಶಯಗಳು.
ಗಾಂಧಿಯ ನೆರಳು.....
ಶಾಂತಿಧಾಮಕ್ಕೆ ಕಾಲಿಟ್ಟಕೂಡಲೇ ಬಡಕಲು ದೇಹದ ವಯೋವೃದ್ಧರೊಬ್ಬರು ಕಣ್ಣಿಗೆ ಬಿದ್ದರು. ಅವರಿಗೆ ಎಪ್ಪತ್ತೊಂಬತ್ತು ವರುಷಗಳಂತೆ. ಒಂದು ಸವೆದು ಹೋದ ಮೋಟು ಪೊರಕೆಯಿಂದ ಅಗತ್ಯಕ್ಕಿಂತ ಹೆಚ್ಚಾಗಿ ಬಾಗಿ ಗುಡಿಸುತ್ತಿದ್ದರು. ಅಲ್ಲೇ ಕಲ್ಲ ಬೆಂಚಿನ ಮೇಲೆ ಕುಳಿತೆ.
'ಆ ಕಡೆ ಸರಿ' ಎನ್ನುವಂತೆ ಕೈ ಮಾಡಿದರು.
"ಯಾಕೆ ?" ಎಂದೆ.
"ಧೂಳು ಏಳ್ತದ್ರೀ"
ಇಷ್ಟು ವಯಸ್ಸಾದವರನ್ನು ಈ ಕೆಲಸಕ್ಕೆ ನೇಮಿಸಿದ್ದಾರಲ್ಲ? ನನಗೆ ಅಸಮಾಧಾನ.
ಆಮೇಲೆ ಗೊತ್ತಾಯಿತು. ಅದು ಅವರೇ ಆರಿಸಿಕೊಂಡ ಕೆಲಸ ಎಂದು.
" ಯಜಮಾನರೇ, ಇಷ್ಟು ಸಣ್ಣ ಪೊರಕೆಯಿಂದ ಗುಡಿಸುತ್ತಿದ್ದೀರಲ್ಲ? ಸ್ವಲ್ಪ ದೊಡ್ಡ ಪೊರಕೆಯಾದರೆ ಅನುಕೂಲವಲ್ಲವೇ?" ಕೇಳಿದೆ
ತುಂಡು ಪೊರಕೆ ಕೂಡ ಅವರ ಆಯ್ಕೆಯೇ ಆಗಿತ್ತೇನೋ. ಈ ತುಂಡು ಪೊರಕೆ ಬಾಗೋದನ್ನ ಕಲಿಸುತ್ತದೆ...ಬಾಗ ಬೇಕು..ಬಾಗಲಾರದೇ ಬಿಡುಗಡೆಯೇ ಇಲ್ಲ" ಎನ್ನುವಂತಿತ್ತು ಅವರ ಭಾವ.
ಅಂಗಳ,ಮಣ್ಣು ರಸ್ತೆ, ಗುರುಕುಲದ ಆಸುಪಾಸು ಎಲ್ಲಾ ಗಂಟೆಗಟ್ಟಲೆ ಗುಡಿಸುತ್ತಿದ್ದರು. ಅವರು ಅಷ್ಟು ಗುಡಿಸುವ ಅಗತ್ಯವಿರಲಿಲ್ಲ. ಧ್ಯಾನಸ್ಥರಾಗಿ ಉಡುಗುತ್ತಿದ್ದರು. ಅಕ್ಕಪಕ್ಕದ ಧ್ಯಾಸವೇ ಇರದ ಹಾಗೆ!
ನಾನು ಅಮೇರಿಕಾದ ನ್ಯಾಷನಲ್ ಪಾರ್ಕುಗಳಲ್ಲಿ ಕಂಡ ಸ್ವಚ್ಛತೆ ಅಲ್ಲಿತ್ತು....ಆದರೂ ಗುಡಿಸುತ್ತಿದ್ದರು. ಮೊದಲೇ ಬಾಗಿದ ಬೆನ್ನನ್ನು ಮತ್ತಷ್ಟು ಬಾಗಿಸಿ ಗುಡಿಸುತ್ತಿದ್ದರು.
ಮಾರನೆಯ ದಿನ ಬೆಳಗಿನ ಉಪಾಹಾರಕ್ಕೆಂದು ಬಂದಾಗ "ಬರ್ರಿ ಬರ್ರೀ" ಎಂದು ಗುಡಿಸುತ್ತಲೇ ನಮ್ಮನ್ನು ಸ್ವಾಗತಿಸಿದರು. ಅವರ ಹೆಸರು ಕುಲಕರ್ಣಿ. ಗುರುಕುಲದವರಿಗೆಲ್ಲಾ ಅವರು ಪ್ರೀತಿಯ 'ತಾತ'. ಎಲ್ಲರೂ ಹಾಗೆಂದೇ ಕರೆಯುತ್ತಾರೆ. ಇಲ್ಲಿ ಅವರ ಪೂರ್ಣ ಹೆಸರು ಬರೆಯಲಾರೆ. ಅವರೊಂದು ಕಾಡಮಲ್ಲಿಗೆ! ನಾಡಿನ ಮಾರುಕಟ್ಟೆಯಲ್ಲಿ ಪರಿಮಳಬೀರುವುದು ಅವರಿಗೆ ಸಲ್ಲ. ಸದ್ಯ ಫೇಸ್ ಬುಕ್ ನೋಡಲಾರರು. ನಾನು ಅವರ ಬಗ್ಗೆ ಬರೆಯುತ್ತಿರುವುದನ್ನು ಓದಿದ್ದರೆ ನೊಂದುಕೊಳ್ಳುತ್ತಿದ್ದರೇನೋ. ಕೋಪಗೊಳ್ಳುತ್ತಿದ್ದರೇನೋ!
ಏನು ಮಾಡಲಿ? ಕಾಡ ಹೂವನ್ನು ನಾಡ ಬೀದಿ ಬೀದಿಗಳಲ್ಲಿ 'ಮಲ್ಲಿಗೆ ಹೂವಾ...'ಎಂದು ದನಿಯೆತ್ತಿ ಪರಿಚಯಿಸುವ ಹುಚ್ಚು ನನಗಿದೆ. ಹೀಗಾಗಿ ನಾನೊಬ್ಬ 'ಹೂವಾಡಗಿತ್ತಿ' ಯಾಗುವುದು ಅನಿವಾರ್ಯ ಕರ್ಮವಾಗಿದೆ!- ಮಲ್ಲಿಗೆ ಬಳ್ಳಿ ನೆಡುವ ಅದಕ್ಕೆ ನೀರೆರೆಯುವ ಶಕ್ತಿ ಇಲ್ಲವಾದರೂ.
"ನಿಮ್ಮ ಕಾಯಕ ಸುರು ಮಾಡಿದ್ರೀ?" ಎಂದ ತಕ್ಷಣ, ಗುಡಿಸುವುದನ್ನು ನಿಲ್ಲಿಸಿ ನನ್ನನ್ನು ಅವಾಕ್ಕಾಗಿ ನೋಡಿದರು. ನಾನು ವೀಡಿಯೋ ತೆಗೆದುಕೊಳ್ಳಲು ಪ್ರಯತ್ನಿಸುವುದು ಗೊತ್ತಾದಕೂಡಲೇ ಮುಖದ ಮೇಲೆ ಕೈ ಅಡ್ಡ ಹಿಡಿದು "ಬ್ಯಾಡ್ರೀ ಬ್ಯಾಡ್ರೀ" ಎಂದರು ಖಡಕ್ಕಾಗಿ. ನಾನು ಅರ್ಧದಲ್ಲಿಯೇ ನನ್ನ ಅಹಂಕಾರದ ಕಿಟಕಿಯನ್ನು ಮುಚ್ಚಿಬಿಟ್ಟೆ. ಗುಡಿಸುವಾಗ ಮಾತ್ರ ಅವರು ಹೊರಗೆ ಕಾಣಿಸಿಕೊಳ್ಳುತ್ತಿದ್ದರು. ಉಳಿದಂತೆ ತಮ್ಮ ಕುಟೀರ ಸೇರಿಬಿಡುತ್ತಿದ್ದರು.
ಅವರು ಆರೋಗ್ಯ ಇಲಾಖೆಯಲ್ಲಿ ಬಹಳ ದೊಡ್ಡ ಹುದ್ದೆಯಿಂದ ನಿವೃತ್ತರಾದವರು. ಬಾಗಲಕೋಟೆ ಅವರ ಮೂಲಸ್ಥಳವಂತೆ. ಅವರಿಗೆ ಬರುವ ದೊಡ್ಡ ಮೊತ್ತದ ಪಿಂಚಣಿಯನ್ನೆಲ್ಲಾ ಗುರುಕುಲಕ್ಕೇ ಅರ್ಪಿಸುತ್ತಾರೆ.
ಗುರುಕುಲದ ವಿದ್ಯಾರ್ಥಿಗಳು ದಯಾನಂದ ಸರಸ್ವತಿಯವರ ಇನ್ನೂರನೇ ಹುಟ್ಟುಹಬ್ಬ ಆಚರಿಸಿದರು. ಆಗ ಮಕ್ಕಳ ಜೊತೆ ಜಮಖಾನದಮೇಲೆ ಬಂದು ಕುಳಿತರು. ಮಂಡಿ ನೋವು, ಸೊಂಟ ನೋವು ನಮಗೆ! ಕುರ್ಚಿಯಮೇಲೆ ಕುಳಿತಿದ್ದೆವು.
"ಮೆಟಾಫಿಸಿಕಲ್ ಕವಿತೆಗಳಂದರ ನನಗ ಭಾಳ ಸೇರ್ತದ್ರೀ.... ಎಲ್ಲಿ ನಿಮ್ಮ ಕವಿತಾ.... ಹಂಗಾ ಸ್ವಲೂಪ ಅನ್ರೀ ನೋಡೋಣು...?.... 'ನೊಂದ ಕನಸು' ಅಂತ ಇಟ್ಟೀರಲ್ಲ ನಿಮ್ಮ ಕವಿತಾಗ ಹೆಸರು? ಅದು "ಬೆಂದ ಕನಸು"' ಅಂದರಾ ಛಲೋ ಆಗ್ತದಾ ಅಂತ ಅನಿಸ್ತದಾ. ವಿಚಾರಮಾಡ್ರೀ...ಬೆಂದರೇನೆ ಬೇಂದ್ರೆ ಅಲ್ಲೇನು" ಆಳ ಕಣ್ಣುಗಳು, ನಿಗೂಢ ಕೊಳದಂತೆ!
"ನೀವು ಒಬ್ಬ ಅವಧೂತರು..." ಎಂಬ ನನ್ನ ತಾರೀಫನ್ನು ಕೇಳಲು ಇಷ್ಟವಿಲ್ಲದವರ ಹಾಗೆ ನಡುವೆಯೇ ಕತ್ತರಿಸಿ "ಅದಲ್ಲಾ ಇರ್ಲೀ ನಿಮ್ಮ ಬಗ್ಗೆ ಹೇಳ್ರೀ" ಎಂದರು.
ನಾನು ಹೋಗಿದ್ದುದು ಅವರನ್ನು ಮಾತನಾಡಿಸಲು!
ಮುಂಜಾನೆ ಮತ್ತು ಸಂಜೆ ಗಡಿಯಾರದ ಮುಳ್ಳು ತಪ್ಪ ಬಹುದು ಆದರೆ ಅವರ ಗುಡಿಸುವ ಕಾಯಕ ತಪ್ಪುತ್ತಿರಲಿಲ್ಲ.
"ನೀವು ಕಾಯಕ ಅಂದ್ರಲ್ಲ ? ಅದು ಎಷ್ಟು ಚಲೋ ಶಬ್ದ ನೋಡ್ರಿ. ನಮ್ಮ ಶರಣರ ಶಬ್ದ. ಕಾಯಕ ಅಂದ್ರ ನಿಮಗೇನು ಅನಸ್ತದಾ ಹೇಳ್ರೀ?"
ನಾನೇನೋ ವ್ಯಾಖ್ಯಾನ ಕೊಟ್ಟೆ.
"ನನಗೇನೋ ಅದು ನಿಷ್ಕಾಮ ಕರ್ಮಾನೇ ಆಗ್ಯದಾ"
"ನೀವು ಒಂದು ಮಾಸ್ಕ್ ಆದ್ರೂ ಹಾಕೋಬಾರದಾ? ನಮಗೆ ಧೂಳಂತ .. ಸರೀರೀ ಅಂತ ಹೇಳತೀರಿ" ಕೇಳಿದೆ.
"ಮಾಸ್ಕಿನ ಕಾಲ ಹೋತಲ್ಲ" ಬೊಚ್ಚುಬಾಯಿಯಲ್ಲಿ ನಕ್ಕರು. ಅವರು ನಕ್ಕ ರೀತಿಗೆ ಸಾಕ್ಷಾತ್ ಗಾಂಧೀ ಎದುರಿಗೆ ಬಂದು ಬಿಟ್ಟರು.
ಅವರಿಗೆ ಅರಿವಾಗದ ಹಾಗೆ ದೂರದಿಂದ ಕೆಲವು ಫೋಟೋ ತೆಗೆದೆ. ನನ್ನ ಅಹಂಕಾರದ ಬಲೂನನ್ನು ಊದಿಕೊಳ್ಳಬೇಕಲ್ಲ?
"ಇಷ್ಟು ತಡಮಾಡಿ ಹೊಂಟ್ಯಲ್ಲೋ ಸಂಧ್ಯಾಕ್ಕ? ಗಂಟೀ ಹೊಡದು ಎಷ್ಟು ಹೊತ್ತಾತು! ...ನೋಡಿ ಇವನು ಮಾಸ್ತರ್ ಇದ್ದಾನಾ. ಇವನೇ ಹೀಂಗ ನಿಯಮ ಮುರದ್ರ..ಮಕ್ಕಳಿಗೆ ಏನು ಕಲಸ್ತಾನ?.." ಅಷ್ಟರಲ್ಲಿ ಇನ್ನೊಬ್ಬ ಪುಟ್ಟ ವಟು ಓಡೋಡಿ ಬಂದ.
"ಇವನೊಬ್ಬ ಅವನ ಶಿಷ್ಯ.. ನಡೀ ನಡೀ ಬೇಗ ಓಡ್" ಎಂದು ಗದರಿದರು. ಪೊರಕೆ ಅತ್ತಿಂದಿತ್ತ ಇತ್ತಿಂದತ್ತ ಶಿಸ್ತಿನ ಸಿಪಾಯಿಯಂತೆ ಎಡಬಿಡದೇ ಸರಿಯುತ್ತಿತ್ತು....ಗುರುಕುಲದ ತುಂಬೆಲ್ಲ ಹೂಗಳು ಅರಳಿ ಘಮ್ಮೆನ್ನುತ್ತಿದ್ದವು.
"ಮೇಲೊಂದು ಗರುಡ ಹಾರುತಿಹುದು
ಕೆಳಗದರ ನೆರಳು ಓಡುತಿಹುದು"
ವನವೆಲ್ಲ ನೀವೇ...
"Sometimes I get bored" ಸತ್ಯವ್ರತ ಅವರ ಪಕ್ಕದಲ್ಲಿ ಕುಳಿತ ಸುಖಾ ಹೇಳಿದಳು. ಗಾಡಿ ಬನಶಂಕರಿಯಿಂದ ಕನಕಪುರದ 'ಶಾಂತಿಧಾಮ ಗುರುಕುಲದೆಡೆಗೆ ಚಲಿಸುತ್ತಿತ್ತು.
"Is it known boredom or unknown boredom?if it is known boredom, its good. It is positive" ಸತ್ಯವ್ರತ ಅವರು ಹೇಳಿದರು.
"ಹಾಗಾದರೆ unknown boredom ಎನ್ನುವುದು ಋಣಾತ್ಮಕವೇ" ಅವರ ಇನ್ನೊಂದು ಬದಿಗೆ ಕುಳಿತ ನಾನು ಕೇಳಿದೆ.
"ಋಣಾತ್ಮಕ ಎಂತಲ್ಲ ಅದನ್ನು ನಿಮಗೆ ನೀವೇ ಎನ್ ಕೌಂಟರ್ ಮಾಡಬೇಕು"
ಬುದ್ದನಿಗೆ ಆದದ್ದು known boredom. ಅವನು ಕುಂತಲ್ಲಿ ನಿಂತಲ್ಲಿ , ಕೊನೆಗೆ ಕನಸಿನಲ್ಲಿಯೂ ಒಂದು ದನಿ ಬೆನ್ನು ಹತ್ತಿ ಕಾಡುತ್ತಿತ್ತು, ಪೀಡಿಸುತ್ತಿತ್ತು "ನಡೆ ಸಿದ್ಧಾರ್ಥ ಏಳು....ನಡೆ"
ಯಶೋಧರೆಗೆ ಅನ್ಯಾಯವಾಗಿದೆ. ನೂರಾರು ದೀಪಗಳು ಆರಿಹೋದವು. ನಿಜ. ಆದರೆ ಫೆಮಿನಿಸಂ ಮಾತನಾಡುವುದು ಈ ಬರಹದ ಉದ್ದೇಶವಲ್ಲ.
ಸುಖಾ ಕ್ಯಾಲಿಫೋರ್ನಿಯಾದಿಂದ ಬಂದ ಒಬ್ಬ ಬೌದ್ಧ ಭಿಕ್ಕುಣಿ. "ಎಲ್ಲರೂ ಅಮೇರಿಕಾದಲ್ಲಿಯೇ ಮೋಕ್ಷ ಎಂದು ಅಲ್ಲಿಗೆ ಎಡತಾಕುತ್ತಿದ್ದರೆ, ನೀನು ಅಲ್ಲಿಂದ ಇಲ್ಲಿಗೆ ಬಂದಿದ್ದೀಯಲ್ಲ, ಮಾರಾಯ್ತಿ!?"
"India is the best place for Sadhana" ಎಂದಳು.
'ಸುಖಾ' ಅವಳ ನಿಜವಾದ ಹೆಸರಲ್ಲ. ಅದು ಅವಳು ಇಟ್ಟುಕೊಂಡ ಹೆಸರು.ಅಥವಾ ಗುರುಗಳು ಕೊಟ್ಟ ಹೆಸರು. ಅದು ವೇದಕಾಲದ ಒಬ್ಬ ಋಷಿಕೆಯ ಹೆಸರಂತೆ!!
"ನಿನ್ನ ಪೂರ್ವಾಶ್ರಮದ ಹೆಸರೇನು ಸುಖಾ?"
ಸುಮ್ಮನೆ ನಕ್ಕಳು.
ಇಪ್ಪತ್ತು ಬಾರಿಯಾದರೂ ವಿಪಶ್ಶನಾ ಶಿಬಿರಕ್ಕೆ ಹೋಗಿದ್ದಾಳಂತೆ. ಕಾಡಿನೊಳಗಿರುವ ಶಾಂತಿಧಾಮ ಆಶ್ರಮಕ್ಕೆ ಹೋಗಲು ನಮ್ಮ ಜೊತೆ ಗಾಡಿ ಹತ್ತಿದ್ದಳು. 'ಐವತ್ತು' ಅವಳ ಮುಖದಲ್ಲಿ ಹುಡುಕಿದರೂ ಕಾಣುತ್ತಿರಲಿಲ್ಲ.
ಆಶ್ರಮದ ಕಾರ್ಯದರ್ಶಿಗಳಾದ ಸತ್ಯವ್ರತ ನಮ್ಮನ್ನು ಆಶ್ರಮಕ್ಕೆ ಅವರ ಗಾಡಿಯಲ್ಲಿ ಕರೆದೊಯ್ದರು. ಆಶ್ರಮವೆಂದರೆ, ಸುಮಾರು ಎಂಬತ್ತು ಎಕರೆ ವಿಸ್ತೀರ್ಣದ ವಿಶಾಲವಾದ ಕಾಡು ಅದು.
ಸುಖಾ ಬಂದದ್ದು ಆಶ್ರಮಕ್ಕಲ್ಲ. ಆಶ್ರಮದವರು ಅವಳಿಗೆಂದೇ ಒಂದು ಕುಟೀರವನ್ನು ಕಟ್ಟಿ ಕೊಟ್ಟಿದ್ದಾರೆ. ಆದರೂ ಆಶ್ರಮದಾಚೆ ಇರುವ ದುರ್ಗಮ ಕಾಡಿನ ಒಂದು ಗುಹೆಯಲ್ಲಿ ಹತ್ತು ದಿನಗಳ ಕಾಲ ಕುಳಿತು ಧ್ಯಾನಮಾಡಲು ಬಂದಿದ್ದಳು.
ಹಾವುಗಳು ಬಂದರೆ?
"No snakes!"
"No, Wild animals" ಎಂದು ಸೌಮ್ಯವಾಗಿ ನಕ್ಕಳು.ಮುಖದಲ್ಲಿ ಎಂತಹ ಅನನ್ಯ ಸಮಾಧಾನ.
ಅಲ್ಲಿ ಆನೆಗಳ ಕಾಟ ಬಹಳ. ಆಗಾಗ ಚಿರತೆಗಳೂ ಬರುತ್ತವಂತೆ. 'ವರಾಹ'ಗಳದ್ದಂತೂ ಸರಿಯೇ ಸರಿ. ಆನೆಯೊಂದು ಮಜಬೂತು ಗೋಡೆಯನ್ನೂ ಒದ್ದು ಒಳ ಬಂದು ಆಶ್ರಮದಲ್ಲಿರುವ ಯಾವುದೋ ಕಾಡು ಮರವನ್ನು ಉರುಳಿಸಿತ್ತು. ಉರುಳಿಸಿದ ಮರವನ್ನು ಕಣ್ಣಾರೆ ಕಂಡ ನನಗೆ "no wild animals" ಎನ್ನುತ್ತಾಳಲ್ಲ? Wilderness ಗೇ ಹೊರಟವಳಿಗೆ wild ಎನ್ನುವುದು ಇಲ್ಲವೇನೋ. ಕಾಡಮೂಲಕ ಹೊರಟಿದ್ದಳು ಆಗಸಕ್ಕೆ! ನಾವೂ ವಿಮಾನದಲ್ಲಿ ಹಾರುತ್ತೇವಲ್ಲ ಕುಡಿದ ನೀರು ಅಲ್ಲಾಡದ ಹಾಗೆ ಸುಖಾಸೀನದಲ್ಲಿ ಕುಳಿತು?
ಎಲ್ಲ ಭಯಗಳಿಂದ ಪಕ್ಕಾದ ನನ್ನೊಳಗೆ wilderness ಇಳಿಯುವುದಾದರೂ ಹೇಗೆ? ಕಣ್ಣಿನ ಬರ, ಕಿವಿಯ ಬರ, ಅಭಿವ್ಯಕ್ತಿ ಬರ ಇನ್ನೂ ಹಿಂಗಿಲ್ಲವಲ್ಲ?
"ಸುಖಾ ಕುಳಿತುಕೊಳ್ಳುವ ಗುಹೆಯನ್ನು ನಾನೊಮ್ಮೆ ನೋಡಬಹುದೇ?"
"ಸಾಧ್ಯವೇ ಇಲ್ಲ" ಹೇಳಿದರು ಸತ್ಯವ್ರತ.
"ಕಾರು ಹೋಗುತ್ತದಲ್ಲ?"
"ಕಾರು ಹೋಗುವುದು, ಸಂಗಮದವರೆಗೆ, ಅರ್ಧ ದಾರಿ ಮಾತ್ರ. ಅಲ್ಲಿಗೆ ಯಾವಾಗಲಾದಾರೂ ಹೋಗಬಹುದು. ಅಲ್ಲಿಂದಾಚೆ ಸುಖಾ ಹೋಗುವ ದಾರಿಯಲ್ಲಿ ಹೋಗಲು ನಿಮಗೆ ಸಾಧ್ಯವಿಲ್ಲ. ಮುಳ್ಳುಕಂಟಿಗಳ ಮದ್ಯೆ ದಾರಿಯನ್ನು ಮಾಡಿಕೊಂಡು, ಬಂಡೆಗಳನ್ನು ಹತ್ತಿ, ಬೆಟ್ಟ ಇಳಿದು ನದೀ ತೀರದಲ್ಲೇ ಸಾಗಬೇಕು...ತುಂಬಾ... ತುಂಬಾ ಕಷ್ಟ. ಇನ್ನೂ ನಾನೇ ನೋಡಿಲ್ಲ!"
ಗೋಗರೆದೆ. ಖಡಾಖಂಡಿತವಾಗಿ "No" ಎಂದು ಬಿಟ್ಟರು.
ಆಶ್ರಮದ ಊಟದ ಮನೆಯ ಮೇಜಿನ ಸುತ್ತ ಬೆಳಗಿನ ತಿಂಡಿಗಾಗಿ ಕಾಯುತ್ತ ನಾವೆಲ್ಲರೂ ಕುಳಿತಿದ್ದವು. ಸುಖಾ ವೇಗವಾಗಿ ಒಳಬಂದಳು. ಬದಿಯಲ್ಲೇ ಒಂದು ಕುರ್ಚಿ ಖಾಲಿ ಇತ್ತು. ಕರೆದೆ. "No, I have to go" ಎಂದಳು. ಯಾರೋ ಒತ್ತಾಯಿಸಿರಬೇಕು ಬದಿಯಲ್ಲಿ ಬಂದು ಕುಳಿತು ಬಡಿಸಿದ ಉಪ್ಪಿಟ್ಟನ್ನು ಮೂರೇ ಬೆರಳುಗಳಿಂದ ಸ್ವಲ್ಪ ಸ್ವಲ್ಪವೇ ನಾಜೂಕಾಗಿ ತೆಗೆದುಕೊಂಡು ಸವಿದು ಉಂಡಳು. ಅವಳು ಈ ಹಿಂದೆ ಹಲವಾರು ಬಾರಿ ಹೊಕ್ಕ, ಏರು ಇಳಹಿನ ಕಾಡಿನ ಜಾಡು, ಗುಹೆಯ ಚಿತ್ರಗಳನ್ನು ತೋರಿಸಿದಳು. ಅವುಗಳನ್ನು ನನ್ನನೊಡನೆ ಹಂಚಿಕೊಳ್ಳುವೆಯಾ ಎಂದಿದ್ದಕ್ಕೆ ತನ್ನ ಫೋನ್ ನಲ್ಲಿ ನನ್ನ ನಂಬರನ್ನು ನಮೂದಿಸಿಕೊಂಡಳು. "ಬೈ" ಎಂದು ನಗುತ್ತಾ ಕೈ ಬೀಸಿ ಹೊರಟೇ ಹೋದಳು. ಮೊದಲ ಬಾರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದೊಳಗೆ ಇಮ್ಮಿಗ್ರೇಷನ್ ಗೆ ಹೊಗುವ ಮಕ್ಕಳ ಉತ್ಸಾಹವಿತ್ತು.
.
ಬರುವಾಗ ಕನಕಪುರದ ರಸ್ತೆಯಲ್ಲಿ ಒಂದು ಪ್ಯಾಕೆಟ್ ಖರ್ಜೂರವನ್ನು ಕೊಂಡುಕೊಂಡಿದ್ದಳು. ಹತ್ತು ದಿನಗಳ ವರೆಗೆ ಅಷ್ಟೇ ಅವಳ ಆಹಾರ. ನೀರನ್ನೂ ಕೂಡ ಕುಡಿಯುವುದಿಲ್ಲವಂತೆ. "ನನಗೆ ಇಷ್ಟ ಇದು" ಎಂದು ಅಲ್ಲೇ ಖರೀದಿಸಿದ ಎಂ.ಟಿ.ಆರ್ ಚಟ್ನಿಪುಡಿ ಪ್ಯಾಕೆಟ್ ನ್ನು ತೋರಿಸಿದ್ದಳು. ಇಡ್ಲೀನೇ? ದೋಸೇನೆ? ಯಾವುದರ ಜೊತೆಗೆ ಚಟ್ನೀಪುಡಿ??
ಹಸಿವಾಗದವಳಿಗೆ ಭಿಕ್ಷಾನ್ನಗಳೇಕೆ? ತೃಷೆಯಾಗದವಳಿಗೆ ಕೆರೆ ಹಳ್ಳ ಬಾವಿಗಳೇಕೆ? ಮಲಗದೇ ಇರುವವಳಿಗೆ ಪಾಳು ದೇಗುಲವಾದರೂ ಏಕೆ?
ಆತ್ಮ ಸಂಗಾತ ಇರುವವಳಿಗೆ ಕಾಡು ಪ್ರಾಣಿಗಳ ಭಯವೆಲ್ಲಿಯದು?
ಈಗ ಸುಖಾ ಏನು ಮಾಡುತ್ತಿರಬಹುದು? ಅವಳು ಹೊರಬರಲು ಇನ್ನೂ ಹತ್ತು ದಿವಸಗಳಾದರೂ ಬೇಕು!
ಆಕಾಶ ನೋಡುವ ಹಂಬಲದಿಂದ ರಾತ್ರಿ ಊಟವಾದ ಬಳಿಕ ಗುರುಕುಲದ ಹೊರಗೆ ಬಂದೆ. ಗಾಡಾಂಧಕಾರ. ಕತ್ತಲಲ್ಲಿ ಒಂದಡಿ ಮುಂದೆ ಇಟ್ಟಿದ್ದಕ್ಕೆ ಭಯಗೊಂಡ ಗಂಡ ಕೈಹಿಡಿದು ಹಿಂದೆ ಎಳೆದ .
ತಲೆಯ ಮೇಲೆ ನಕ್ಷತ್ರಗಳು ಹೊಳೆಯುತ್ತಿದ್ದವು.
ಕೆ. ಎಸ್.ನ ಅವರ ಕವಿತೆಗಳಲ್ಲಿ ಮಣ್ಣಿನ ಹಾಡು
ಗಿರಿಜಾ ಶಾಸ್ತ್ರಿ | Jan 27, 2023 | ಸಂಪಿಗೆ ಸ್ಪೆಷಲ್ |
ಇಲ್ಲಿ ತಂದೆಯನ್ನು ಉದ್ದೇಶಿಸಿ ಕವಿತೆ ಮಾತನಾಡುವುದಾದರೂ ಇಡೀ ಕವಿತೆ ಹಾಡುವುದು ಭೂಮಿಗೀತವನ್ನೇ. ‘ನಿನ್ನ ಕಾಣದೆಯೆ ಬೆಳೆದೆ, ನಾ ಕಂಡಿಹೆ ತಾಯ ಸಂಪ್ರೀತಿಯನು ಚೆಲುವನು’ ಎನ್ನುವ ನಿರೂಪಕನಿಗೆ ತಂದೆ ಇಲ್ಲಿ ಅದೃಶ್ಯ ವ್ಯಕ್ತಿ ಅಥವಾ ಯಾವಾಗಲಾದರೊಮ್ಮೆ ಕಂಡರೂ, ಮಗ ‘ಕೈಬೀಸಿ ಕರೆದರೂ ರಾಜಾಧಿರಾಜನೆನ್ನುವ ಸೊಕ್ಕಿನಿಂದ’ ಮಗನ ಮೈಮುಟ್ಟದೆಯೇ ನಡೆವನು. ಆದರೆ ತಾಯಿಯಾದರೋ ‘ಮರುಭೂಮಿಯಲಿ ಮುಗಿಲ ತೊಟ್ಟಿಲ ಕಟ್ಟಿ, ಹಿಮ ಬೆಂಕಿ ಬಿರುಗಾಳಿ’ ಯ ವಿಕೋಪದ ನಡುವೆಯೂ ಹರುಷದಿಂದ ಅಮೃತವನ್ನೇ ಸೋಸಿ ಪೊರೆದವಳು.
ಇಂದು ಕವಿ ಕೆ.ಎಸ್. ನರಸಿಂಹಸ್ವಾಮಿಯವರ ಹುಟ್ಟುಹಬ್ಬ. ಅದರ ಪ್ರಯುಕ್ತ ಅವರ ಕವಿತೆಗಳ ಕುರಿತು ಗಿರಿಜಾ ಶಾಸ್ತ್ರಿ, ಮುಂಬಯಿ ಬರೆದ ಬರಹವೊಂದು ಇಲ್ಲಿದೆ
ಕೆ.ಎಸ್.ನ ಅವರ ಮಾತೃಕೇಂದ್ರಿತವಾದ ಕವಿತೆಗಳ ಮೇಲೆ ಗಮನಹರಿಸುವುದು ಈ ಲೇಖನದ ಉದ್ದೇಶ. ಈ ಮಾತೆ- ಭೂಮಿ, ಕಾಲ, ಚರಿತ್ರೆ ಮತ್ತು ಸಾಕ್ಷಿ ಪ್ರಜ್ಞೆಯ ಪ್ರತೀಕವೂ ಆಗಿದ್ದಾಳೆ. ಕಾಲದ ಚಲನೆಯನ್ನು ಗುರುತಿಸುವುದೇ ಭೂಮಿಯ ಚಲನೆಯ ಮೂಲಕ. ಹೀಗಾಗಿ ಕಾಲದ ಚಲನೆಗೆ ಭೂಮಿ ಒಂದು ಸಾಕ್ಷಿ ಪ್ರಜ್ಞೆ. ಕಾಲದ ಚಲನೆಯೆಂದರೆ ಚರಿತ್ರೆಯ ಚಲನೆಯೇ ಆಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ನಮ್ಮಲ್ಲಿ ‘ಕಾಲ’ ಪುರುಷ ರೂಪ. ಇಂತಹ ಅಮೂರ್ತ ಪುರುಷ ರೂಪವನ್ನು ಚಲಾವಣೆಗೆ ತರುವವಳು ಭೂಮಿ. ಮಣ್ಣು ತನ್ನೊಡಲೊಳಗೆ ಬೀಜ ಧರಿಸಿ ಜೀವ ಜಾಲವನ್ನು ಪೊರೆಯುವ ವನಸ್ಪತಿಗೆ ಕಾರಣವಾಗುತ್ತದೆ. ಅವುಗಳ ತಂಗುದಾಣವಾಗುತ್ತದೆ..
ಭೂಮಿ ನಮ್ಮಲ್ಲಿ ಯಾವತ್ತೂ ಹೆಣ್ಣು ರೂಪ. ಆದುದರಿಂದಲೇ ಅದು ಕೆ.ಎಸ್.ನ ಅವರ ಪಾಲಿಗೆ ‘ಕುಂಕುಮ ಭೂಮಿ’. ಹೆಣ್ಣು ಈ ನೆಲಕ್ಕಂಟಿದವಳಾದರೆ ಗಂಡು ಅಮೂರ್ತಕ್ಕೆ ಹಾರುವವನು. ಆದುದರಿಂದ ಅವನು ಆಕಾಶ. ಆಕಾಶದ ಬೆಳಕಿನೆಡೆಗೆ ಸಾಗದಂತೆ ಭೂಮಿಯ ಮೋಹ ಮನುಷ್ಯನನ್ನು ಆವರಿಸಿದೆ, ಪುರುಷನ ಊರ್ಧ್ವಗಮನಕ್ಕೆ ಹೆಣ್ಣು ಬಾಧಕಳು ಎಂಬ ನಂಬಿಕೆಯೂ ನಮ್ಮಲ್ಲಿದೆ. ಆದರೆ ಕೆ.ಎಸ್.ನ ಅವರಿಗೆ ಪಿತೃ ಎಂದೂ ಒಂದು ಮಿಥ್ಯೆಯೇ. ತಾಯಿ ಮಾತ್ರ ಸತ್ಯ. ಅವಳು ಮಾಯೆ ಎಂಬುದನ್ನು ಅವರು ಒಪ್ಪುವುದಿಲ್ಲ. ಅದು ಅವರಿಗೆ ಪೊಳ್ಳು ಅಧ್ಯಾತ್ಮವಾಗಿ ಕಾಣ ಸುತ್ತದೆ. ‘ಇಹದ ಪರಿಮಳವಿರದ ಹಾದಿ’ಯ ಮೇಲೆ ಕ್ರಮಿಸುವುದರಲ್ಲಿ ಅವರಿಗೆ ನಂಬಿಕೆ ಇಲ್ಲ. ‘ಇಹದ ತಳಹದಿಯಿಂದ’ಲೇ ‘ದಿಟದ ದರ್ಶನವರಳಿ ಹಂಬಲಿಸಿ ಹಾಡಾಗಬೇಕು; (ಬೆಳಗಿನ ಮಂಜು) ಎಂಬುದು ಅವರ ಮತ.
ಅವರಿಗೆ ಗತಿ ಮತ್ತು ಗಮ್ಯ ಎರಡೂ ಮೃತ್ತಿಕೆಯೇ. ಆದ್ದರಿಂದಲೇ “ನಾ ಬರೆದೆ ಭೂಮಿ ಮಣ್ಣೆಂದು” ಎನ್ನುತ್ತಾರೆ. (ಬಿಳಿಯ ಹೂಗಳ ಕವಿತೆ ಗೋರಿಗಳ ಮೇಲೆ). ಏಕೆಂದರೆ ಈ ಮಣ್ಣು ಸೃಷ್ಟಿಯ ಮೂಲ ಮತ್ತು ಅದರ ಪೋಷಣೆಯ ಆಧಾರ. ಇಡೀ ವಿಶ್ವವೇ ಅವಳ ಪ್ರತಿಮೂರ್ತಿಯಾಗಿ ಅವರಿಗೆ ಕಾಣುತ್ತಿದೆ. ಮಣ್ಣಿಂದಲೇ ಕಾಯ, ಅದನ್ನು ಬಿಟ್ಟವರಿಗೆ ಆಧಾರವೇ ಇಲ್ಲ ಎಂದು ದಾಸರೂ ಹಾಡಿದ್ದಾರೆ.
‘ನದಿಗಳೆಲ್ಲ ನಿನ್ನದೆ ಹಾಲು /ಬೆಟ್ಟ ಸಾಲು ನಿನ್ನ ಹೆಗಲು/ ಹಗಲು ನೀನು ನಗಲು/ಇರಳು ನಿನ್ನ ನೆರಳು/ ಹಸಿರುಡುಗೆ, ಮುಗಿಲಿನೊಡವೆ-/ಮುನ್ನೀರ ಮೇಲೆ ಕಣ್ಣೀರ ಸುರಿವ ತಾಯೆ/ ನೀನಲ್ಲ ಮಾಯೆ’ (ಶಿಲೆಗೆ ಹೂವಿನ ವಂಕಿ). ‘ಇರುವ ತನಕ ನೈಜವಾದದ್ದೊಂದೇ- ಭೂಮಿ’ ಎನ್ನುವ ಕೆ.ಎಸ್.ನ ಅವರಿಗೆ ದೇವರೆಂದರೆ ಸೃಜನಶೀಲತೆಯೇ.
ಅವರ ಪ್ರಥಮ ಸಂಕಲನ ಮೈಸೂರು ಮಲ್ಲಿಗೆ ಪ್ರಾರಂಭವಾಗುವುದೇ ಸುಕೋಮಲವಾದ ರಮ್ಯ ಪ್ರಪಂಚದಿಂದ. ಹೇಳಿಕೇಳಿ ಅದು ಮಲ್ಲಿಗೆ. ಮೃದುತ್ವದ ಜೊತೆಗೆ ಅತಿ ಮಾಧುರ್ಯವನ್ನೂ ಜೊತೆಗೇ ಇರಿಸಿಕೊಂಡಿರುವಂತಹದು. ಇಲ್ಲಿರುವುದು ಗಂಡು ಹೆಣ್ಣಿನ ಸರಳವಾದ ಪ್ರೇಮ ಪ್ರಪಂಚ. ಇದು ಎಷ್ಟು ಸರಳವೆಂದರೆ, ಡಿ. ಆರ್. ನಾಗರಾಜ್ ಅವರ ಪ್ರಕಾರ, ಪ್ರೇಮ ಕಾಮಗಳ ದಟ್ಟ ಗಳಿಗೆಗಳ ಚಂಡಮಾರುತ ಇಲ್ಲಿ ಇಲ್ಲ. “ಜನಾಂಗವೊಂದು ತನ್ನ ಕಾಲದ ಭಾಷೆಯಲ್ಲಿ ಒಮ್ಮೆ ಮಾತ್ರ ಸೃಷ್ಟಿಸಲು ಸಾಧ್ಯವಿರುವ ಕೃತಿ ‘ಮೈಸೂರು ಮಲ್ಲಿಗೆ’. ಅದೇ ಜನಾಂಗದಲ್ಲಿ, ಅದೇ ಕಾಲದಲ್ಲಿ ಮತ್ತೆ ಮತ್ತೆ ಅದನ್ನು ಬರೆಯಲು ಪ್ರಯತ್ನಿಸಿದರೆ ಆಗ ಅದು ಮೂಲ ಕವಿಯ ಉಚ್ಚಿಷ್ಟದಂತೆ ಕಾಣುತ್ತದೆ’ ಎನ್ನುತ್ತಾರೆ. ‘ಕ್ಲಾಸಿಕ’ ನಗೆ ಗುಣವೇ ಅಂತುಹದೋ ಏನೋ ಸಂಪೂರ್ಣ ತೃಪ್ತಿ ಮತ್ತು ತೀವ್ರ ಅತೃಪ್ತಿಯ ಅನುಭವವನ್ನು ಏಕಕಾಲಕ್ಕೆ ನೀಡುತ್ತದೆ, ಎಂದು ಅವರು ವಿಸ್ಮಯ ಪಡುತ್ತಾರೆ (ಶಕ್ತಿ ಶಾರದೆಯ ಮೇಳ).
ಮೈಸೂರು ಮಲ್ಲಿಗೆಯ ಸರಳ ಪ್ರೇಮದಿಂದ ಹೊರಟ ಹೆಣ್ಣು ಅವರ ಕಾವ್ಯ ಪ್ರಯಾಣದ ಕೊನೆಗೆ ಮೆಟಾಫಿಸಿಕಲ್ ನೆಲೆಗೆ ತಲಪುತ್ತಾಳೆ. ಅವರ ಈ ದೀರ್ಘ ಪ್ರಯಾಣದಲ್ಲಿ ಎಲ್ಲಿಯೂ ಅವರ ‘ಕಾವ್ಯ ಖಡ್ಗ’ವಾಗುವುದಿಲ್ಲ. ಇದನ್ನು ಉದಾರ ಮಾನವತಾವಾದ ಎಂದು ಡಿ.ಆರ್. ನಾಗರಾಜ್ ಗುರುತಿಸುತ್ತಾರೆ. ಖಡ್ಗವೆಂದರೆ ಕೊಲ್ಲುವುದು. ಅದು ಪುರುಷನ ವಿಧಿ. ಮಾಂಸಲ ಪಿಂಡಕ್ಕೆ ಜೀವದಾನ ಮಾಡುವುದು ಹೆಣ್ಣಿನ ಹೆಗ್ಗಳಿಕೆ.
‘ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ’ ಕವಿತೆ ತಂದೆಯ ವಾರಸುದಾರಿಕೆಯನ್ನು ಧಿಕ್ಕರಿಸುವುದರ ಮೂಲಕವೇ ಪ್ರಾರಂಭವಾಗುತ್ತದೆ.
‘ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ; /ತೊಡಿಸದಿರು ಚಂದ್ರ ಕಿರೀಟವನು./ಕೊರಳಿಗೆ ಭಾರ ನನಗೆ ನಕ್ಷತ್ರ ಮಾಲಿಕೆ;/ನಾನೊಲ್ಲೆ ದೊರೆತನವನು’
ಕೆ.ಎಸ್.ನ ಅವರಿಗೆ ಪಿತೃ ಎಂದೂ ಒಂದು ಮಿಥ್ಯೆಯೇ. ತಾಯಿ ಮಾತ್ರ ಸತ್ಯ. ಅವಳು ಮಾಯೆ ಎಂಬುದನ್ನು ಅವರು ಒಪ್ಪುವುದಿಲ್ಲ. ಅದು ಅವರಿಗೆ ಪೊಳ್ಳು ಅಧ್ಯಾತ್ಮವಾಗಿ ಕಾಣ ಸುತ್ತದೆ. ‘ಇಹದ ಪರಿಮಳವಿರದ ಹಾದಿ’ಯ ಮೇಲೆ ಕ್ರಮಿಸುವುದರಲ್ಲಿ ಅವರಿಗೆ ನಂಬಿಕೆ ಇಲ್ಲ. ‘ಇಹದ ತಳಹದಿಯಿಂದ’ಲೇ ‘ದಿಟದ ದರ್ಶನವರಳಿ ಹಂಬಲಿಸಿ ಹಾಡಾಗಬೇಕು; (ಬೆಳಗಿನ ಮಂಜು) ಎಂಬುದು ಅವರ ಮತ.
ಇಲ್ಲಿ ತಂದೆಯನ್ನು ಉದ್ದೇಶಿಸಿ ಕವಿತೆ ಮಾತನಾಡುವುದಾದರೂ ಇಡೀ ಕವಿತೆ ಹಾಡುವುದು ಭೂಮಿಗೀತವನ್ನೇ. ‘ನಿನ್ನ ಕಾಣದೆಯೆ ಬೆಳೆದೆ, ನಾ ಕಂಡಿಹೆ ತಾಯ ಸಂಪ್ರೀತಿಯನು ಚೆಲುವನು’ ಎನ್ನುವ ನಿರೂಪಕನಿಗೆ ತಂದೆ ಇಲ್ಲಿ ಅದೃಶ್ಯ ವ್ಯಕ್ತಿ ಅಥವಾ ಯಾವಾಗಲಾದರೊಮ್ಮೆ ಕಂಡರೂ, ಮಗ ‘ಕೈಬೀಸಿ ಕರೆದರೂ ರಾಜಾಧಿರಾಜನೆನ್ನುವ ಸೊಕ್ಕಿನಿಂದ’ ಮಗನ ಮೈಮುಟ್ಟದೆಯೇ ನಡೆವನು. ಆದರೆ ತಾಯಿಯಾದರೋ ‘ಮರುಭೂಮಿಯಲಿ ಮುಗಿಲ ತೊಟ್ಟಿಲ ಕಟ್ಟಿ, ಹಿಮ ಬೆಂಕಿ ಬಿರುಗಾಳಿ’ ಯ ವಿಕೋಪದ ನಡುವೆಯೂ ಹರುಷದಿಂದ ಅಮೃತವನ್ನೇ ಸೋಸಿ ಪೊರೆದವಳು. ‘ಮಳೆ ಹೊಳೆ ಕಡಲೆಲ್ಲಾ ಹಾಡಿ ಕರೆ’ ದು ಮನುಷ್ಯನ ಬದುಕನ್ನು ಪೊರೆಯವವಳು, ‘ದೇಶ ದೇಶದ ಬಿಸಿಲ’ ತನ್ನ ಸೃಷ್ಟಿ ಕೂಸುಗಳ ಕೆನ್ನೆ ಮೇಲೆ ಹರಿಸಿ, ಬಾಂದಳದಲಿ ಕೂಸು ಮರಿ ಮಾಡಿ ಬೆಳೆಸುವ ಅಗ್ನಿ ಕುವರಿ ಅವಳು. ಇಲ್ಲಿ ಅಗ್ನಿ ಜೀವ ಪೋಷಕ ಧಾತುವಾಗಿರುವಂತೆ ಶಿಕ್ಷಿಸುವ ದಿವ್ಯವೂ ಹೌದು. ಅಗ್ನಿಯನ್ನು ಒಡಲೊಳಗೆ ಧರಿಸಿರುವ ಅವಳಿಗೆ ಒಂದು ‘ಋತ’ವಿದೆ ಚರಿತ್ರೆ ಅದರ ಉಲ್ಲಂಘನೆಯನ್ನು ಮಾಡಿದಾಗಲೆಲ್ಲ ಆಸ್ಫೋಟಗೊಂಡು ಚಂಡಮಾರಿಯಾಗಿ ಮನುಕುಲಕ್ಕೆ ಪಾಠ ಕಲಿಸುವವಳೂ ಹೌದು.
ಅವಳ ತಾಳ್ಮೆಗೆ ಇಲ್ಲಿ ಇನ್ನೊಂದು ಉಪಮೆಯಿಲ್ಲ ನಿಜ. ಅವಳದು ತಂಪಿನೊಡಲು. ಅದರ ಮಡಿಲಲ್ಲಿ ಬಾಳು ಸೊಂಪು, ‘ಹಸುರೆಲ್ಲ ಹೂವಾದ ಹೊನ್ನ ಗೆಲುವು’ ಆದರೆ ಪಾಪದ ಕೊಡ ತುಂಬಿದಾಗ ಆಕೆ ‘ಹೆಮ್ಮಾರಿ ಬೆಳ್ಳಿಕುರಿ ದಡವ ನಾಲಗೆ ನೀಡಿ ನೆಕ್ಕುವ ಹೊಳೆ’ ಕುರಿಯನ್ನು ಬಲಿತೆಗೆದುಕೊಳ್ಳುವ ಮಾರಿ (‘ಬಿಳಿ ಹೂಗಳ ಕವಿತೆ ಗೋರಿಗಳ ಮೇಲೆ’) ಪ್ರಕೃತಿಯ ವಿಕೋಪಕ್ಕೆ ಪಾಪಿಗಳು ಮಾತ್ರವಲ್ಲ, ಪಾಪದವರೂ ಬಲಿಯಾಗಿಬಿಡುತ್ತಾರೆ. ಆಗ ಧೃತಿಗೆಡದೆ ಮಗ ನಿಂತು ಸವಾಲೆಸೆಯುತ್ತಾನೆ ‘ಕಣ್ಣ ಬೆದರಿಕೆಗೆ ಓಡುವೆನೆಂದು ಬಗೆಯದಿರು. ನಿನ್ನ ನೆತ್ತರೆ ನನ್ನ ಮೈಯ ತುಂಬ/ ಬರಡು ನೋಟಕೆ ರೋಸಿ ತೊಲಗಬಹುದೆನ್ನದಿರು/ಬಂಡೆ ಬಿರುಕಿಗೆ ಚಂದ್ರ ಬಿಂಬ….ತಳ್ಳುವೆಯ? ತಳ್ಳು ಕಮರಿಗೆ/ ಅಲ್ಲಿ ನಿನ್ನ ತೊಡೆ (ಸಾಂತ್ವನ ಪಡೆಯಲು ತಾಯ ತೊಡೆಗಿಂತ ಉತ್ತಮವಾದ ಆಶ್ರಯ ಯಾವುದು?)/ನನ್ನ ಬಾಳಿನ ನೋವು ನೀಗಬಹುದು /ಎತ್ತೆಸೆಯೆ ಪರ್ವತಾಗ್ರಕೆ ಅಲ್ಲಿ ನಿನ್ನ ಹೆಡೆ;/ನಾನದರ ಮಣ ಯಾಗಿ ಮಿನುಗಬಹುದು. (ಹೆಜ್ಜೆ ಗುರುತು). ಸತ್ಯಕ್ಕೆ/ಜೀವ ಪರವಾದದ್ದಕ್ಕೆ ಮಾತ್ರ ಇಂತಹ ಧಾರ್ಷ್ಟ್ಯ ಸಾಧ್ಯ. ಎಂತಹ ವಿಕೋಪನ್ನೂ ಮೀರಿ ಬದುಕಬಲ್ಲೆನೆಂಬ, ಕೊಲ್ಲುವ ಖಡ್ಗವನ್ನೇ ಗುರಾಣಿಯನ್ನಾಗಿ ಮಾಡಿಕೊಳ್ಳುವ ಎದೆಗಾರಿಕೆ ಜೀವಪರವಾದುದಕ್ಕೆ ಮಾತ್ರ ಸಾಧ್ಯ. ಜೀವ ವಿರೋಧಿಯಾದದ್ದಕ್ಕೆ ಮಾತ್ರ ಎಂದೂ ಉಳಿಗಾಲವಿಲ್ಲ. ಅದು ತಾಯಿಯ ಕ್ರೌರ್ಯದ ಎದುರು ನುಚ್ಚುನೂರಾಗಿಬಿಡುತ್ತದೆ.
ತಂದೆಯ ಪಾತ್ರ ಮಗುವಿನ ಬೆಳವಣಿಗೆಯಲ್ಲಿ ಗೌಣ. ಆದುರಿಂದಲೇ ‘ನಿನ್ನ ಹಂಗಿಲ್ಲದೆಯೇ ನಾ ಬಾಳುವುದ ಕಲಿಸು’ ಎಂದು ತಂದೆಗೆ ಹೇಳುತ್ತಾರೆಯೇ ಹೊರತು ತಾಯಿಗೆ ಅಲ್ಲ. ‘ಬಂದ ಬಾಗಿಲು ಮಣ್ಣು, ಬಿಡುವ ಬಾಗಿಲು ಮಣ್ಣು, ನಡುವೆ ಕಾಪಾಡುವುದು ತಾಯ ಕಣ್ಣು’ ತಾಯಿಯ ಮಡಿಲಲ್ಲಿ ಕಣ್ಣುಬಿಡುವ ಬದುಕು, ಕಣ್ಣುಮುಚ್ಚುವುದೂ ಅಲ್ಲಿಯೇ. ಈ ನಡುವೆ ಕಾಪಾಡುವವಳು ಅವಳೇ. ಆದುದರಿಂದ ತಾಯ್ತನವೇ ಅಂತಿಮವಾದುದು. ‘ಬೆಳೆದ ಮಗ ಹೊರಲಿ ನೊಗ, ಕೇಳಿಬಿಡುವೆನೆಂದು ಭ್ರಮೆಗೊಂಡು ಬಂದಿರುವೆ ನೀನು’ ಎಂದು ತಂದೆಗೆ ಹೇಳುವಾಗ ಪಿತೃಪ್ರಾಧಾನ್ಯತೆಯ ಹುಸಿತನವನ್ನು ಬಯಲಾಗಿಸುತ್ತಾರೆ. ಪಿತೃವಿನೊಂದಿಗೇ ಗುರುತಿಸಿಕೊಳ್ಳುವ ವ್ಯವಸ್ಥೆಯೊಂದರಲ್ಲಿ ತಾಯಿಯೇ ಆತ್ಯಂತಿಕ ಸತ್ಯ ಎಂದು ಪುರುಷನೊಬ್ಬ ಹೇಳುವುದು ಬಹಳ ಮಹತ್ವವಾದುದು. ಆದುದರಿಂದಲೇ ‘ವಸುಂಧರೆಯ ಮಗ ನಾನು’ ಎನ್ನುತ್ತಾರೆ. ಬೇಂದ್ರೆಯವರು ಕೂಡ ಅಂಬಿಕಾತನಯದತ್ತ ಎಂದು ತಮ್ಮನ್ನು ತಾವು ಕರೆದುಕೊಳ್ಳುತ್ತಾರೆ. ‘ಅವಳು’ ನುಡಿಸಿದ್ದನ್ನು ತಾನು ನುಡಿಯುವುದಾಗಿ ಹೇಳಿಕೊಳ್ಳುವ ಅವರು ತಾನು “ಐದು ಐದೆಯರ ಮಗ” (ಹೆತ್ತ ತಾಯಿ, ಭೂಮಿತಾಯಿ, ಕನ್ನಡ ತಾಯಿ, ಭಾರತ ಮಾತೆ, ವಿಶ್ವಮಾತೆ) ಎಂದು ಘೋಷಿಸಿಕೊಳ್ಳುತ್ತಾರೆ. ಪಿತೃವಿನ ನೆರಳಿನಿಂದ ತಪ್ಪಿಸಿಕೊಂಡ ಈ ಇಬ್ಬರೂ ಕನ್ನಡದ ಅನನ್ಯ ಕವಿಗಳು.
‘ಬಿಳಿಹೂಗಳ ಕವಿತೆ ಗೋರಿಗಳ ಮೇಲೆ’ ಕವಿತೆಯಲ್ಲಿ ಭೂಮಿ, ಸಾಕ್ಷಿ ಪ್ರಜ್ಞೆಯಾಗಿರುವುದರ ಜೊತೆಗೆ ಕಾಲ ಮತ್ತು ಚರಿತ್ರೆಯನ್ನು ಪ್ರತಿನಿಧಿಸುತ್ತಾಳೆ. ನಮ್ಮ ಲಿಖಿತ ಚರಿತ್ರೆಯೆಂಬುದು ಪೌರುಷಮಯವಾದುದು. ಅಹಂಕಾರ ಮೂಲವಾದುದು. ‘ಒಡಲಿನುರಿ, ನುಡಿಯ ಮುರಿ, ರಣ ಕಹಳೆ ದೆವ್ವಗಳ ಪಂಜು; ಸಿಡಿಲು ಸಾವಿರ ಒಡೆವ ಗಗನದ ಹೆಡೆ….. ರಣಹದ್ದು ಡೇಗೆಗಳ ಗಾಳಿಯ ಪಡೆ;” ಗಗನವೇ ಹೆಡೆಯೆತ್ತಿ ಮನುಕುಲವನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಆದರೆ ಕಾಲಯಾನದ ಮಜಲುಗಳಲ್ಲಿ ಅವುಗಳೆಲ್ಲಾ ತಾಯಿಯ ಪಾದಧೂಳಿಯಾಗಿ ಬಿಟ್ಟಿವೆ. ‘ತಾಯ ಸೆರಗನೊದೆದು ಬಾಗಿ ನೋಡ ಹೋದ’ ‘ತಾಯ್ಗಂಡ’ ರಾಜ್ಯಾಧಿಪತಿಗಳೆಲ್ಲಾ ಪಾತಾಳ ಕಂಡರೂ, ತಾಯಿಯ ಮಡಿಲಿನಲ್ಲಿ ಗೋರಿಗಳಾಗಿ ಎದ್ದು ನಿಂತಿದ್ದಾರೆ. ಅಂತಹವರ ಮೇಲೆ ‘ಕೊಲುವ ಹಕ್ಕು ನಿಮಗಿಲ್ಲ ಸ್ನೇಹಿತರೇ ಅಸ್ತ್ರವೇನೆ ಇರಲಿ’ ಎಂದು ತಾಯಿ ಬಿಳಿ ಹೂಗಳ ಕವಿತೆಗಳನ್ನು ಚೆಲ್ಲಿದ್ದಾಳೆ. ಕೊಚ್ಚಿ ಕೊಲ್ಲುವ ಯುದ್ಧಗಳ ಎದುರಿಗೆ ಶಾಂತಿ ಪತಾಕೆಯನ್ನು ಹಾರಿಸಿದ್ದಾಳೆ. ಶಿವೇತರವಾದುದರಿಂದ ರಕ್ಷಿಸಿದ್ದಾಳೆ. ಯಾಕೆಂದರೆ ಅವಳು ಮಂಗಳೆ. ಸ್ವಲ್ಪ ಅಗೆದರೂ ಸಾಕು ತೆರೆದುಕೊಳ್ಳುವ ‘ಕುಂಕುಮ ಭೂಮಿ’. ರೈತರಿಗೆ ಬೀಜ ಬಿತ್ತಲು ಬೇಕಾಗಿರುವ ಅಗೆತವೂ ಅಷ್ಟೇ. ಜನಸಾಮಾನ್ಯರಿಗೆ ಬೇಕಾಗಿರುವುದು ‘ಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿ’ (ಗೋಪಾಲಕೃಷ್ಣ ಅಡಿಗ)ದಾಗ ದೊರಕುವ ಮಿರಗುವ ಚಿನ್ನದ ಅದಿರಲ್ಲ. ಚಿನ್ನ ಯಾವತ್ತೂ ಅರಮನೆಯ ಬೊಕ್ಕಸವನ್ನು ತುಂಬುವಂತಹದು. ಅಂತಹ ಅರಮನೆಗಳನ್ನು ನಿಷ್ಠುರವಾಗಿ ನೆಲಸಮ ಮಾಡಲು ಭೂಮಿಗೆ, ಚರಿತ್ರೆಗೆ, ಕಾಲಕ್ಕೆ ಮಾತ್ರ ಸಾಧ್ಯ. ಆದರೆ ಕುಂಕುಮ ಭೂಮಿಯಾದರೋ ಕೃಷಿಯ ಮೂಲಕ ಸಾಮಾನ್ಯಜನರ ಹೊಟ್ಟೆಯನ್ನು ತಂಪಾಗಿಸುತ್ತದೆ. ಕೃಷಿ ದುಡಿಮೆಯ ಜೊತೆಗೂ ಥಳಕು ಹಾಕಿಕೊಂಡಿದೆ. ಬಿದ್ದ ಮಳೆ ಮತ್ತು ಮನುಷ್ಯನ ದುಡಿಮೆಯಿಂದಾಗಿ ಭೂಮಿ ‘ಬಸುರಿ’ಯಾಗಿದ್ದಾಳೆ. ಅವಳು ಅನ್ನಪೂರ್ಣೆ. ‘(ನೀನಿಲ್ಲದ) ಅನ್ನಪೂರ್ಣೆಯಿಲ್ಲದ ಮನೆಯಲಿ ಏನಿದ್ದೂ ವ್ಯರ್ಥ’ (ಅನ್ನಪೂರ್ಣೆ) ಎನ್ನುವಾಗ ಹಸಿವಿನ ಝಂಝಾವತಕ್ಕೆ ಸಿಕ್ಕಿ ಮನುಕುಲ ತತ್ತರಿಸಿಹೋಗುವ ಚಿತ್ರ ಕಣ್ಣಮುಂದೆ ಬರುತ್ತದೆ.
‘ಮುಚ್ಚು ಮರೆಯಿರದೆ ಬಾಳಿದ ಪೂರ್ಣ ಜೀವಿಗಳಾದ ಪ್ರಾಕೃತರಂತೆ “ಹುಟ್ಟಿದ್ದು ಗಟ್ಟಿಯಾಗಲಿ ಬೆಳೆದು ಅವರಂತೆ /ತುಂಬು ರಕ್ತದ ಹಾಡು ಕೇಳಿ ಬರಲಿ/ನೆಲದೊಡಲ ಕೆಂಪು, ನೀರೊಡಲ ಹಾವಿನ ಹೊಲಿಗೆ,/ಬಾನ ತಳಮಳ ಹೆತ್ತ ನೋವ ಸ್ಮರಿಸಿ…. ಹಸಿರೆಲೆಗಳಲ್ಲಿ ಮಾಸದ ಕಣ್ಣು ಥಳಥಳಿಸಿ/ ತಪ್ಪುಹೆಜ್ಜೆಗಳನ್ನು ಸರಿಪಡಿಸಿ/ ನೆಲದಾಳದಲ್ಲಿ ಬೇರಿಳಿದ ಮರಗಳು ಬದುಕಿ/ಎಲ್ಲ ಕಾಲಗಳಲ್ಲಿ ಹೂವು ತೊಡಲಿ’ (ಕುಂಕುಮ ಭೂಮಿ). ಮಣ್ಣು ಕೊಡುವುದನ್ನೆಲ್ಲ ಪಡೆದು ಅದನೆ ಹಳಿಯುವ, ಭೂಮಿಯನ್ನು ಬಿಡದೇ ಬರಡಾಗಿಸುತ್ತಿರುವ ಆಧುನಿಕ ಮನುಷ್ಯನ ಲಾಲಸೆಗೆ, ಅವನು ಎಸಗುತ್ತಿರುವ ಮಾತೃದ್ರೋಹಕ್ಕೆ ಕೊಟ್ಟ ಉತ್ತರ ಮೇಲಿನ ಸಾಲುಗಳು. ಸ್ಮರಿಸಲು ಅರ್ಹರಾದವರು ಪ್ರಾಮಾಣಿಕ ಜನರೇ ಹೊರತು, ರಾಜಾಧಿಪತ್ಯದ ಚುಕ್ಕಾಣಿ ಹಿಡಿದ ಅಧಿಕಾರಗಳಲ್ಲ ಎಂಬುದನ್ನು ಇದು ಸಾರುತ್ತದೆ. ಇಂತಹ ಪ್ರಾಮಾಣಿಕ ಶ್ರಮಜೀವಿಗೆ “ಮಂಜಗುರುಳಿನ ತಾಯಿ ಬಿಸಿಲ ಕಣ್ಣನು ತೆರೆದು/ ನಿನ್ನ ದಾರಿಯ ಮೇಲೆ ಹೂವೆಸೆಯಲಿ” (ಬೆಳಗಿನ ಮಂಜು) ಎಂದು ಹಾರೈಸುವ ಕೆ.ಎಸ್.ನ ಅವರ ದರ್ಶನ ಇಂದಿಗೂ ಪ್ರಸ್ತುತವಾಗಿದೆ.
ಗಿರಿಜಾ ಶಾಸ್ತ್ರಿ
ನನ್ನ ನಾವೆಯಿಂದ ನಿನ್ನ ನಾವೆಯವರೆಗೆ....
ಗೆಳತಿ ಸುಧಾ ಅಡುಕಳ ಅವರು ಕನ್ನಡಕ್ಕೆ ತಂದಿರುವ ರವೀಂದ್ರನಾಥ ಟಾಗೋರ್ ಅವರ ‘ಗೀತಾಂಜಲಿ’ಯನ್ನು ಕಳುಹಿಸಿ ಬಹಳ ದಿನಗಳ ಮೇಲಾಗಿತ್ತು. ಅದನ್ನು ಈಗ ಓದಿ ಮುಗಿಸಿದ ತಕ್ಷಣ, ಕಣ್ಣು ಕಂಡಷ್ಟೂ ವಿಸ್ತರಿಸುವ ವಿಶಾಲವಾದ ಸಾಗರದ ಮುಂದೆ ನಿಂತ ಅನುಭವವಾಯಿತು. ಮೇರು ಪರ್ವತ ಒಂದರ ತಪ್ಪಲಲ್ಲಿ ನಿಂತಂತೆ ಭಾಸವಾಯಿತು. ಕುವೆಂಪು ಅವರು ಇಂತಹ ಅನುಭವವನ್ನು ಭೂಮಾನುಭೂತಿ ( Sublime theory - Longinus) ಎನ್ನುತ್ತಾರೆ.
wordsworth ತನ್ನ ಕವಿತೆಯಲ್ಲಿ"The world is too much with us; late and soon,
Getting and spending, we lay waste our powers" ಎನ್ನುತ್ತಾನೆ.
ಇಲ್ಲಿ ನನಗೆ ಟಾಗೋರರ ಜೊತೆಗೆ ಕುವೆಂಪು ಮತ್ತು words worth ನೆನಪಾಗಿರುವುದಕ್ಕೆ ಕಾರಣವಿದೆ. ಈ ಮೂವರೂ ರೊಮ್ಯಾಂಟಿಕ್ ಕವಿಗಳು. ( ಕುವೆಂಪು ಅವರಂತೂ ಕನ್ನಡದ wordsworth ಎಂದೇ ಹೆಸರಾದವರು) ನಿಸರ್ಗದೊಡನೆ ತಾದಾತ್ಮ್ಯ ಈ ಮೂವರ ಮೂಲ ಸೆಲೆ. ಪ್ರಕೃತಿಯ ದೈವೀಕರಣ ಭಾರತೀಯ ನವೋದಯದ ಮುಖ್ಯಲಕ್ಷಣಗಳಲ್ಲಿ ಒಂದು. ಅವರುಗಳೆಲ್ಲರ ಅಧ್ಯಾತ್ಮಿಕ ಔನ್ನತ್ಯದ ನೆಲೆಯೂ ಪ್ರಕೃತಿಯೇ! words worth ಕವಿತೆಯಲ್ಲಿರುವ ಕೊರಗಿಗೆ, ವಿಷಾದಕ್ಕೆ ಟಾಗೋರವರ ಕವಿತೆಗಳಲ್ಲಿ ಉತ್ತರವಿದೆ ಎಂದು ನನಗೆ ತೋರುತ್ತದೆ. ಅದು ಇಂದಿಗೂ ಪ್ರಸ್ತುತ.
ನಾವಿಂದು ವ್ಯಾವಹಾರಿಕ ಪ್ರಪಂಚದಲ್ಲಿ ಸದಾ ಕಾಲವೂ ವ್ಯಸ್ತರಾಗಿದ್ದೇವೆ. ವೇಗ ಮತ್ತು ಧಾವಂತ ನಮ್ಮ ಬದುಕನ್ನು ರೂಪಿಸುತ್ತಿದೆ. ಆಧುನಿಕತೆಯ ಅಭಿಶಾಪವಿದು. ಕನಸು ಎಚ್ಚರಗಳಲ್ಲೂ ಪ್ರಪಂಚ ನಮ್ಮನ್ನು ಬಿಡದೆ ಕಾಡುತ್ತದೆ. ಆವರಿಸುತ್ತದೆ. ಅದರಿಂದ ಬಿಡುಗಡೆಯೇ ಇಲ್ಲ. ಆದುದರಿಂದಲೇ "ಒಂದರೆಕ್ಷಣ ನಿನ್ನೆದುರು ಕುಳಿತುಬಿಡುವ ಭಾಗ್ಯವ ಕೊಡು ದೊರೆಯೇ ಮತ್ತೆ ಮುಗಿಸುವೆ ಕೈಯಲ್ಲಿರುವ ಕೆಲಸಗಳೆಲ್ಲವನ್ನೂ"ಎನ್ನುತ್ತಾರೆ ಕವಿ
ಹೀಗೆ ‘ಪ್ರಭುವೇ ದೊರೆಯೇ’ ಎಂದು ಅಲವರಿಯುವ, ಸಂಪೂರ್ಣ ಶರಣಾಗತಿಯ ರೀತಿ ಆಧುನಿಕರಿಗೆ ಗುಲಾಮತನವಾಗಿ ಕಾಣಬಹುದು.
ಬ್ರಹ್ಮಾಂಡ ಎನ್ನುವುದು ಎಷ್ಟು ದೊಡ್ಡದಿದೆ ಎನ್ನುವುದನ್ನು ವಿವರಿಸುತ್ತಾ ಜಿ.ಟಿ. ನಾರಾಯಣರಾಯರು ಒಮ್ಮೆ ಅದರ ಮುಂದೆ ಮನುಷ್ಯ ಹೇಗೆ ಅಣುವಿಗಿಂತಲೂ ತೀರ ಚಿಕ್ಕವನು. ಆದರೆ ಸಂತಸದ ಸಂಗತಿಯೆಂದರೆ ಈ ಅಣುವಿಗೆ ಬ್ರಹ್ಮಾಂಡದಲ್ಲಿ ತಾನು ಒಂದು ಅಣು ಎಂದು ಗೊತ್ತಿರುವುದು, ಎಂದಿದ್ದರು. ನಮ್ಮ ನಮ್ಮ ಗ್ರಹಿಕೆಯ ಸಾಮರ್ಥ್ಯಕ್ಕನುಗುಣವಾಗಿ ವಿಶ್ವ ತನ್ನ ರಹಸ್ಯವನ್ನು ಬಿಟ್ಟುಕೊಡುತ್ತದೆ ಎಂದಿದ್ದರು. ‘ನಾನು ಅಣು’ ಎಂಬ ಈ ಅರಿವೇ ಬ್ರಹ್ಮಾಂಡದ ಅಗಾಧತೆಯನ್ನು ಕಲ್ಪನೆ ಮಾಡಿಕೊಳ್ಳಲು ಸಹಾಯ ಮಾಡಬಹುದು.
ಅಣುವೊಂದು ಬ್ರಹ್ಮಾಂಡವನ್ನು ಅರಿಯುವ ತಹ ತಹ, ಅದರೊಳಗೆ ಲೀನವಾಗಬೇಕೆನ್ನುವ ಹಂಬಲ ಟಾಗೋರರ ಈ ಕವಿತೆಗಳಲ್ಲಿದೆ. ಭೌತಿಕ ಮತ್ತು ಅಭೌತಿಕ ಸಂಘರ್ಷದಲ್ಲಿ ಹುಟ್ಟುವ ಚಿತ್ತವೃತ್ತಿ ಇದು. ಇದು ಗುಲಾಮತನವಲ್ಲ. ಭೂಮಾನುಭೂತಿ. ಗ್ರಹಿಕೆಗೆ ದಕ್ಕದ ವೈಶಾಲ್ಯದ ಮುಂದೆ ನಿಂತಾಗ ಉಂಟಾಗುವ ತಳಮಳವಿದು. ವಿಸ್ಮಯವಿದು. ವ್ಯಾಕುಲತೆ ಇದು. ವ್ಯಾಕುಲತೆ ಭಕ್ತರ ಮುಖ್ಯ ಗುಣ.ವಿಸ್ಮಯಕ್ಕೆ ವಿಸ್ಮಯವೇ ಉತ್ತರ. ಬೇರೆ ಉತ್ತರಗಳಿಲ್ಲ.
ಅಖಂಡವನ್ನು ಹಿಡಿಯಬೇಕೆನ್ನುವ ನಿಟ್ಟಿನಲ್ಲಿ ಈ ಕವಿತೆಗಳಲ್ಲಿ ಕಾಣುವುದು, ನಿರ್ಮಲತೆ, ಸೌಂದರ್ಯ, ಅನಿಚ್ಚಬೋಧ (ಬದಲಾವಣೆಯೊಂದೇ ಶಾಶ್ವತ) ಶುದ್ಧಪ್ರೇಮ, ಕರುಣೆ, ಪ್ರತೀಕ್ಷೆ, ಬಂದಾನೋ ಬಾರನೋ ಎನ್ನುವ ತಳಮಳ, ಬಾಗಿಲಲ್ಲೇ ನಿಂತಿರಬಹುದೆನ್ನುವ ಕನಸು, ಅದರ ಬಗೆಗಿನ ಅಸ್ಪಷ್ಟತೆ, ಅನಿಶ್ಚತತೆ, ಅದಕ್ಕಾಗಿ ಹಂಬಲಿಸುವ ಮೊರೆ
ಅಖಂಡವಾದ ವಿಶ್ವಚೈತನ್ಯದಿಂದ ಬೇರ್ಪಟ್ಟ ವಿರಹದ ನೋವು ಮತ್ತು ಅದರೊಳಗೆ ಲೀನವಾಗುವ ಸಂಭ್ರಮ, -ಇವು ಆತ್ಮ ಪರಿವೀಕ್ಷಣೆಯ ಗುರಿಯಲ್ಲಿ ತನ್ನನ್ನೇ ತಾನು ಶೋಧಿಸಿಕೊಳ್ಳಲು ಹೊರಟ ಏಕಾಂಗಿ ದಾರಿಯಾಗಿ ಕಾಣಿಸುತ್ತದೆ. ಇಲ್ಲಿರುವುದು ಒಂಟಿದನಿ “ನನ್ನ ನಾವೆಯನ್ನು ನಾನೇ ನಡೆಸಬೇಕಿತ್ತು” ಎನ್ನುವಲ್ಲಿ ನನ್ನ ದಾರಿಯನ್ನು ನಾನೇ ನಡೆಯಬೇಕು ಎನ್ನುವ ಅರಿವಿದೆ. ಈ ಹಂಬಲದ ದಾರಿಯಲ್ಲಿ ನಿಮಗ್ನವಾಗಿ ನಡೆಯುವಾಗ ಮುತ್ತಿಕೊಳ್ಳುವ ಮಾಯಕದ ಬಗೆಯನ್ನು ಕೆಳಗಿನ ಸಾಲುಗಳು ಬಹಳ ತೀವ್ರವಾಗಿ ಹೇಳುತ್ತವೆ.
ಆ ರಾತ್ರಿ ಅವನು ಬಂದು
ನನ್ನ ಸನಿಹದಲ್ಲೇ ಕುಳಿತಿದ್ದ
ನನಗೆ ಎಚ್ಚರವೇ ಆಗಲಿಲ್ಲ
ಎಂಥಹ ಶಾಪಗ್ರಸ್ತ ನಿದ್ದೆ!
ಓ, ದುರದೃಷ್ಟವಿದು ನನಗೆ!
ಈ ಹಾದಿಯಲ್ಲಿ ನಡೆಯುವಾಗ ಅರೆಕೊರೆಗಳು, ತೊಡಕುಗಳೂ ಎಲ್ಲವೂ ಇರುವಂತಹುದೇ ಯಾವುದೂ ಪರಿಪೂರ್ಣವಲ್ಲ. “ಬಿರುಕಿಲ್ಲದ ಪೂರ್ಣತೆಯ ಹುಡುಕಾಟ ಆಹಾ !ಅದೆಷ್ಟು ವ್ಯರ್ಥ” ಯಾರೂ ಕೇಳುವವರಿಲ್ಲದ ಒಬ್ಬಂಟಿ ಹಾದಿಯಲ್ಲಿ ಪಥಿಕ ಅನಾಥ, ಅಲೆಮಾರಿ- "ಶರತ್ಕಾಲದ ಮೋಡದ ಅವಶೇಷದಂತೆ ಅನುಪಯುಕ್ತವಾಗಿ ಮುಗಿಲಲ್ಲಿ ಅಲೆಯುತ್ತಿದ್ದೇನೆ"
ಕವಿ ಪ್ರಕೃತಿಯ ಎಲ್ಲಾ ಚಟುವಟಿಕೆಗಳಲ್ಲಿ ಒಂದು ಅಖಂಡವಾದ ಸೃಷ್ಟಿಶೀಲತೆಯನ್ನು ಕಾಣುತ್ತಿದ್ದಾರೆ. ಇವು ಒಂದನ್ನೊಂದು ಛೇದಿಸುವುದಿಲ್ಲ. ಅವುಗಳು ಭೇದರೂಪವಲ್ಲ ಬದಲಾಗಿ ಅಸಂಖ್ಯ ವೈವಿಧ್ಯಗಳ ಸಾಧ್ಯತೆ.
"ಗಾಳಿಯೊಂದಿಗೆ ತೇಲಿ ಬರುವ ಗಾನದೊಳಗೆ ಮುಳುಗಿ ಹೋಗುವ ರೋಮಾಂಚನವನ್ನು" ಇವು ಉಂಟು ಮಾಡುತ್ತವೆ.
ಕವಿ ತಮ್ಮ ಚಿತ್ತವೃತ್ತಿಗಳನ್ನು ಪ್ರಕೃತಿಯ ಸೃಷ್ಟಿಶೀಲ ಚಟುವಟಿಕಗಳಿಗೆ ಆರೋಪಿಸುತ್ತಿದ್ದಾರೋ ಅಥವಾ ಪ್ರಕೃತಿಯ ಸೃಷ್ಟಿಶೀಲ ಚಟುಚಟಿಕೆಗಳೇ ಕವಿಯ ಚಿತ್ತವೃತ್ತಿಗಳನ್ನು ನಿರ್ಮಾಣಮಾಡುತ್ತಿವೆಯೋ ಎಂಬ ಶಂಕೆ ಮೂಡುತ್ತದೆ.
"ಹತಾಶೆಯಿಂದ ಆಗಸವು ನರಳುತ್ತಿದೆ" ಕಾಡುಗಳು ಎದೆಯ ಹಾಡುಗಳನ್ನು ಅಡಗಿಸಿವೆ"
ಮನುಷ್ಯ ಕೂಡ ಪ್ರಕೃತಿಯ ಭಾಗವೇ! ಆದುದರಿಂದ ಮನುಷ್ಯ ಸಂಬಂಧಗಳ ಬಗೆಗೆ ಮಾತಾನಾಡುವಾಗಲೂ ಅವರ ಈ ಅಖಂಡ ದೃಷ್ಟಿಯೇ ಕೆಲಸಮಾಡಿದೆ. ಸಮಾಜದ ನಿಮ್ನವರ್ಗದವರ ದುಡಿಮೆಯಲ್ಲಿ ದೇವರನ್ನು ಕಾಣುವ "ಅವನು.....ಬರಡು ನೆಲವ ನೇಗಿಲಿನಿಂದ ಹಸನುಗೊಳಿಸುತ್ತಿರುವವರೊಂದಿಗಿದ್ದಾನೆ" ಎನ್ನುವ ಸಾಲುಗಳು ಕುವೆಂಪು ಅವರ ಕವಿತೆಗಳನ್ನೇ ನೆನಪಿಸುತ್ತವೆ. ಭೂಮಿಯ ಮೇಲಿನ ಅಖಂಡ ಜೀವ ಜಡ ಜಾಲವನ್ನು ಏಕತ್ರಗೊಳಿಸಿ ನೋಡುವ ಅದ್ವೈತ ದೃಷ್ಟಿಯಿದು.
ಇಂತಹ ಒಂದು ವಿಶ್ವಪ್ರಜ್ಞೆಗೆ ಸಾವಿನ ಭಯವನ್ನು ಮೀರುವ ಧೈರ್ಯವಿದೆ. ಸಾವನ್ನು ಆಹ್ವಾನಿಸುವ ರೀತಿ ಅದಕ್ಕೆ ಮಾನಸಿಕವಾಗಿ ಸಿದ್ಧವಾಗುವಾಗಲೂ ಬದುಕಿನ ಧನ್ಯತೆಯ ಬಗ್ಗೆಯೇ ಹೆಚ್ಚು ಒತ್ತು ಇದೆ. ಇದು ಪರಿಪಕ್ವಗೊಂಡ ಸ್ಥಿತಿಯ ಪ್ರತೀಕವಾಗಿದೆ. ಅಹಂಕಾರದಿಂದ ಬಿಡುಗಡೆಗೊಂಡ ವಿನೀತ ಕವಿತೆಗಳಿವು.
“ಯಾವ ಪದಗಳ ವ್ಯಾಖ್ಯೆಗೂ ನಿಲುಕದ ಹರ್ಷ
ನನ್ನ ಕೊನೆಯ ಹಾಡಿನೊಂದಿಗೆ ಬೆರೆತು ಹೋಗಲಿ...”
“ನಾನು ಚುಕ್ಕಾಣಿಯನು ಕೈ ಬಿಟ್ಟಾಗಲೇ
ನನಗೆ ತಿಳಿದಿದೆ ನೀನದನ್ನು ಹಿಡಿಯುವ ಸಮಯ ಬಂದಿದೆ” ಎನ್ನುವ ಆತ್ಮ ವಿಶ್ವಾಸ ಬೆರಗು ಹುಟ್ಟಿಸುವಂತಹುದು.
“ಓ ಪ್ರೀತಿಯೇ
ಯಾಕೆ ನನ್ನನ್ನಿನ್ನೂ ಬಾಗಿಲ ಬಳಿಯೇ
ಒಂಟಿಯಾಗಿ ಕಾಯುವಂತೆ ಮಾಡುತ್ತಿರುವೆ?”
“ನೀನು ಮಾತನಾಡದಿದ್ದರೆ
ನಿನ್ನ ಮೌನವನು ಹೃದಯದೊಳಗೆ ತುಂಬಿಕೊಳ್ಳುತ್ತೇನೆ”
“ಅಮ್ಮಾ, ನನ್ನ ಕಣ್ಣೀರಿನ ಮುತ್ತುಗಳಿಂದ ಮಾಡಿದ
ಮಾಲೆಗಳಿಂದ ನಿನ್ನ ಕತ್ತನಲಂಕರಿಸುವೆ” (ಇಲ್ಲಿ ತ್ಯಾಗರಾಜರು ಬಿಂದುಮಾಲಿನಿ ರಾಗದಲ್ಲಿ ರಚಿಸಿದ ಕೀರ್ತನೆಯ ನೆನಪಾಗುತ್ತಿದೆ)
ವಿಶ್ವಪ್ರಜ್ಞೆಯ ಭಾಗವಾಗಬೇಕೆನ್ನುವ ಮೊರೆಯನ್ನು ಹೊತ್ತ ಈ ಎಲ್ಲಾ ಕವಿತೆಗಳು ಹೀಗೆ ಎಷ್ಟು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ! ನಾನು ಟಾಗೋರ್ ಕವಿತೆಗಳನ್ನು ಇಂಗ್ಲಿಷಿನಲ್ಲಿ ಓದಿದ್ದೆ. ಕನ್ನಡದಲ್ಲಿ ಅವುಗಳನ್ನು ಓದುವ ಸುಖವೇ ಬೇರೆ! Later poems of Tagore ನ್ನು ಡಿ.ಆರ್. ಎನ್ ಮೇಷ್ಟ್ರು ಪಾಠ ಮಾಡುತ್ತಿದ್ದರು. ಸುಧಾ ಅವರ ಪುಸ್ತಕವನ್ನು ಓದುವಾಗ ನನಗೆ ಅವರದೇ ನೆನಪು ! ಬಹಳ ಆಪ್ತವಾಗಿ ತಟ್ಟಿದ್ದು, ಈ ಕವಿತೆಗಳ ಅತಿಯಾದ ಅಲಂಕಾರಗಳಿಂದ ಹೊರತಾದ ಸರಳವಾದ ಭಾಷೆ. ಇದಕ್ಕಾಗಿ ಸುಧಾ ಅವರನ್ನು ಅಭಿನಂದಿಸುತ್ತೇನೆ.
ಓದಿನ ಸುಖ ಕೊಡುವುದು ಅನುವಾದ ಸರಾಗವಾಗಿ ಓದಿಸಿಕೊಂಡು ಹೋದಾಗ ಮಾತ್ರ! ಬಳಸುವ ನುಡಿಗಟ್ಟುಗಳು, ಪ್ರತಿಮೆ ಅಲಂಕಾರಗಳು ಕನ್ನಡದ್ದೇ ಎಂದೆನಿಸಬೇಕು. ಗೆಳತಿ ಸುಧಾ ಅಂತಹ ಕೆಲಸವನ್ನು ಬಹಳ ಸಮರ್ಥವಾಗಿ ಸಮಗ್ರವಾಗಿ ಮಾಡಿದ್ದಾರೆ. ಎಲ್ಲಿಯೂ ಅನುವಾದದ ವಾಸನೆ ಹತ್ತಿಲ್ಲ. ಇಲ್ಲಿ ಮೆರೆಯುವುದು ಕನ್ನಡದ ಗಂಧವತಿ. ಟಾಗೋರರ ಕವಿತೆಗಳ ಬಗ್ಗೆ ಸುಧಾ ಅವರಿಗೆ ಇರುವ ಅದಮ್ಯ ಪ್ರೀತಿ ವ್ಯಕ್ತವಾಗುತ್ತದೆ. ಅವರು ಹೇಳಿ ಕೇಳಿ ಗಣಿತದ ಅಧ್ಯಾಪಕಿ. ಅಂತಹವರು ಎಲ್ಲಿಯೂ ಕನ್ನಡದ ಗಂಧ ಮಾಸದ ಹಾಗೆ ಅನುವಾದಿಸಿರುವುದು, ಅನುವಾದದ ಸುಳಿವೂ ಸಿಕ್ಕದಂತೆ ಅನನ್ಯವಾಗಿ ಕನ್ನಡಕ್ಕೆ ತಂದಿರುವುದು ಅಚ್ಚರಿಯ ಸಂಗತಿ.
ನನ್ನ ಮೇಲಿನ ಪ್ರೀತಿಯಿಂದ ಪುಸ್ತಕವನ್ನೂ ಕಳುಹಿಸಿದ್ದಾರೆ. ಅವರಿಗೆ ಶುಭಾಶಯಗಳು ಮತ್ತು ಧನ್ಯವಾದಗಳು.
ಬಾಂಬೇ ಬೋರ್ಡ್......
ಅಯ್ಯಯ್ಯೋ ಇವಳನ್ಯಾರ್ರೀ ಇಷ್ಟು busy board ನಲ್ಲಿ ಕೂರಿಸಿರೋದು? 'ಪ್ರಭಾದೇವಿ' ( ಬಾಂಬೆಯ ಒಂದು ಸಬ್ ಟೆಲಿಫೋನ್ ಎಕ್ಸ್ ಛೇಂಜ್ ಆಪರೇಟರ್)
ಬೊಂಬಡಾ ಬಜಾಯಿಸ್ತಿದ್ದಾನೆ. ನಿಮ್ಮ ಬಾಂಬೆ ಬೋರ್ಡ್ ಹುಡುಗಿ ಸರಿಯಾಗಿ answer ಮಾಡ್ತಿಲ್ಲಾಂತ" ಎಂದು ಕರ್ರಗಿನ ಮಾನಿಟರ್ ( ಸೂಪರ್ವೈಸರ್) ಒಬ್ಬಳು ನನ್ನ ಬಳಿಗೆ ಬಂದು " ಏಳು, ನಿನ್ನ ಸ್ಟಾಫ್ ನಂ ನೋಡಿದ್ರೆ ತುಂಬಾ ಸೀನಿಯರ್ರು...ಆದ್ರೆ ಒಂದು ಕೆಲಸಾನೂ ನೆಟ್ಟಗೆ ಮಾಡೋಕೆ ಬರೋಲ್ಲ...ಹೋಗ್ ಬುಕಿಂಗ್ ನಲ್ಲಿ 'ಕೂದುಕೋ" ಎಂದು ನನ್ನ ತೋಳು ಹಿಡಿದು ಎಬ್ಬಿಸಿದಳು. ಇನ್ನೊಂದು ಬೋರ್ಡಿನಲ್ಲಿದ್ದವಳನ್ನು ನನ್ನ ಜಾಗದಲ್ಲಿ ಕೂರಿಸಿದಳು.
ಇದು (೧೯೮೧-೮೪) ಬೆಂಗಳೂರಿನಲ್ಲಿ ನಾನು ಟ್ರಂಕ್ ಎಕ್ಸ್ ಛೇಂಜ್ ಗೆ ಸೇರಿದ ಹೊಸತರಲ್ಲಿ ನಡೆದ ಕಥೆ.
ಆ ಮಾನಿಟರ್ ಕನ್ನಡದವಳಾಗಿರಲಿಲ್ಲ. ಹೀಗಾಗಿ ಕನ್ನಡದ ನಾಲಗೆಯಲ್ಲಿ ಮಾತನಾಡುತ್ತಿರಲಿಲ್ಲ.
ಬುಕ್ಕಿಂಗ್ ಆಗಲೀ ( 180), ಸಹಾಯ ಕರೆಗಾಗಲೀ (181), ವಿಚಾರಣಾ ಕರೆಗಾಗಲೀ (183), ರಿಸೀವರ್ ಎತ್ತಿದಾಕ್ಷಣ ಯಾವ ಆಪರೇಟರ್ರೂ ಹಲೋ ಎಂದು ಸ್ವಾಗತಿಸುವ ಹಾಗಿರಲಿಲ್ಲ. "Trunk Booking pls", " Trunk Assistance", Trunk Enquiry" ಎಂದೇ ಹೇಳಬೇಕಿತ್ತು ಟ್ರೈನಿಂಗ್ ವೇಳೆಯಲ್ಲೇ, ಯಾವ ಸಂದರ್ಭಕ್ಕೆ ಗ್ರಾಹಕರ ಜೊತೆ ಹೇಗೆ ಮಾತನಾಡಬೇಕು ಎಂಬ ಸಭ್ಯತೆಯ ೪೦-೫೦ ವಾಕ್ಯಗಳನ್ನು ( Standard Expressions) ಉರುಹೊಡೆಸಲಾಗುತ್ತಿತ್ತು. ಅದರ ಮೇಲೆ ಪರೀಕ್ಷೆ ಬೇರೇ ಇರುತ್ತಿತ್ತು.
ಹಲೋ ಎನ್ನುವ ಅಭ್ಯಾಸವಾದರೂ ನಮಗೆ ಎಲ್ಲಿ ಬರಬೇಕು? ಎಂಬತ್ತರ ದಶಕದ ಪ್ರಾರಂಭದಲ್ಲಿ, ಸರ್ಕಾರಿ ಮತ್ತು ಪಬ್ಲಿಕ್ ಸೆಕ್ಟರ್ ಗಳ ಕಚೇರಿಗಳನ್ನು ಬಿಟ್ಟರೆ, ಶ್ರೀಮಂತರ ಹಾಗೂ ದೊಡ್ಡ ಅಧಿಕಾರಿಗಳ ಮನೆಗಳಲ್ಲಿ ಮಾತ್ರ ಫೋನ್ ಇರುತ್ತಿತ್ತು.
ಬುಕ್ಕಿಂಗ್ ನಲ್ಲಿ ಕುಳಿತಿದ್ದೆ. ಕಿವಿಗೆ ಭಾರವಾದ ಇಯರ್ ಫೋನ್ ಹಾಕಿಕೊಂಡರೆ ಕಿವಿ ನೋಯುತ್ತಿತ್ತು. ಅಷ್ಟು ಹೊತ್ತಿಗೆ ಅದೇ ಮಾನಿಟರ್ ಬಂದು
" ಹೋಗು A.E. ನಿನ್ನಾ ಕರೀತಿದ್ದಾರೆ" ಎಂದಳು. ಅಂದರೆ ಆಗಲೇ A.E ಅವರ ಬಳಿಗೆ ನನ್ನ ಮೇಲೆ ತಕರಾರು ಹೋಗಿದೆ ಎಂದಾಯಿತು! ಹೆದರಿಕೊಂಡೇ ಒಳಗೆ ಹೋದೆ. ಯಾರ ಬಳಿಯೋ ಫೋನಿನಲ್ಲಿ ಮಾತನಾಡುತ್ತಿದ್ದವರು, ಅದನ್ನು ಮುಗಿಸಿ ನನ್ನನ್ನು ನೋಡಿ " what's your problem?" ಎಂದು ಅಸಮಾಧಾನದಿಂದ ಕೇಳಿದರು.
" sir, I cannot handle.... Bombay board. Its very busy, I am new to ....." ಎಂದು ತಡವರಿಸಿ ಹೇಳುತ್ತಿರುವಂತೆಯೇ "ನೀನು ಹೋಗಬಹುದು" ಎಂದು ಬಾಗಿಲತ್ತ ಕೈ ತೋರಿಸಿದರು. ಇನ್ನೊಮ್ಮೆ ಹೀಗೇ ಆದರೆ ನೀನು reminder ತೆಗೆದುಕೊಳ್ಳಬೇಕಾಗುತ್ತದೆ ಎಂದೂ ಎಚ್ಚರಿಸಿದರು.
ಅಂದು ಆಷಾಢ ಶುಕ್ರವಾರ ಅಮ್ಮ ವಿಶೇಷ ಪೂಜೆ ಮಾಡಿ ತುಂಡು ಮಲ್ಲಿಗೆ ಹೂವನ್ನು ಮುಡಿದುಕೊಳ್ಳಲು ಕೊಟ್ಟರು. "ಇವೊತ್ತು ..ಹಬ್ಬ ಹೋಗಲೇಬೇಕಾ?" ಎಂದವರೇ ನನ್ನ ಉತ್ತರವನ್ನು ಊಹಿಸಿದವರಂತೆ "ಹೋಗ್ಲಿ ಒಂದು ಹೊಸ ಸೀರೇನಾದ್ರೂ ಉಟ್ಕೊಂಡು ಹೋಗೇ" ಎಂದು ಬೇತುಕೊಂಡರು.
ಟ್ರಂಕ್ ರೂಂ ಹೊಕ್ಕವಳೇ ಹಾಜರಿ ಪುಸ್ತಕ ದಲ್ಲಿ ಸಹಿ ಮಾಡಲೆಂದು ಮೇಜಿನ ಬಳಿ ಹೋದೆ. ನನ್ನ ಗ್ರಹಚಾರ!!ಅದೇ ಕರಿಮೂತಿ ಮಾನಿಟರ್ ಅಲ್ಲಿ ಕೂತಿದ್ದಳು. ಅವಳಿಗೂ ನನ್ನದೇ ಡ್ಯೂಟಿ. ಸಹಿ ಹಾಕಲು ಲೆಡ್ಜರ್ ಎಳೆದುಕೊಳ್ಳುವಾಗ, " ಓಹೋಹೋ, ಏನಿವತ್ತು ಹೂವ ಎಲ್ಲ ಮುಡ್ಕಂಬಿಟ್ಟಿದ್ಯಾ !!! ಹೊಸ ಸೀರೇ ಬೇರೆ" ಎಂದು ಹಲ್ಕಿರಿಯುತ್ತಾ " ನಿನ್ ಗಂಡ ಬಂದಿದಾನಾ? ಎಂದು ಕಣ್ಣು ಹೊಡೆದಳು...." ನನ್ನ ಮೂಗಿನ ಹತ್ತಿರ ಮುಖ ತರುತ್ತಾ ಯಾವುದೋ ಪೋಲಿ ಜೋಕ್ ಹೊಡೆದಳು. ಅವಳ ಕೆನ್ನೆಗೆ ಬಾರಿಸುವಷ್ಟು ಬಂದ ಕೋಪವನ್ನು ತಡೆದುಕೊಂಡೆ, ನನ್ನ ಮೇಲಧಿಕಾರಿಯಲ್ಲ? "ನಾಚ್ಕೆ ನೋಡು ಹುಡ್ಗೀಗೆ" ಎಂದು ತನ್ನ ಜೋಕಿಗೆ ತಾನೇ ನಗುತ್ತಾ ನನ್ನ ಸೋಟೆ ತಿವಿದಳು.
ಮುಂದುವರೆಯುವುದು.....
Subscribe to:
Post Comments (Atom)
No comments:
Post a Comment